ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರದ ವರ್ಷಾಚರಣೆ: ಜನತೆಗೆ ರಿಪೋರ್ಟ್‌ ಕಾರ್ಡ್ ನೀಡಿದ ಬಿಎಸ್‌ವೈ

ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿವಿಧಾನಸೌಧ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿಮೊದಲಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದ ವಿವಿಧ ಜಿಲ್ಲೆಗಳಜನರೊಂದಿಗೆ ಸಂವಾದ ನಡೆಸಿ ಮಾತನಾಡಿದರು.

ಬಿ.ಎಸ್‌.ಯಡಿಯೂರಪ್ಪ ಭಾಷಣದ ಮುಖ್ಯಾಂಶಗಳು

* ರಾಜ್ಯದ ಜನತೆಗೆ ಸುಭದ್ರ ಸರ್ಕಾರ ಹಾಗೂ ಸರ್ವಾಂಗೀಣ ಅಭಿವೃದ್ಧಿ ನಮ್ಮ ಗುರಿ. ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಅಭಿವೃದ್ಧಿ ಕೆಲಸಗಳು ನಿಂತಿಲ್ಲ. ಇದಕ್ಕೆ ಸಹಕರಿಸಿದ ಶಾಸಕರು, ಸಚಿವರು ಪ್ರತಿಪಕ್ಷ ನಾಯಕರಿಗೆ ಅಭಿನಂದನೆಗಳು.

* ಕೊರೊನಾ ಸಂಕಷ್ಟ ಇಲ್ಲದಿದ್ದರೆ ರಾಜ್ಯ ಮತ್ತಷ್ಟು ಅಭಿವೃದ್ಧಿ ಕೆಲಸಗಳಾಗುತ್ತಿತ್ತು. ಅಧಿಕಾರಕ್ಕೆ ಬಂದ ಆರಂಭದಲ್ಲಿ ರಾಜ್ಯದ ಹಲವು ಕಡೆ ಅತಿವೃಷ್ಟಿ ಉಂಟಾಗಿತ್ತು. ಏಕಾಂಗಿಯಾಗಿ ಅಗ್ನಿ ಪರೀಕ್ಷೆ ಎದುರಿಸಿ ಜನರ ಕಷ್ಟಕ್ಕೆ ಸ್ಪಂದಿಸಿದ್ದೇನೆ

* ಕಿಸಾನ್ ಸಮ್ಮಾನ್ ಯೋಜನೆಯಡಿ 50 ಲಕ್ಷ ರೈತರಿಗೆ ತಲಾ ನಾಲ್ಕು ಸಾವಿರ ರೂ ನೀಡಲಾಗುತ್ತಿದೆ. ರೈತರು ಹಾಗೂ ನೇಕಾರರು ನಮ್ಮ ಸರ್ಕಾರದ ಎರಡು ಕಣ್ಣುಗಳಿದ್ದಂತೆ ಎಂದು ಬಿಎಸ್‌ವೈ ತಿಳಿಸಿದರು.

* ದಲಿತರ ‌ಮನೆಗಳಿಗೆ ಭೇಟಿ‌‌ ನೀಡಿ ಅವರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ‌ ಮಾಡಲಾಗಿದೆ. ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಪ್ರತಿ ಬಡವರಿಗೂ ಸೂರು ಒದಗಿಸುವ ಗುರಿ ನಮ್ಮದಾಗಿದೆ ಎಂದು ಸರ್ಕಾರದ ಸಾಧನೆಗಳ ಬಗ್ಗೆ ತಿಳಿಸಿದರು.

* ಎಪಿಎಂಸಿ ಕಾಯ್ದೆ ತಿದ್ದುಪಡಿ ಬಗ್ಗೆ ಟೀಕೆಗಳು ಬಂದರೂ ರೈತರಿಗೆ ಅನುಕೂಲ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ.

* ಹೊಸ ಕೈಗಾರಿಕಾ ‌ನೀತಿ ಜಾರಿ ಮಾಡಲಾಗುತ್ತಿದೆ. ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ೧೦೮ ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ವಿಮಾನ ನಿಲ್ದಾಣದ ಬಳಿ ನಿರ್ಮಾಣ ಮಾಡಲಾಗುತ್ತಿದೆ.

* ದಿವಂಗತ ಅನಂತಕುಮಾರ್ ಕನಸಿನ ಸಬ್‌ ಅರ್ಬನ್ ರೈಲು ಯೋಜನೆಗೆ‌ ಹೆಚ್ಚಿನ ಒತ್ತು ನೀಡಲಾಗಿದೆ. ರಸ್ತೆಗಳ ಅಭಿವೃದ್ಧಿ ಹಾಗೂ 970 ಕಿಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಾಡಲಾಗುತ್ತಿದೆ.

* ನೀರಾವರಿ ಯೋಜನೆಗೆ ಆದ್ಯತೆ ನೀಡಲಾಗಿದೆ. ‌ಮಹಾದಾಯಿ‌ ಜಲ ವಿವಾದ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಮೇಕೆ ದಾಟು ಯೋಜನೆ ಜಾರಿಗೆ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ.

* ಬೆಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಮುಂದಿನ ಮೂರು ವರ್ಷದಲ್ಲಿ ಬೆಂಗಳೂರು ಮಾದರಿ ನಗರವಾಗಿ ಹೊರ ಹೊಮ್ಮಲಿದೆ.

* ಡಾ.ನಂಜುಂಡಪ್ಪ ವರದಿ ಜಾರಿಗೆ ಒತ್ತು ನೀಡುವ ಮೂಲಕ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿ ನಮ್ಮ ಸರ್ಕಾರದ ಗುರಿಯಾಗಿದೆ.

* ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಹೇರಳ ಅವಕಾಶವಿದೆ.‌ ಕೆಮ್ಮಣ್ಣುಗುಂಡಿ, ಜೋಗ, ನಂದಿಬೆಟ್ಟ ಸೇರಿ ಪ್ರಮುಖ ಸ್ಥಳಗಳ ಅಭಿವೃದ್ಧಿ ಮಾಡಲಾಗುವುದು.

* ನಾನು ದ್ವೇಷದ ರಾಜಕಾರಣ ಮಾಡಿಲ್ಲ.‌ ಸರ್ಕಾರದ ವಿರುದ್ದ ಟೀಕೆ ಟಿಪ್ಪಣಿ ಮಾಡುವವರನ್ನು ನಾನು ಸ್ನೇಹದಿಂದಲೇ ನೋಡಿದ್ದೇನೆ.‌ ಕಳೆದ ಲೋಕಸಭಾ ಚುನಾವಣೆಯಲ್ಲಿ ೨೫ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇವೆ. ಇದರ ಹಿಂದೆ ನಮ್ಮ ಕಾರ್ಯಕರ್ತರ ಶ್ರಮ‌ ಅಪಾರವಾಗಿದೆ.

* ರಾಜ್ಯದಲ್ಲಿ ಲಾಕ್‌ಡೌನ್ ಚರ್ಚೆ ಮಾಡಲ್ಲ.‌ ಕೊರೊನಾ ಜತೆ ಬದುಕುವುದು ಕಲಿಯಬೇಕಿದೆ.‌ ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕು.‌ ಆ ಮೂಲಕ ಆರ್ಥಿಕ ಕ್ರೂಢೀಕರಣಕ್ಕೆ ಆದ್ಯತೆ ನೀಡಬೇಕಿದೆ.

* ರಾಜ್ಯದ ಜನರ ಅಪಾರ ಋಣ ನಮ್ಮ ಮೇಲಿದೆ. ಕೊರೊನಾ ಬಾರದಿದ್ದರೆ ಅಭಿವೃದ್ಧಿ ಕಾರ್ಯ ವೇಗವಾಗಿ ನಡೆಯುತ್ತಿತ್ತು. ಆದರೂ ನಾವು ಧೃತಿಗೆಡದೆ ನಮ್ಮ ಕೆಲಸ ಮುಂದುವರೆಸಿದ್ದೇವೆ.

***

ಸರ್ಕಾರದ ವರ್ಷಾಚರಣೆ: ಕಾರ್ಯಕ್ರಮ ನೇರಪ್ರಸಾರ ವೀಕ್ಷಿಸಿದ ವಿವಿಧ ಜಿಲ್ಲೆಗಳಜನ

ಬೀದರ್: ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ವರ್ಷಾಚರಣೆ ನೇರ ಪ್ರಸಾರ ವೀಕ್ಷಣೆ ಕಾರ್ಯಕ್ರಮ ಸೋಮವಾರ ಇಲ್ಲಿನ ಜಿಲ್ಲಾ ರಂಗ ಮಂದಿರದಲ್ಲಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರು ' ಸವಾಲುಗಳ 1 ವರ್ಷ ಪರಿಹಾರದ ಸ್ಪರ್ಶ' ಪುಸ್ತಕ ಬಿಡುಗಡೆ ಮಾಡಿದರು. ವಿಧಾನ ಪರಿಷತ್ ಸದಸ್ಯ ರಘುನಾಥ್ ಮಲ್ಕಾಪುರೆ. ಜಿಲ್ಲಾಧಿಕಾರಿ ರಾಮಚಂದ್ರನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ, ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಇದ್ದರು.

***

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿಗೆ ಸಂಪೂರ್ಣ ನೀರಾವರಿ ಸೌಲಭ್ಯ ಕಲ್ಪಿಸುವಂತೆ ರೈತ ಮಹಿಳೆ ವಸಂತಕುಮಾರಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದರು.

ರಾಜ್ಯ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯೊಂದಿಗೆ ಸೋಮವಾರ ಏರ್ಪಡಿಸಿದ್ದ ನೇರ ಸಂವಾದ ಸಮಾರಂಭದಲ್ಲಿ ಮಹಿಳೆ ಮಾತನಾಡಿದರು. ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಬಿಡುಗಡೆ ಮಾಡಿದ ಬೆಳೆ ಪರಿಹಾರ ತ್ವರಿತವಾಗಿ ತಲುಪಿಸುವಂತೆ ಕೋರಿದರು.

ಲಾಕ್ ಡೌನ್ ಸಂದರ್ಭದಲ್ಲಿ ಈರುಳ್ಳಿ ಬೆಳೆ ಮಾರಾಟ ಮಾಡಲು ಸಾಧ್ಯವಾಗದ ರೈತ ಮಹಿಳೆ, ಸಾಮಾಜಿಕ ಜಾಲತಾಣದಲ್ಲಿ ಸಂಕಷ್ಟ ತೋಡಿಕೊಂಡಿದ್ದರು. ಯಡಿಯೂರಪ್ಪ ಅವರೇ ಖುದ್ದು ದುರುವಾಣಿ ಕರೆ ಮಾಡಿ ಈರುಳ್ಳಿಗೆ ಮಾರುಕಟ್ಟೆ ಒದಗಿಸುವ ಆಶ್ವಾಸನೆ ನೀಡಿದ್ದರು. ತೋಟಗಾರಿಕೆ ಇಲಾಖೆ ರೈತ ಮಹಿಳೆಯ ಬೆಳೆಗೆ ಮಾರುಕಟ್ಟೆ ಕಲ್ಪಿಸಿದ್ದರು.

'ಈರುಳ್ಳಿ ಕೈಸೇರಿದಾಗ ತುಂಬಾ ಸಂತೋಷವಾಗಿತ್ತು. ಆದರೆ, ಲಾಕ್ ಡೌನ್ ಸಂದರ್ಭದಲ್ಲಿ ಮಾರುಕಟ್ಟೆಗೆ ಈರುಳ್ಳಿ ಸಾಗಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದೆವು. ಸರ್ಕಾರ ಸ್ಪಂದಿಸಿದ ರೀತಿಗೆ ಅಭಾರಿಯಾಗಿದ್ದೇನೆ. ನೀವು (ಯಡಿಯೂರಪ್ಪ) ರೈತ ನಾಯಕ ಎಂಬುದು ಮತ್ತೊಮ್ಮೆ ಸಾಭೀತು ಮಾಡಿದ್ದೀರಿ' ಎಂದು ಹಿರಿಯೂರು ತಾಲ್ಲೂಕಿನ ಕಾಟನಾಯಕನಹಳ್ಳಿಯ ರೈತ ಮಹಿಳೆ ವಸಂತಕುಮಾರಿ ಕೃತಜ್ಞತೆ ಸಲ್ಲಿಸಿದರು.

'ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯುತ್ತಿಲ್ಲ. ಹೀಗಾಗಿ, ನೀರಾವರಿ ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ' ಎಂದು ಮನವಿ ಮಾಡಿದರು.

ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಕೆ.ಪೂರ್ಣಿಮಾ ಭಾಗವಹಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಗೈರು ಹಾಜರಾಗಿದ್ದರು.

***

ಬೆಳಗಾವಿ: ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ವರ್ಷಾಚರಣೆ ವಿಧಾನಸೌಧದಲ್ಲಿ ನಡೆಯುತ್ತಿದ್ದು, ಕಾರ್ಯಕ್ರಮವನ್ನು ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನೇರಪ್ರಸಾರ ಮಾಡಲಾಗುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ದುರ್ಯೋಧನ ಐಹೊಳೆ, ಮಹೇಶ ಕುಮಠಳ್ಳಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ, ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದಾರೆ.

ವರ್ಷದ ಸಾಧನೆಯ ಹೊತ್ತಿಗೆಯನ್ನು ರಮೇಶ ಜಾರಕಿಹೊಳಿ ಬಿಡುಗಡೆ ಮಾಡಿದರು.

***

ಚಾಮರಾಜನಗರ: ಬಿಜೆಪಿ ಸರ್ಕಾರಕ್ಕೆ‌ ಒಂದು ವರ್ಷ ಸಂದಿರುವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ‌ ನಡೆಯುತ್ತಿರುವ ಕಾರ್ಯಕ್ರಮದ ನೇರಪ್ರಸಾರ ವೀಕ್ಷಣೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ವ್ಯವಸ್ಥೆ ಮಾಡಿದೆ. ಜಿಲ್ಲಾಪಂಚಾಯಿತಿಯ ಬಿಜೆಪಿ ಸದಸ್ಯರು, ಜಿಲ್ಲಾಧಿಕಾರಿ‌ ಡಾ.ಎಂ.ಆರ್.ರವಿ, ಜಿಲ್ಲಾ ಪಂಚಾಯತಿ ಸಿಇಒ ಹರ್ಷಲ್ ಭೋಯರ್ ನಾರಾಯಣ ರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದಾರೆ.

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT