ಬುಧವಾರ, ಜುಲೈ 28, 2021
20 °C

ಡಿನೋಟಿಫೈ ಪ್ರಕರಣ: ಸೋಮಣ್ಣ ಖುಲಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅಕ್ರಮ ಡಿನೋಟಿಫೈ ಆರೋಪಕ್ಕೆ ಸಂಬಂಧಿಸಿದಂತೆ ವಸತಿ ಸಚಿವ ವಿ.ಸೋಮಣ್ಣ ಹಾಗೂ ಅವರ ಪತ್ನಿ ಶೈಲಜಾ ಅವರ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಕೈಬಿಟ್ಟಿದೆ.

ಸೋಮಣ್ಣ ಹಾಗೂ ಅವರ ಪತ್ನಿಯ ವಿರುದ್ಧ ತನಿಖೆಯನ್ನು ಮುಂದುವರಿಸದಂತೆ 2017ರಲ್ಲಿ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ, ರಾಜ್ಯ ಲೋಕಾಯುಕ್ತ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈಗ ಲೋಕಾಯುಕ್ತ ಪೊಲೀಸರೇ ವಿಚಾರಣೆಯನ್ನು ಮುಂದುವರಿಸದಂತೆ ಮನವಿ ಮಾಡಿದ್ದರಿಂದ, ಕೋರ್ಟ್‌ ಪ್ರಕರಣವನ್ನು ಮುಕ್ತಾಯಗೊಳಿಸಿದೆ.

ನ್ಯಾಯಮೂರ್ತಿಗಳಾದ ಸಂಜಯ್‌ ಕಿಷನ್‌ ಕೌಲ್‌ ಹಾಗೂ ಎಂ.ಆರ್‌.ಶಾ ಅವರಿದ್ದ ಪೀಠ, ‘ಇನ್ನು ಈ ಪ್ರಕರಣ ನಿರರ್ಥಕವಾಗಿದ್ದು, ಕೈಬಿಡಲಾಗಿದೆ’ ಎಂದು ಹೇಳಿತು.

ನಾಗದೇವನಹಳ್ಳಿ ವ್ಯಾಪ್ತಿಯ ಸರ್ವೆ ನಂ.77 ಮತ್ತು 78ರಲ್ಲಿ 22 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪ ಸೋಮಣ್ಣ ಅವರ ಮೇಲಿತ್ತು. ‘ಜ್ಞಾನಭಾರತಿ ಬಡಾವಣೆಯ ಅಭಿವೃದ್ಧಿಗಾಗಿ ಬಿಡಿಎ 1997ರಲ್ಲಿ ವಶಪಡಿಸಿಕೊಂಡಿದ್ದ ಈ ಜಮೀನನ್ನು ಬಿ.ಎಸ್‌. ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ (2009ರ ಸೆ.25) ಕಾನೂನು ಬಾಹಿರವಾಗಿ ಡಿನೋಟಿಫೈ ಮಾಡಿದ್ದಾರೆ’ ಎಂದು ರವಿ ಕೃಷ್ಣಾರೆಡ್ಡಿ, ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು.

‘ವಿವಿಎಸ್‌ ಶಿಕ್ಷಣ ಟ್ರಸ್ಟ್‌ ಹೆಸರಿನಲ್ಲಿ ಶೈಲಜಾ ಈ ಜಮೀನಿನ ಮಾಲೀಕತ್ವ ಹೊಂದಿದ್ದಾರೆ. ಆದರೂ, ಡಿನೋಟಿಫೈಗೆ ಜಮೀನಿನ ಮೂಲ ಮಾಲೀಕರು ಸಲ್ಲಿಸಿದ ಅರ್ಜಿ ಪರಿಗಣಿಸಿರುವುದು ಅಕ್ರಮ’ ಎಂದು ದೂರಿನಲ್ಲಿ ಆರೋಪಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಸೋಮಣ್ಣ ಹಾಗೂ ಇತರರ ವಿರುದ್ಧದ ಆರೋಪದಲ್ಲಿ ಹುರುಳಿಲ್ಲ ಎಂದು ತೀರ್ಪು ನೀಡಿತ್ತು.  ಪ್ರಕರಣವನ್ನು ಕೈಬಿಡುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚನೆಯನ್ನೂ ನೀಡಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು