ಮಂಗಳವಾರ, ಆಗಸ್ಟ್ 3, 2021
27 °C
‘ಸಚಿವರ ಮಧ್ಯೆ ಗೊಂದಲ’

ಹಾಸಿಗೆ, ದಿಂಬು ಖರೀದಿಯಲ್ಲಿ ಭ್ರಷ್ಟಾಚಾರ: ಡಿ.ಕೆ. ಶಿವಕುಮಾರ್‌ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೊರೊನಾ ಸೋಂಕು ಪ್ರಸರಣ ನಿಯಂತ್ರಿಸುವ ವಿಷಯದಲ್ಲಿ ಸಚಿವರ ಮಧ್ಯೆ ಹೊಂದಾಣಿಕೆ ಇಲ್ಲ. ಗಳಿಗೆಗೊಂದು ಹೇಳಿಕೆ, ನಿಮಿಷಕ್ಕೊಂದು ತೀರ್ಮಾನ ಮಾಡಿ, ತಾವೂ ಗೊಂದಲಕ್ಕೆ ಸಿಲುಕಿ ಜನಸಾಮಾನ್ಯರನ್ನು ಗೊಂದಲಕ್ಕೆ ಸಿಲುಕಿಸುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಟೀಕಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಸೋಂಕು ವಿಪರೀತ ಹೆಚ್ಜಳವಾಗುವುದಕ್ಕೆ ಯಾರು ಹೊಣೆ, ಇದನ್ನು ನಿಯಂತ್ರಿಸಲು ಯಾರಾದರೂ ಅಡ್ಡ ಬಂದಿದ್ದಾರೆಯೇ ಎಂಬುವುದಕ್ಕೆ ಮುಖ್ಯಮಂತ್ರಿ ಉತ್ತರಿಸಬೇಕು’ ಎಂದು ಆಗ್ರಹಿಸಿದರು.

‘ಕೋವಿಡ್ 19 ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿದ್ದು, ಸರ್ಕಾರವೇ ಜನರಿಗೆ ರೋಗ ಅಂಟಿಸುತ್ತಿದೆ. ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮತ್ತು ಸೋಂಕು ನಿಯಂತ್ರಿಸದೆ ಎರಡೂ ಸರ್ಕಾರಗಳು ಜನರ ಜೀವದ ಜತೆ ಆಟವಾಡುತ್ತಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕೇವಲ ದಿಂಬು, ಹಾಸಿಗೆ ಬಾಡಿಗೆಯಲ್ಲೇ ದುಡ್ಡು ಹೊಡೆಯಲಾಗುತ್ತಿದೆ. ಇನ್ನು ವೈದ್ಯಕೀಯ ಉಪಕರಣಗಳ ಖರೀದಿಯಲ್ಲೂ ಅಕ್ರಮ ನಡೆದಿದೆ. ಮುಖ್ಯಮಂತ್ರಿಗಳೇ ನಿಮ್ಮ ಸರ್ಕಾರದ ಸಚಿವರು, ಅಧಿಕಾರಿಗಳ ಅನುಮತಿ ಇಲ್ಲದೆ ಈ ಭ್ರಷ್ಟಾಚಾರ ನಡೆಯಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಆರಂಭಿಸಿ ಮೂರು ದಿನ ಕಳೆಯಿತು. ಅವರ ಸಮಸ್ಯೆ ಆಲಿಸಲು ಏನು ಸಮಸ್ಯೆ. ನೀವು ಘೋಷಿಸಿದ ₹ 1,600 ಕೋಟಿ ಪ್ಯಾಕೇಜ್‌ನಲ್ಲಿ ಹಣ ಶೇ 25ರಷ್ಟು ಜನರಿಗೂ ತಲುಪಿಲ್ಲ. ಜನ ಸತ್ತ ಮೇಲೆ ಅವರಿಗೆ ದುಡ್ಡು ಕೊಡುತ್ತೀರಾ’ ಎಂದು ಪ್ರಶ್ನಿಸಿದರು.

‘ಪರಿಸ್ಥಿತಿ ಪರಿಶೀಲಿಸಲು ನಾನು ಬುಧವಾರ ಬೆಳಿಗ್ಗೆ 8 ಗಂಟೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡುತ್ತೇನೆ’ ಎಂದು ಶಿವಕುಮಾರ್‌ ತಿಳಿಸಿದರು.

ಡಿಕೆಶಿ ಕಿಡಿನುಡಿಗಳು
ಆಸ್ಪತ್ರೆಯಲ್ಲಿ ಸೋಂಕಿತರಿಗೆ ಸರಿಯಾದ ವ್ಯವಸ್ಥೆ ಇಲ್ಲ. ನಾಯಿಗೆ ಅನ್ನ ಹಾಕುವಂತೆ ಅವರಿಗೆ ಊಟ ನೀಡಲಾಗುತ್ತಿದೆ.
* ಸೋಂಕಿತರು ಸತ್ತರೆ ಅವರ ದೇಹವನ್ನು ಎಸೆಯುತ್ತಿದ್ದೀರಿ. ಇದು ಭಾರತೀಯ ಸಂಸ್ಕೃತಿನಾ? ಇದೇನಾ ನಿಮ್ಮ ಮಾನವೀಯತೆ? ಏನಾಗಿದೆ ಸರ್ಕಾರಕ್ಕೆ?
* ಸರ್ಕಾರ ಇರುವುದು ಕೇವಲ ಅಧಿಕಾರ ಅನುಭವಿಸುವುದಕ್ಕೆ ಅಲ್ಲ. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಬೇಕು. ಮುಖ್ಯಮಂತ್ರಿ ಸೇರಿದಂತೆ ಎಷ್ಟು ಮಂತ್ರಿಗಳು ಕೋವಿಡ್‌ ಆಸ್ಪತ್ರೆಗೆ ಹೋಗಿ ಸೋಂಕಿತರ ಸಂಕಷ್ಟ ಆಲಿಸಿದ್ದೀರಿ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು