ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ವೈದ್ಯರಿಂದ ಮುಷ್ಕರದ ಎಚ್ಚರಿಕೆ: ವಿವಿಧ ಬೇಡಿಕೆ ಈಡೇರಿಕೆಗೆ ಆ.15ರ ಗಡುವು

Last Updated 23 ಜುಲೈ 2020, 18:43 IST
ಅಕ್ಷರ ಗಾತ್ರ

ಬೆಂಗಳೂರು: ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 4,968 ವೈದ್ಯರು ವೇತನ ಪರಿಷ್ಕರಣೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದು, ತಮ್ಮ ಬೇಡಿಕೆಗಳನ್ನು ಆ.15ರೊಳಗೆ ಈಡೇರಿಸದಿದ್ದಲ್ಲಿ ಹಂತ ಹಂತವಾಗಿ ಸೇವೆ ಸ್ಥಗಿತ ಮಾಡುವುದಾಗಿ ಎಚ್ಚರಿಸಿದ್ದಾರೆ.

ಸರ್ಕಾರಿ ಗುತ್ತಿಗೆ ವೈದ್ಯರು ಹಾಗೂ ಆಯುಷ್ ವೈದ್ಯರು, ವೇತನ ಪರಿಷ್ಕರಣೆಗೆ ಆಗ್ರಹಿಸಿ ಮುಷ್ಕರ ನಡೆಸಿದ್ದರು. ಸರ್ಕಾರ ಅವರ ಬೇಡಿಕೆ
ಯನ್ನು ಈಡೇರಿಸಿತ್ತು. ಈಗ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಅದೇ ಹಾದಿ ತುಳಿಯಲು ಮುಂದಾಗಿ
ದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗುರುವಾರ ಮತ್ತೊಮ್ಮೆ ಮನವಿಸಲ್ಲಿಸಿದೆ.

‘ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವೈದ್ಯರಿಗೆ ಏಳನೇ ವೇತನ ಆಯೋಗದ ವೇತನ ಶ್ರೇಣಿ ನೀಡಲಾಗಿದೆ. ಆರೋಗ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವೈದ್ಯರುಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ. ಇಂಥವರಿಗೆ
ಕೇಂದ್ರ ಸರ್ಕಾರದ ಸಿಜಿಎಚ್‌ಸಿ ಮಾದರಿ ವೇತನ ಪರಿಷ್ಕರಣೆ ಮಾಡುವ ಮೂಲಕ ಅವರ ನೆರವಿಗೆ ಸರ್ಕಾರ ಧಾವಿಸಬೇಕು. ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಗೆ ನೀಡಿರುವ 48 ಆಸ್ಪತ್ರೆಗಳನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸಂಘವು ಮನವಿ ಪತ್ರದಲ್ಲಿ ತಿಳಿಸಿದೆ.

‘ಕೋವಿಡ್‌ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮೃತಪಟ್ಟಿರುವ ಚಿಕ್ಕಬಳ್ಳಾಪುರದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅನಿಲ್, ಹಾಸನದ ಆಲೂರು ಸಾರ್ವಜನಿಕ ಆಸ್ಪತ್ರೆಯ ಮಕ್ಕಳತಜ್ಞ ಡಾ. ಶಿವಕಿರಣ್ ಹಾಗೂ ಬಾಗಲಕೋಟೆಯ ಕಲ್ಲಡಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಸವರಾಜ್ ಕರಿಗೌಡರ್ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಕೋವಿಡ್ ಚಿಕಿತ್ಸೆಯ ವೇಳೆ ಸೋಂಕಿತರಾದ ವೈದ್ಯರ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಹಾಸಿಗೆ, ವೆಂಟಿಲೇಟರ್ ಮೀಸಲಿಡಬೇಕು. ವೈದ್ಯರ ಜತೆಗೆ ಅನುಚಿತವಾಗಿ ವರ್ತಿಸಿರುವ ಬೀದರ್ ಜಿಲ್ಲಾಧಿಕಾರಿಯನ್ನು ತಕ್ಷಣವೇ ವರ್ಗಾವಣೆ ಮಾಡಬೇಕು’ ಎಂದು ಒತ್ತಾಯಿಸಲಾಗಿದೆ.

ಬೇಡಿಕೆಗಳನ್ನು ಗಡುವಿನೊಳಗೆ ಈಡೇರಿಸದಿದ್ದಲ್ಲಿ ಮೊದಲ ಹಂತದಲ್ಲಿ ಕಪ್ಪುಪಟ್ಟಿ ಧರಿಸಿ, ಸೇವೆ ನೀಡುತ್ತೇವೆ. ಬಳಿಕ ಸೇವೆಯನ್ನು ಸ್ಥಗಿತ ಮಾಡಲಾಗುವುದು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT