ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರಂಟೈನ್‌ ನಿಯಮ ಉಲ್ಲಂಘನೆ: ಮೈಸೂರಿನಲ್ಲಿ ಸಿಕ್ಕಿಬಿದ್ದ ‘ಡ್ರೋನ್ ಪ್ರತಾಪ್’

Last Updated 20 ಜುಲೈ 2020, 10:38 IST
ಅಕ್ಷರ ಗಾತ್ರ

ಬೆಂಗಳೂರು: ಹೋಂ ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ ಆರೋಪದಡಿ ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಮೊಬೈಲ್‌ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ ‘ಡ್ರೋನ್ ಪ್ರತಾಪ್’ ಮೈಸೂರಿನಲ್ಲಿ ಸೋಮವಾರ ಬೆಳಿಗ್ಗೆ ಪತ್ತೆಯಾಗಿದ್ದು, ಆತನನ್ನು ಕಸ್ಟಡಿಗೆ ಪಡೆದಿರುವ ತಲಘಟ್ಟಪುರ ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದಾರೆ.

ಪ್ರತಾಪ್ ಸಾಧನೆ ಬಗ್ಗೆಯೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಕೆಲ ದಿನಗಳ ಹಿಂದಷ್ಟೇ ಹೊರ ಜಿಲ್ಲೆಗೆ ಹೋಗಿದ್ದ ಪ್ರತಾಪ್, ಇತ್ತೀಚೆಗಷ್ಟೇ ನಗರಕ್ಕೆ ಬಂದಿದ್ದರು. ತಾವು ವಾಸವಿದ್ದ ಅಂಜನಾಪುರದ ಎಸ್.ಎಫ್-ಎಂ.ಐ.ಎಂ.ಜಿ ವಿಂಡ್ ಪಾಲ್ ಅಪಾರ್ಟ್‌ಮೆಂಟ್ ಸಮುಚ್ಚಯದದ ಪ್ಲ್ಯಾಟ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇರುವಂತೆ ಬಿಬಿಎಂಪಿ ಅಧಿಕಾರಿಗಳು ಸೂಚಿಸಿದ್ದರು.

‌ಜುಲೈ 16ರಂದು ಮನೆಯಿಂದ ಹೊರಗೆ ಬಂದಿದ್ದ ಪ್ರತಾಪ್, ಸುದ್ದಿ ವಾಹಿನಿಯೊಂದರ ಸಂದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಹೋಂ ಕ್ವಾರಂಟೈನ್‌ನಲ್ಲಿದ್ದರೂ ಕಾರ್ಯಕ್ರಮಕ್ಕೆ ಬಂದಿರುವುದಾಗಿ ಅವರು ತಿಳಿಸಿದ್ದರು. ಕೈ ಮೇಲೆ ಕ್ವಾರಂಟೈನ್ ಮುದ್ರೆ ಸಹ ಇತ್ತು. ನಿಯಮ ಉಲ್ಲಂಘಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಪಶುವೈದ್ಯ ಮತ್ತು ವಿಧಿವಿಜ್ಞಾನ ತಜ್ಞರೂ ಆಗಿರುವ ಡಾ. ಎಚ್.ಎಸ್. ಪ್ರಯಾಗ್‌, ತಲಘಟ್ಟಪುರ ಠಾಣೆಗೆ ದೂರು ನೀಡಿದ್ದರು.

ಸಾಂಕ್ರಾಮಿಕ ರೋಗ ಹರಡಿದ ಹಾಗೂ ನಿಯಮ ಉಲ್ಲಂಘಿಸಿದ ಆರೋಪದಡಿ ಪ್ರತಾಪ್ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡಿದ್ದ ಪೊಲೀಸರು, ಅವರಿಗಾಗಿ ಹುಡುಕಾಟ ಆರಂಭಿಸಿದ್ದರು.

ಮೈಸೂರಿನ ಸಂಬಂಧಿಕರೊಬ್ಬರ ಮನೆಯಲ್ಲಿ ಪ್ರತಾಪ್ ಉಳಿದುಕೊಂಡಿದ್ದ ಮಾಹಿತಿ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳಿಗೆ ಗೊತ್ತಾಗಿತ್ತು. ಮೈಸೂರಿಗೆ ಹೋಗಿರುವ ವಿಶೇಷ ತಂಡ, ಪ್ರತಾಪ್‌ನನ್ನು ಕಸ್ಟಡಿಗೆ ಪಡೆದು ಬೆಂಗಳೂರಿಗೆ ಕರೆತರುತ್ತಿದೆ.

ಬೆಂಗಳೂರಿಗೆ ಬಂದ ನಂತರ, ಪ್ರತಾಪ್‌ ಅವರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಅದರ ಅವಧಿ ಮುಗಿದ ನಂತರವೇ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT