ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.ಕೆ ನನ್ನ ಕಾಲಿಗೆ ಬಿದ್ದ ವಿಡಿಯೊ ಇದೆ: ಸಿ.ಪಿ.ಯೋಗೇಶ್ವರ್‌ ಸವಾಲು

Last Updated 31 ಜುಲೈ 2020, 19:41 IST
ಅಕ್ಷರ ಗಾತ್ರ

ಬೆಂಗಳೂರು:‘ನಾನು ಶಿವಕುಮಾರ್‌ ಅವರ ಮನೆಗೆ ಹೋಗಿ ಕಾಲು ಹಿಡಿದಿದ್ದು ನಿಜವೇ ಆಗಿದ್ದರೆ, ಜನರ ಮುಂದೆ ಸಾಕ್ಷ್ಯವನ್ನು ಇಡಲಿ. ಡಿ.ಕೆ ನನ್ನ ಕಾಲಿಗೆ ಬಿದ್ದ ವಿಡಿಯೊ ನನ್ನ ಬಳಿ ಇದೆ. ಅದನ್ನು ಬಹಿರಂಗಪಡಿಸಲು ಸಿದ್ಧ’ ಎಂದು ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಸಿ.ಪಿ. ಯೋಗೇಶ್ವರ್‌ ಸವಾಲು ಹಾಕಿದರು.

‘15 ದಿನಗಳ ಹಿಂದೆ ಯೋಗೇಶ್ವರ್‌ ಬಂದು ನನ್ನ ಕಾಲು ಹಿಡಿದುಕೊಂಡ. ಸದ್ಯದಲ್ಲೇ ಯಡಿಯೂರಪ್ಪನವರನ್ನು
ಕುರ್ಚಿಯಿಂದ ಕೆಳಗಿಳಿಸುತ್ತಾರೆ. ನನ್ನನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಿ ಎಂದಿದ್ದ. ಆಗ ನಾನು ಬೇಡಪ್ಪ, ನೀನು ಬಿಜೆಪಿಗೆ ನಿಷ್ಠ
ನಾಗಿರು ಎಂದು ವಾಪಸು ಕಳುಹಿಸಿದ್ದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಗುರುವಾರ ಹೇಳಿದ್ದರು.

ಇದಕ್ಕೆ ಶುಕ್ರವಾರ ಪ್ರತಿಕ್ರಿಯಿಸಿದ ಯೋಗೇಶ್ವರ್‌, ‘ಸಚಿವ ಸಂಪುಟ ವಿಸ್ತರಣೆ ವೇಳೆ ನನಗೆ ಸಚಿವ ಸ್ಥಾನ ಸಿಗಲಿದ್ದು, ಅದನ್ನು ತಪ್ಪಿಸುವ ಉದ್ದೇಶದಿಂದ ಡಿ.ಕೆ.ಶಿವಕುಮಾರ್‌ ಮತ್ತು ಅವರ ಸಹೋದರ, ಬಿಜೆಪಿ ಹಾಗೂ ನನ್ನ ಮಧ್ಯೆ ವಿಷದ ಬೀಜ ಬಿತ್ತುವ ಪ್ರಯತ್ನ ನಡೆಸಿದ್ದಾರೆ’ ಎಂದು ದೂರಿದರು.

‘ಡಿ.ಕೆ ಅವರ ಮನೆಯ ಒಳಗೆ ಮತ್ತು ರಸ್ತೆಯಲ್ಲಿ ಸಾಕಷ್ಟು ಸಿ.ಸಿ ಟಿವಿ ಕ್ಯಾಮೆರಾಗಳನ್ನು ಹಾಕಿಸಿದ್ದಾರೆ. ನಾನು ಅವರ ಮನೆಗೆ ಹೋಗಿದ್ದೇ ಆಗಿದ್ದರೆ, ಅದರಲ್ಲಿ ದೃಶ್ಯಗಳು ದಾಖಲಾಗಿರುತ್ತವೆ. ದಯಮಾಡಿ ಆ ಸಾಕ್ಷ್ಯವನ್ನು ರಾಜ್ಯದ ಜನರಿಗೆ ತೋರಿಸಲಿ. ಆದರೆ, ಅವರೇ ಈ ಹಿಂದೆ ಹಲವು ಬಾರಿ ಹಣ, ಆಸ್ತಿ, ಅಧಿಕಾರ, ಪಕ್ಷ ಸಂಘಟನೆ ಸೇರಿ ವಿವಿಧ ಅನುಕೂಲಗಳಿಗಾಗಿ ನನ್ನ ಕಾಲಿಗೆ ಬಿದ್ದಿರುವ ವಿಡಿಯೊ ಇದೆ. ಬೇಕೆಂದರೆ ಅದನ್ನು ರಾಜ್ಯದ ಜನರ ಮುಂದೆ ಪ್ರದರ್ಶಿಸಲು ಸಿದ್ಧನಿದ್ದೇನೆ’ ಎಂದರು.

‘ಇತರರು ಬೆಳೆಯುವುದನ್ನು ಸಹಿಸದ ಮತ್ತು ಹೊಟ್ಟೆಕಿಚ್ಚಿನ ಕಾರಣದಿಂದ ಶಿವಕುಮಾರ್‌ ತೀರಾ ಕೆಳ ಮಟ್ಟಕ್ಕೆ ಇಳಿದಿದ್ದಾರೆ. ಇದೇ ರೀತಿ ಆರೋಪಗಳನ್ನು ಮುಂದುವರಿಸಿಕೊಂಡು ಬಂದರೆ, ಅವರ ರಾಜಕೀಯ ಜೀವನದ ವಾಸ್ತವ ಸಂಗತಿಗಳನ್ನು ಜನರ ಮುಂದೆ ಬಿಚ್ಚಿಡಬೇಕಾಗುತ್ತದೆ’ ಎಂದೂ ಎಚ್ಚರಿಸಿದರು.

‘ವಿಧಾನಪರಿಷತ್‌ಗೆ ನೇಮಕ ಮತ್ತು ಸಚಿವ ಸ್ಥಾನ ನೀಡುವ ಬಗ್ಗೆ ಪಕ್ಷದ ರಾಜ್ಯ ಮತ್ತು ಕೇಂದ್ರದ ವರಿಷ್ಠರು ಹಿಂದೆಯೇ ಭರವಸೆ ನೀಡಿದ್ದರು. ಮೂರು ತಿಂಗಳ ಹಿಂದೆ ಮುಖ್ಯಮಂತ್ರಿ ಯಡಿಯೂರಪ್ಪ ಮನೆಗೆ ಕರೆಸಿ, ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡುವ ಭರವಸೆ ನೀಡಿದ್ದರು’ ಎಂದರು.

*********

ಡಿ.ಕೆ. ಶಿವಕುಮಾರ್‌ ಅವರು ಕೊತ್ವಾಲ್ ರಾಮಚಂದ್ರನ ಸಂಸ್ಕೃತಿಯಿಂದ ಮೊದಲು ಹೊರಬರಲಿ. ಗೌರವಯುತವಾಗಿ ಮಾತನಾಡುವುದನ್ನು ಕಲಿಯಲಿ
-ಸಿ.ಪಿ.ಯೋಗೇಶ್ವರ್‌
ವಿಧಾನಪರಿಷತ್ತಿನ ಬಿಜೆಪಿ ಸದಸ್ಯ

***
ಆರೋಪಕ್ಕೆ ಸಾಕ್ಷಿ ಇದೆಯೇ: ದೇವೇಗೌಡ

‘ಸಿ.ಪಿ. ಯೋಗೇಶ್ವರ್‌‌ ಅವರು ಕುಮಾರಸ್ವಾಮಿ ವಿರುದ್ಧ ಮಾಡಿರುವ ಆರೋಪಕ್ಕೆ ಸಾಕ್ಷಿ ಏನಾದರೂ ಇದೆಯೇ’ ಎಂದು ದೇವೇಗೌಡರು ಪ್ರಶ್ನಿಸಿದರು.

‘ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ’ ಎಂದು ಸಿ.ಪಿ. ಯೋಗೇಶ್ವರ್ ಪ್ರತಿಪಾದಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ದೇವೇಗೌಡರು, ‘ಕುಮಾರಸ್ವಾಮಿ ಅವರು ಕದ್ದು ಹೋಗಿ ಯಾರನ್ನೂ ಭೇಟಿ ಮಾಡುವ ಅವಶ್ಯಕತೆ ಇಲ್ಲ. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಒಂದು ಕಾಲದಲ್ಲಿ ಜತೆಯಾಗಿ ಅಧಿಕಾರ ನಡೆಸಿದ್ದಾರೆ. ಅದು ಮುಗಿದ ಅಧ್ಯಾಯ. ರಾಜಕಾರಣಿಗಳು ಮತ್ತೊಬ್ಬರ ಬಗ್ಗೆ ಲಘುವಾಗಿ ಮಾತಾಡಬಾರದು’ ಎಂದರು.

‘ಜೆಡಿಎಸ್ ಕಾರ್ಯಕರ್ತರನ್ನು ಡಿ.ಕೆ. ಶಿವಕುಮಾರ್ ಮತ್ತು ಸಹೋದರರು ಕಾಂಗ್ರೆಸ್‌ಗೆ ಸೆಳೆಯುತ್ತಾರೆ ಎಂಬ ಊಹಾಪೋಹದ ಮಾತುಗಳಿಗೆ ನಾನು ಉತ್ತರ ನೀಡುವುದಿಲ್ಲ. ನನಗೂ ಸಾಕಷ್ಟು ರಾಜಕೀಯ ಅನುಭವ ಇದೆ. ಏನು ನಡೆಯುತ್ತಿದೆ ಎಲ್ಲವೂ ಗೊತ್ತಿದೆ’ ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT