ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ತಂದೊಡ್ಡಿದ ಸವಾಲು l ಅಂಗವಿಕಲರಿಗೆ ಸಿಗದ ನೆರವು

ಅಂಧರ ಬಾಳಿಗೆ ಮತ್ತಷ್ಟು ಕಷ್ಟ
Last Updated 3 ಆಗಸ್ಟ್ 2020, 22:47 IST
ಅಕ್ಷರ ಗಾತ್ರ

ಬೆಂಗಳೂರು: ತಮ್ಮ ಪಾಲಿನ ನೆರವಿನ ಹಸ್ತವನ್ನೇ ಕೋವಿಡ್‌ತುಂಡರಿಸಿದ್ದು, ಸಂಕಷ್ಟದ ಸಮಯದಲ್ಲಿಸರ್ಕಾರ ಕೂಡ ನೆರವಿಗೆ ಧಾವಿಸದೆ ಇರುವುದು ಬದುಕಿನ ಬವಣೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಅಂಗವಿಕಲರು ಅಳಲು ತೋಡಿಕೊಂಡಿದ್ದಾರೆ.

‘ಕೊರೊನಾ ಸೋಂಕು ಹರಡದಂತೆ ಅಂತರ ಕಾಯ್ದುಕೊಳ್ಳಬೇಕು ಎಂಬುದು ಅಂಧರ ಪಾಲಿಗೆ ಮತ್ತಷ್ಟು ಕತ್ತಲು ಆವರಿಸಿದ ಅನುಭವ ಆಗುತ್ತಿದೆ. ಕೈ ಹಿಡಿದು ರಸ್ತೆ ದಾಟಿಸುತ್ತಿದ್ದ ಜನ ಇಂದು ಸಂಪೂರ್ಣ ಇಲ್ಲವಾಗಿದ್ದಾರೆ’ ಎಂದು ನೋವು ತೋಡಿಕೊಳ್ಳುತ್ತಾರೆ ಅಂಧರು.

‘ಒಂದೆಡೆಯಿಂದ ಮತ್ತೊಂದೆಡೆ ಸಾಗಲು ಸಾರ್ವಜನಿಕ ಸಾರಿಗೆ ಬಳಸುವುದು ನಮಗೆ ಅನಿವಾರ್ಯ. ಬಸ್ ಹತ್ತುವಾಗ, ಇಳಿಯುವಾಗಲೂ ಜನ ಸಹಾಯ ಮಾಡುತ್ತಿದ್ದರು. ನಮ್ಮಿಂದ ಅವರಿಗೆ ಅಥವಾ ಅವರಿಂದ ನಮಗೆ ಸೋಂಕು ಹರಡುವ ಸಾಧ್ಯತೆ ಇರುವ ಕಾರಣಯಾರ ಸಹಾಯ ಕೇಳುವುದೂ ಕಷ್ಟವಾಗಿದೆ’ ಎನ್ನುತ್ತಾರೆ ಅಂಗವಿಕಲರಾದ ಸುರೇಶ್.

‘ಸ್ವಾವಲಂಬನೆಯಿಂದ ಬದುಕ ಬೇಕು ಎಂಬ ಕಾರಣಕ್ಕೆ ಬೀದಿ ಬದಿ ವ್ಯಾಪಾರ, ರೈಲುಗಳಲ್ಲಿ ಸಣ್ಣ ಪುಟ್ಟ ವಸ್ತುಗಳ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೆವು. ಅದೆಲ್ಲವೂ ಈಗ ಬಂದ್ ಆಗಿದೆ’ ಎನ್ನುತ್ತಾರೆ ಅವರು.

‘ವಿವಿಧ ಸಂಸ್ಥೆಗಳಲ್ಲಿ ಆಶ್ರಯ ಪಡೆದಿದ್ದ ಅಂಗವಿಕಲ ಮಕ್ಕಳನ್ನು ಈಗ ಮನೆಗೆ ಕಳಹಿಸಲಾಗಿದೆ.ವೃತ್ತಿಪರ ಚಟುವಟಿಕೆಗಳು, ಯೋಗ, ಕ್ರೀಡೆ, ನೃತ್ಯ, ಚಿತ್ರಕಲೆ ಮುಂತಾದವುಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಸಾಧ್ಯವಾಗದೆ ಮನಸಿಕವಾಗಿಯೂ ಕುಗ್ಗಿದ್ದಾರೆ’ ಎಂದು ಮಂಜುನಾಥ್ ಹೇಳುತ್ತಾರೆ.

‘ಇನ್ನು ಸೋಂಕಿಗೆ ತುತ್ತಾದ ಅಂಗವಿಕಲರ ಪಾಡಂತೂ ಹೇಳ ತೀರದಾಗಿದೆ. ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಒಬ್ಬಂಟಿಯಾಗಿ ನಿತ್ಯಕರ್ಮ ಮುಗಿಸಿಕೊಳ್ಳಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ನಿಗದಿತ ಸ್ಥಳದಲ್ಲಿ ಇರಿಸುವ ಊಟ, ಉಪಾಹಾರ ಪಡೆಯಲು ಸಾಧ್ಯವಾಗದೆ, ಸಮಸ್ಯೆಯನ್ನು ಯಾರ ಬಳಿ ಹೇಳಿಕೊಳ್ಳಲೂ ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ಕೊರೊನಾ ಸೋಂಕು ನಮ್ಮಂತವರ ಪಾಲಿಗೆ ನರಕವನ್ನೇ ಕಣ್ಮುಂದೆ ತರಿಸಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಸಮಿತಿಗೂ ಕಾಳಜಿ ಇಲ್ಲ’

‘ಕಷ್ಟದಲ್ಲಿರುವ ಹಲವರಿಗೆ ಧನ ಸಹಾಯವನ್ನು ಸರ್ಕಾರ ನೀಡಿದೆ, ಆದರೆ ಅಂಗವಿಕಲರು ಮಾತ್ರ ಸರ್ಕಾರಕ್ಕೂ ಬೇಡವಾಗಿದ್ದೇವೆ’ ಎಂದು ಕರ್ನಾಟಕ ರಾಜ್ಯ ಸರ್ಕಾರಿಅಂಧ ನೌಕರರ ಸಂಘದ ಅಧ್ಯಕ್ಷ ರಮೇಶ್‌ ಶಂಕರರೆಡ್ಡಿ ಹೇಳಿದರು.

‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅಂಗವಿಕಲರು ಮತ್ತು ಅಂಧರ ಸಂಕಷ್ಟದ ಬಗ್ಗೆ ಆಲೋಚನೆಯನ್ನೇ ಮಾಡಿಲ್ಲ. ಕರ್ನಾಟಕ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸಭೆ ಇದೇ 13 ರಂದು ಕರೆಯಲಾಗಿದೆ. ಅಜೆಂಡಾದಲ್ಲಿ ಈ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ. ಸರ್ಕಾರಕ್ಕೆ ನಮ್ಮ ಸಮಸ್ಯೆ ಮನವರಿಕೆ ಮಾಡಿಕೊಡಬೇಕಾದವರೇ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT