ಗುರುವಾರ , ಆಗಸ್ಟ್ 5, 2021
23 °C
ಕಲಬುರ್ಗಿ: ಮೂರು ಹಸು ಸಾವು

ಕಲ್ಯಾಣ ಕರ್ನಾಟಕದಲ್ಲಿ ಭಾರಿ ಮಳೆ; ಅಪಾರ ಬೆಳೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಬುಧವಾರ ಧಾರಾಕಾರ ಮಳೆಯಾಗಿದೆ. ಕೆರೆ–ಕಟ್ಟೆಗಳು, ಹಳ್ಳ–ಕೊಳ್ಳಗಳು ಭರ್ತಿಯಾಗಿವೆ. ರಾಜ್ಯದ ಇತರೆಡೆಗಳಲ್ಲೂ ಉತ್ತಮ ಮಳೆ ಆಗಿದೆ.

ಕಲಬುರ್ಗಿ ಜಿಲ್ಲೆಯ ಕಮಲಾಪುರ, ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕುಗಳ ಬಹುತೇಕ ಹಳ್ಳಗಳು ತುಂಬಿ ಹರಿಯುತ್ತಿವೆ. ರಾಜನಾಳ ಕೆರೆ, ಬಾಚನಾಳ–ಗೊಬ್ಬರವಾಡಿ ಹಳ್ಳ ತುಂಬಿ ಹರಿದ ಪರಿಣಾಮ ನೂರಾರು ಎಕರೆಯಲ್ಲಿ ಬೆಳೆದಿದ್ದ ಹೆಸರು, ತೊಗರಿ ಬೆಳೆ ಹಾನಿಯಾಗಿದೆ. ಸೊಂತ ಗ್ರಾಮದಲ್ಲಿ ಕೊಟ್ಟಿಗೆಯ ಗೋಡೆ ಕುಸಿದು 3 ಹಸು ಸಾವನ್ನಪ್ಪಿವೆ. ಸೊಂತ- ಜಂಬಗಾ ಮಧ್ಯದ ಸೇತುವೆ ಮೇಲೆ ನೀರು ಹರಿಯುತ್ತಿದೆ. ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ ಬಳಿಯ ನಾಗರಾಳ ಜಲಾಶಯ ಭರ್ತಿಯಾಗಿದೆ. ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿರುವ 4 ಕೆರೆಗಳು ಭರ್ತಿಯಾಗಿವೆ.

ಬೀದರ್‌ ನಗರ ಸೇರಿದಂತೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಯಾದಗಿರಿ ನಗರದಲ್ಲಿ ಮಳೆಯಿಂದ ಬಹುತೇಕ ವೃತ್ತಗಳು ನೀರಿನಿಂದ ಆವರಿಸಿಕೊಂಡಿದ್ದು, ಅಂಗಡಿಗಳಿಗೂ ನೀರು ನುಗ್ಗಿದೆ. ಯರಗೋಳದಲ್ಲಿ ಹೊಲಗಳಿಗೆ ನೀರು ನುಗ್ಗಿ, ಭತ್ತದ ಬೆಳೆಗೆ ಹಾನಿಯಾಗಿದೆ. ರಾಯಚೂರು ಮತ್ತು ಮಾನ್ವಿಯಲ್ಲಿ ಭಾರಿ ಮಳೆಯಾಗಿದ್ದರಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು. ಕೊಪ್ಪಳದಲ್ಲಿ ಸಾಧಾರಣ ಮಳೆಯಾಯಿತು.

ಉತ್ತರ ಕನ್ನಡ, ವಿಜಯಪುರ, ಧಾರವಾಡ, ಬಳ್ಳಾರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ಹುಬ್ಬಳ್ಳಿಯಲ್ಲಿ ಎರಡೂವರೆ ತಾಸು ಮಳೆ ಸುರಿದಿದೆ. ವಿಜಯಪುರದ ಆಲಮಟ್ಟಿ ಜಲಾಶಯದ ಒಳಹರಿವು ಇಳಿಕೆಯಾಗಿದ್ದರೂ, ಸಂಗ್ರಹವನ್ನು ನಿಯಂತ್ರಣದಲ್ಲಿಡಲು ಹೊರಹರಿವನ್ನು ಹೆಚ್ಚಿಸಲಾಗಿದೆ.

ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಗಳೂರು, ಉಡುಪಿ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದು, ಬುಧವಾರವೂ ಮುಂದುವರಿದಿದೆ.

ನಿರಂತರ ಮಳೆ: ಕೊಡಗು ಜಿಲ್ಲೆಯಲ್ಲಿ ದಿನವಿಡೀ ಉತ್ತಮ ಮಳೆಯಾಗಿದೆ. ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ಹಳ್ಳ, ಕೊಳ್ಳಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು