ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಮುಂದೆ ನಡು ಬಗ್ಗಿಸಿದ ಕಾಂಗ್ರೆಸ್‌ ನಾಯಕರು

ಎಚ್‌ಡಿಕೆ–ಕಾಂಗ್ರೆಸ್‌ ಮುಂದುವರಿದ ಟ್ವೀಟರ್‌ ಸಮರ
Last Updated 29 ಜುಲೈ 2020, 20:42 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್–ಜೆಡಿಎಸ್‌ ಮೈತ್ರಿ ಸರ್ಕಾರದ ಕುರಿತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಮತ್ತು ಕೆಪಿಸಿಸಿ ಮಧ್ಯೆ ಟ್ವೀಟರ್‌ ಸಮರ ಮತ್ತೆ ತಾರಕಕ್ಕೇರಿದೆ.

‘ಪ್ರಜಾಪ್ರಭುತ್ವ ಉಳಿಸಿ’ ಎಂದು ಕಾಂಗ್ರೆಸ್ ನಾಯಕರು‌ ನಡೆಸಿದ ಪ್ರತಿಭಟನೆಯನ್ನು ಟೀಕಿಸಿ ಕುಮಾರಸ್ವಾಮಿ ಮಾಡಿದ್ದ ಸರಣಿ ಟ್ವೀಟ್‌ಗಳಿಗೆ ಕೆಪಿಸಿಸಿ ಬುಧವಾರ ತಿರುಗೇಟು ನೀಡಿದೆ. ಇದಕ್ಕೆ ಕುಮಾರಸ್ವಾಮಿ ಟ್ವೀಟ್‌ಗಳ ಮೂಲಕವೇ ಪ್ರತ್ಯುತ್ತರ ನೀಡಿದ್ದಾರೆ.

ಕಾಂಗ್ರೆಸ್‌ ಹೇಳಿದ್ದೇನು?:

‘ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವಾಗ ನಿಮಗೆ ಕಾಂಗ್ರೆಸ್‌ ಪಕ್ಷದ ನೈತಿಕತೆ ಚೆನ್ನಾಗಿತ್ತು. ಅಧಿಕಾರ ಇಲ್ಲದಿದ್ದಾಗ ನೈತಿಕತೆ ಪ್ರಶ್ನೆ ಬರುತ್ತದೆಯೇ’ ಎಂದು ಕೆಪಿಸಿಸಿ ಪ್ರಶ್ನಿಸಿದೆ.

‘ರಾಜ್ಯ ಸಂಕಷ್ಟದಲ್ಲಿರುವಾಗ ಅದೃಶ್ಯರು, ಅಪ್ರಸ್ತುತರು ಆಗಿರುವ ನಿಮ್ಮ ಪಕ್ಷದ ನೈತಿಕತೆ ಏನು? ಆಡಳಿತ ಪಕ್ಷಕ್ಕೆ ಬೇರೆ ಪಕ್ಷದ ಶಾಸಕರು ಸ್ವಯಂ ಸೇರುವುದಕ್ಕೂ ಸಂವಿಧಾನ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ‘ಆಪರೇಷನ್‌ ಕಮಲ’ದ ಮೂಲಕ ಚುನಾಯಿತ ಸರ್ಕಾರವನ್ನು ಕೆಡವಿ ಹಾಕುವುದಕ್ಕೂ ವ್ಯತ್ಯಾಸ ಗೊತ್ತಿಲ್ಲದಷ್ಟು ಅತಿ ಮುಗ್ಧರಾಗಿ ಬಿಟ್ಟಿರಾ’ ಎಂದು ಪ್ರಶ್ನಿಸಿದೆ.

ಕುಮಾರಸ್ವಾಮಿ ಉತ್ತರ:

‘ನನ್ನನ್ನು ನೇರವಾಗಿ ಪ್ರಶ್ನಿಸಲಾಗದ ಕಾಂಗ್ರೆಸ್‌ನ ಅತಿರಥ ಮಹಾರಥರು ಪಕ್ಷದ ಟ್ವಿಟರ್‌ ಖಾತೆ ಮೂಲಕ ದಾಳಿ ಮಾಡಿ ಓಡಿ ಹೋಗಿದ್ದಾರೆ. ಚರ್ಚೆ ಆರಂಭವಾಗಿದೆ. ಅದನ್ನು ಪೂರ್ಣಗೊಳಿಸುತ್ತೇನೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

‘ಕಾಂಗ್ರೆಸ್‌ ಹೈಕಮಾಂಡ್‌ ಮತ್ತು ರಾಜ್ಯ ನಾಯಕರು ಜೆಡಿಎಸ್‌ ಎದುರು ನಡು ಬಗ್ಗಿಸಿ, ನಾವು ಬೇಡ ಎಂದರೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಿದಿರಿ. ಆನಂತರ ಒತ್ತಡಗಳನ್ನು ಹೇರಿ ಬ್ಯಾಕ್ ಸೀಟ್‌ ಡ್ರೈವಿಂಗ್‌ ಮಾಡಿದಾಗ ಕಾಂಗ್ರೆಸ್‌ನ ನೈತಿಕತೆ ಎಲ್ಲಿತ್ತು’ ಎಂದು ಪ್ರಶ್ನಿಸಿದ್ದಾರೆ.

‘ರೈತರ ಸಾಲ ಮನ್ನಾ ಮಾಡಿ ರಾಜಧರ್ಮ ಪಾಲಿಸಬೇಕಿತ್ತು. ನಿಮ್ಮೆಲ್ಲಾ ಆಟಗಳು ಗೊತ್ತಿದ್ದು ಕೂಡ ರಾಜ್ಯದ ಜನರ ಹಿತಕ್ಕಾಗಿ ನಾನು ಚಾಣಕ್ಯ ನೀತಿ ಪ್ರದರ್ಶಿಸಿ ರೈತರ ಹಿತ ರಕ್ಷಿಸಿದೆ. ಇದರಲ್ಲಿ ನನ್ನ ವೈಯಕ್ತಿಕ ಲಾಭವೇನೂ ಇರಲಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT