ಬುಧವಾರ, ಆಗಸ್ಟ್ 4, 2021
26 °C

ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ: 432 ಎಕರೆವರೆಗೂ ಭೂಮಾಲೀಕತ್ವಕ್ಕೆ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತರಲು ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

5 ಸದಸ್ಯರಿಗಿಂತ ಹೆಚ್ಚಿರುವ ಕುಟುಂಬ ಗರಿಷ್ಠ 432 ಎಕರೆಯವರೆಗೆ ಭೂಮಿ ಹೊಂದಲು ಅವಕಾಶ ಕಲ್ಪಿಸಿರುವ ತಿದ್ದುಪಡಿ, 79ಎ, 79 ಬಿ ಹಾಗೂ ಸಿ ಅಡಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳನ್ನು ಮುಕ್ತಾಯಗೊಳಿಸಲು ದಾರಿ ಮಾಡಿಕೊಟ್ಟಿದೆ.

ಉಳುವವನಿಗೆ ಭೂಮಿ ಆಶಯದಡಿ 1974ರಲ್ಲಿ ತಂದಿದ್ದ ಭೂಸುಧಾರಣೆ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತರಲು ಮುಂದಾದಾಗ ಪರ–ವಿರೋಧದ ವಾದಗಳು ಎದ್ದಿದ್ದವು. ಭೂಮಿ ಮಾರಲು ಹಾಗೂ ಖರೀದಿಸಲು ಇದ್ದ ದೊಡ್ಡ ಬೇಲಿಯೊಂದನ್ನು ಕಿತ್ತುಹಾಕಿದಂತಾಗಿ, ರೈತರು ಸ್ವತಂತ್ರರಾಗಲಿದ್ದಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು.

ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದ ತಿದ್ದುಪಡಿಗಳಿಗೆ ಮತ್ತೊಂದಿಷ್ಟು ಬದಲಾವಣೆ ಮಾಡಿ ಸುಗ್ರೀವಾಜ್ಞೆ ಹೊರಡಿಸಲಾಗಿದೆ.

* ನೀರಾವರಿಯೇತರ ಜಮೀನಾಗಿದ್ದು, ಒಂದು ಕುಟುಂಬದಲ್ಲಿ ಐದು ಸದಸ್ಯಗಿಂತ ಜಾಸ್ತಿ ಇದ್ದರೆ ಹಿಂದೆ 20 ಯೂನಿಟ್‌ (108 ಎಕರೆ) ಭೂಮಿ ಹೊಂದಬಹುದಿತ್ತು. ಈಗ ಅದನ್ನು 216 ಎಕರೆಗೆ ಹೆಚ್ಚಿಸಲಾಗಿದೆ.
* ಹಿಂದೆ ಗೇಣಿದಾರರಾಗಿದ್ದು, ಈಗ ಭೂಒಡೆಯರಾಗಿದ್ದರೆ ಹಾಗೂ ಐದಕ್ಕಿಂತ ಹೆಚ್ಚಿನ ಸದಸ್ಯರಿರುವ ಕುಟುಂಬದವರಾಗಿದ್ದರೆ 432 ಎಕರೆ ಭೂಮಿಯನ್ನು ಹೊಂದಲು (ಸೆಕ್ಷನ್ 63 ಸಬ್‌ಸೆಕ್ಷನ್‌ 2ಎ) ಅವಕಾಶ ಕಲ್ಪಿಸಲಾಗಿದೆ. ಇಂತಹ ಕುಟುಂಬಗಳ ಸಂಖ್ಯೆ 8 ಲಕ್ಷದಷ್ಟಿದೆ ಎಂದು ಅಂದಾಜಿಸಲಾಗಿದೆ.
* ಸೆಕ್ಷನ್ 80ರ ಅಡಿ ರೈತರಲ್ಲದವರಿಗೆ ಭೂಮಿಯನ್ನು ವರ್ಗಾವಣೆ ಮಾಡುವಂತಿರಲಿಲ್ಲ. ಆದರೆ, ಆ ನಿರ್ಬಂಧ ತೆಗೆದುಹಾಕಲಾಗಿದೆ. ಆದರೆ, ಎ ದರ್ಜೆಯ (ನೀರಾವರಿಗೆ ಒಳಪಡಿಸಿರುವ ಹಾಗೂ ಅಚ್ಚುಕಟ್ಟು ಪ್ರದೇಶ) ಭೂಮಿಯನ್ನು ವರ್ಗಾವಣೆ ಮಾಡಲು ನಿರ್ಬಂಧ ಹೇರಲಾಗಿದೆ.
* ಕೃಷಿ ಕುಟುಂಬಕ್ಕೆ ಸೇರಿದವರು, ಹೆಚ್ಚಿನ ಆದಾಯ ಇರುವವರು ಖರೀದಿಸಿದ ಪ್ರಸಂಗದಲ್ಲಿ ಅದನ್ನು ಸರ್ಕಾರದ ಸುಪರ್ದಿಗೆ ಪಡೆಯಲು 79 ಎ, 79 ಬಿ ಅಡಿ ಪ್ರಕರಣ ದಾಖಲಿಸಲು, ಕಾಯ್ದೆ ಉಲ್ಲಂಘಿಸಿದ್ದು ದೃಢಪಟ್ಟರೆ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಇತ್ತು. ಇಂತಹ ಸೆಕ್ಷನ್ ಅಡಿರಾಜ್ಯದಲ್ಲಿ ಇತ್ಯರ್ಥವಾಗದೇ ಬಾಕಿ ಇರುವ ಪ್ರಕರಣಗಳನ್ನು ಸುಗ್ರೀವಾಜ್ಞೆ ಮುಕ್ತಾಯಗೊಳಿಸಲಿದೆ.

ಒಂದು ವೇಳೆ ಜಿಲ್ಲಾಧಿಕಾರಿ ಆದೇಶದ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಹೋಗಿ, ಪ್ರಕರಣ ವಿಚಾರಣೆ ಹಂತದಲ್ಲಿದ್ದರೆ ಅದನ್ನು ಸುಗ್ರೀವಾಜ್ಞೆ ಆಧರಿಸಿ ವಜಾಗೊಳಿಸುವಂತೆ ಮೇಲ್ಮನವಿದಾರ ಕೋರಬಹುದು. ಆದರೆ, ಈ ಹಿಂದೆ ಜಿಲ್ಲಾಧಿಕಾರಿ ಅಥವಾ ಉಪವಿಭಾಗಾಧಿಕಾರಿ ಕೋರ್ಟ್‌ಗಳಲ್ಲಿ ಇತ್ಯರ್ಥವಾಗಿರುವ ಪ್ರಕರಣಗಳಿಗೆ ಈ ಸುಗ್ರೀವಾಜ್ಞೆ ಅನ್ವಯವಾಗುವುದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು