ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕತ್ವ ಬದಲಾವಣೆ ಮುನ್ನೆಲೆಗೆ; ರಾಜ್ಯ ರಾಜಕಾರಣದಲ್ಲಿ ಚಟುವಟಿಕೆ ಶುರು

ದೆಹಲಿಯಲ್ಲಿ ವರಿಷ್ಠರ ಜತೆ ಲಕ್ಷ್ಮಣ ಸವದಿ ಚರ್ಚೆ?
Last Updated 28 ಜುಲೈ 2020, 20:12 IST
ಅಕ್ಷರ ಗಾತ್ರ

ಬೆಂಗಳೂರು: ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಒಂದು ವರ್ಷದ ಸಂಭ್ರಮಾಚರಣೆಯ ಶಾಸ್ತ್ರ ಮುಗಿಸಿದ ಬೆನ್ನಲ್ಲೇ, ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಮುನ್ನೆಲೆಗೆ ಬಂದಿದೆ.

ಮೈತ್ರಿ ಸರ್ಕಾರ ಬೀಳಿಸಿದ ಹೊತ್ತಿನಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯ ಹಕ್ಕು ಪ್ರತಿಪಾದಿಸಿ ಪ್ರಮಾಣ ವಚನ ಸ್ವೀಕಾರಕ್ಕೆ ಅನುಮತಿ ಕೋರಿದಾಗ, ಪಕ್ಷದ ವರಿಷ್ಠರು ಒಂದು ವರ್ಷದ ಗಡುವು ನೀಡಿದ್ದರು. ಕೊರೊನಾ ಸೋಂಕು ರಾಜ್ಯವನ್ನು ವ್ಯಾಪಿಸುತ್ತಿರುವ ಸಂಕಷ್ಟದ ಕಾಲದಲ್ಲಿ ನಾಯಕತ್ವ ಬದಲಾವಣೆ ಮಾಡಿದರೆ ಬೇರೆಯದೇ ಆದ ಸಂದೇಶ ರವಾನೆಯಾಗಲಿದೆ. ಹಾಗೊಂದು ವೇಳೆ ಬದಲಾವಣೆಗೆ ಕಾಲ ಪಕ್ವವಾದರೆ ತಮ್ಮನ್ನೇ ಪರಿಗಣಿಸಿ ಎಂದು ವರಿಷ್ಠರ ಮುಂದೆ ಮೊರೆ ಇಡಲು ಆಕಾಂಕ್ಷಿಗಳು ಶುರು ಮಾಡಿದ್ದಾರೆ.

ಆರಂಭಿಕ ಹಂತದಲ್ಲಿರುವ ಈ ಪ್ರಯತ್ನ ಬಿಜೆಪಿ ಪಡಸಾಲೆಯಲ್ಲಿ ಚರ್ಚೆಗೆ ಕಾರಣವಾಗಿದ್ದು, ದಿನಕ್ಕೊಂದು ಹೆಸರುಗಳು ಮುಂಚೂಣಿಗೆ ಬರುತ್ತಿವೆ.

ಸರ್ಕಾರ ಒಂದು ವರ್ಷ ಪೂರೈಸಿದ ವೇಳೆ ಸಂಭ್ರಮಕ್ಕೆ ಸಾಕ್ಷಿಯಾಗಬೇಕಾಗಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು, ರಾಜ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೈರಾಗಿದ್ದಲ್ಲದೇ, ದೆಹಲಿಯಾತ್ರೆ ಕೈಗೊಂಡಿದ್ದರು. ಸವದಿಯ ಈ ನಡೆ ಕೂಡ ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.

ದೆಹಲಿಯಲ್ಲಿ ಎರಡು ದಿನ ವಾಸ್ತವ್ಯ ಹೂಡಿರುವ ಸವದಿ ಅವರು ಪಕ್ಷದ ಅನೇಕ ಮುಖಂಡರನ್ನು ಭೇಟಿ ಮಾಡಿ ನಾಯಕತ್ವ ಬದಲಾವಣೆಯ ಚರ್ಚೆ ನಡೆಸಿದ್ದಾರೆ. ಯಡಿಯೂರಪ್ಪ ಜತೆಗೆ ಉತ್ತಮ ಬಾಂಧವ್ಯ ಹೊಂದಿಲ್ಲದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಇವರ ಬೆನ್ನಿಗೆ ನಿಂತಿದ್ದಾರೆ ಎಂದು ಹೇಳಲಾಗುತ್ತಿದೆ.

‘ನೀವು ಎಷ್ಟು ಸಾಧ್ಯವೋ ಅಷ್ಟು ಶಾಸಕರ ವಿಶ್ವಾಸ ಗಳಿಸಲು ಪ್ರಯತ್ನಿಸಿ, ನಾಯಕತ್ವ ಬದಲಾವಣೆ ವಿಷಯ ಪ್ರಸ್ತಾಪಕ್ಕೆ ಬಂದಾಗ ಪರಿಗಣಿಸಲಾಗುವುದು’ ಎಂದು ದೆಹಲಿ ಮಟ್ಟದ ಬಿಜೆಪಿ ನಾಯಕರು ಸವದಿಗೆ ಭರವಸೆ ನೀಡಿದ್ದಾರೆ ಎಂದೂ ಹೇಳಲಾಗಿದೆ.

‘ಸವದಿ ಕಾರ್ಯವೈಖರಿ ಬಗ್ಗೆ ಅನೇಕ ದೂರುಗಳು ಸಲ್ಲಿಕೆಯಾಗಿದ್ದವು. ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಅವರನ್ನು ಕೈಬಿಡುವ ಲೆಕ್ಕಾಚಾರವೂ ನಡೆದಿತ್ತು. ಸಚಿವ ಸ್ಥಾನ ಉಳಿಸಿಕೊಳ್ಳುವ ಸಲುವಾಗಿ ತಮ್ಮ ಸಾಧನೆಯನ್ನು ವರಿಷ್ಠ
ರಿಗೆ ಮನವರಿಕೆ ಮಾಡಿಕೊಡಲು ಸವದಿ ದೆಹಲಿಗೆ ಹೋಗಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಲಾಬಿ ಮಾಡುವ ಮಟ್ಟಿಗೆ ಅವರ ‘ಸಂಪರ್ಕ’ ಬೆಳೆದಿಲ್ಲ’ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದರು.

ರಾಜ್ಯ ರಾಜಕೀಯದಲ್ಲಿ ಯಡಿಯೂರಪ್ಪ ಮತ್ತೆ ಬಿಗಿ ಹಿಡಿತ ಸಾಧಿಸುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಹಿಮ್ಮೆಟ್ಟಿಸುವ ಯತ್ನವನ್ನು ಸಂತೋಷ್‌ ಬಣ ನಡೆಸಿದೆ ಎಂದು ಹೇಳಲಾಗಿದೆ.

ನಾಯಕತ್ವ ಬದಲಾವಣೆಯ ಯತ್ನ ಆರಂಭಿಸುವ ಸುಳಿವು ಸಿಗುತ್ತಿದ್ದಂತೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಲುವಾಗಿ ಅವರಲ್ಲಿ 20 ಮಂದಿಗೆ ನಿಗಮ–ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿ ಓಲೈಸುವ ಯತ್ನವನ್ನು ಯಡಿಯೂರಪ್ಪ ನಡೆಸಿದರು. ದೊಡ್ಡ ಮಟ್ಟದಲ್ಲಿ ಇಂತಹ ನೇಮಕ ಮಾಡುವಾಗ ಪ್ರಮುಖರ ಸಮಿತಿಯ ಸಭೆಯಲ್ಲಿ ಅಥವಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಜತೆ ಚರ್ಚಿಸುವುದು ಪಕ್ಷದ ಸಂಪ್ರದಾಯ. ಕುರ್ಚಿ ಅಲ್ಲಾಡಿಸಲು ವರಿಷ್ಠರು ಮುಂದಾದರೆ ತಮ್ಮ ನೆರವಿಗೆ ಇರಲಿ ಎಂಬ ಕಾರಣಕ್ಕೆ ಈ ಸಂಪ್ರದಾಯ ಬದಿಗೊತ್ತಿದ ಯಡಿಯೂರಪ್ಪ ಅವರು ನೇಮಕಾತಿಯ ನಿರ್ಧಾರವನ್ನು ಏಕಾಏಕಿ ತೆಗೆದುಕೊಂಡರು ಎಂಬ ಚರ್ಚೆಯೂ ಪಕ್ಷದಲ್ಲಿ ನಡೆದಿದೆ.

*****

ಜೋಶಿ- ಸವದಿ ಪೈಪೋಟಿ

ನಾಯಕತ್ವ ಬದಲಾವಣೆ ಖಾತ್ರಿಯಾದರೆ ಈ ಸ್ಥಾನ ಪಡೆದುಕೊಳ್ಳಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಲಕ್ಷ್ಮಣ ಸವದಿ ತಮ್ಮದೇ ಆದ ತಯಾರಿ ನಡೆಸಿದ್ದಾರೆ.

ಸವದಿ ಅವರನ್ನು ಈ ಹುದ್ದೆಯಲ್ಲಿ ನೋಡಲು ಬೆಳಗಾವಿಯ ರಾಜಕಾರಣ ಒಪ್ಪುವುದಿಲ್ಲ.ಈ ವಿಷಯದಲ್ಲಿ ರಮೇಶ ಜಾರಕಿಹೊಳಿ ತಂಡ ಅವರ ವಿರುದ್ಧ ನಿಂತಿದೆ. ಈ ಅವಕಾಶವನ್ನು ಬಳಸಿಕೊಳ್ಳಲು ಜೋಶಿ ಅಣಿಯಾಗಿದ್ದಾರೆ. ಮತ್ತೊಂದು
ಅವಧಿಗೆ ಈ ಸ್ಥಾನ ಸಿಗುವುದು ಕಷ್ಟ ಎಂದರಿತಿರುವ ಜಗದೀಶ ಶೆಟ್ಟರ್ ಕೂಡ ಜೋಶಿ ಪರ ನಿಂತಿದ್ದಾರೆ ಎನ್ನಲಾಗಿದೆ.

ಇದೇ 24ರ ಶುಕ್ರವಾರ ಜಾರಕಿಹೊಳಿ ಅವರ ಬೆಂಗಳೂರಿನ ನಿವಾಸದಲ್ಲಿ ಉತ್ತರ–ದಕ್ಷಿಣ ಭಾಗದ ಶಾಸಕರು– ಸಚಿವರ ಸಭೆ ನಡೆದಿತ್ತು. ಅಲ್ಲಿ ಜೋಶಿ ಅವರನ್ನು ಸನ್ಮಾನಿಸಲಾಗಿತ್ತು. ಈ ಸಭೆಯಲ್ಲಿ 25ಕ್ಕೂ ಹೆಚ್ಚು ಶಾಸಕರು ಪಾಲ್ಗೊಂಡಿದ್ದು, ಒಂದು ವೇಳೆ ನಾಯಕತ್ವ ಬದಲಾವಣೆಯಾಗುವುದಾದರೆ ಸವದಿ ಬದಲು ಜೋಶಿ ಅವರ ಬೆನ್ನಿಗೆ ನಿಲ್ಲುವ ಚರ್ಚೆ ನಡೆಯಿತು ಎಂದೂ ಹೇಳಲಾಗುತ್ತಿದೆ.

ಇನ್ನೊಂದೆಡೆ, ಜೋಶಿ ಹಾಗೂ ಸವದಿ ಬದಲು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ
ಅವರನ್ನು ಆ ಸ್ಥಾನಕ್ಕೆ ಕೂರಿಸುವುದು ಸೂಕ್ತ ಎಂಬ ಚರ್ಚೆಯೂ ಆರಂಭವಾಗಿದೆ. ಕಾರಜೋಳ ಆಯ್ಕೆಯಾದರೆ ಮೊದಲ ಬಾರಿಗೆ ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆ ಪ್ರಾತಿನಿಧ್ಯ ಕೊಟ್ಟಂತಾಗುತ್ತದೆ ಎಂಬ ವಾದವೂ ನಡೆದಿದೆ.

****

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ನಸೀಬು ಇದ್ದರೆ ಮುಖ್ಯಮಂತ್ರಿ ಆಗಲಿ. ಅವರ ಕ್ಷೇತ್ರದಲ್ಲಿ ನಡೆದಿರುವ ಅಭಿಯಾನದ ಬಗ್ಗೆ ಗೊತ್ತಿಲ್ಲ
-ರಮೇಶ ಜಾರಕಿಹೊಳಿ,ಜಲಸಂಪನ್ಮೂಲ ಸಚಿವ

ಮುಖ್ಯಮಂತ್ರಿ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ. ಸವದಿ ಈ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿಲ್ಲ. ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ
-ಜಗದೀಶ ಶೆಟ್ಟರ್, ಕೈಗಾರಿಕಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT