ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡ್ಡಾ–ಸವದಿ ಭೇಟಿ ತಂದ ಕುತೂಹಲ

ಮುಂದಿನ ಮೂರು ವರ್ಷ ಯಡಿಯೂರಪ್ಪ ಅವರೇ ಸಿ.ಎಂ: ಲಕ್ಷ್ಮಣ ಸವದಿ
Last Updated 29 ಜುಲೈ 2020, 20:59 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸಚಿವರು, ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಚರ್ಚಿಸಿದ್ದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಬುಧವಾರ ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಸವದಿ ಅವರು ನಾಯಕತ್ವದ ಬದಲಾವಣೆ ಸಂಬಂಧ ವರಿಷ್ಠರ ಜತೆ ಮಾತುಕತೆ ನಡೆಸಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ಆದರೆ, ಸವದಿ ಈ ವದಂತಿಗಳನ್ನು ಅಲ್ಲಗಳೆದಿದ್ದಾರೆ.

ನಡ್ಡಾ ಜತೆ ಮಾತುಕತೆಯ ಬಳಿಕ ಗೃಹ ಸಚಿವ ಅಮಿತ್‌ ಶಾ ಅವರ ಭೇಟಿಗೂ ಸವದಿ ಪ್ರಯತ್ನಿಸಿದರು. ಆದರೆ, ಶಾ ಅವರ ಭೇಟಿ ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಎಲ್ಲ ಬೆಳವಣಿಗೆ ಕುರಿತಂತೆ ದೆಹಲಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಲಕ್ಷ್ಮಣ ಸವದಿ, ‘ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ, ಬಿಎಸ್.ಯಡಿಯೂರಪ್ಪ ಅವರೇ ಮುಂದಿನ ಮೂರು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ನಾನು ಮುಖ್ಯಮಂತ್ರಿ ಹುದ್ದೆಗೆ ಪ್ರಯತ್ನಿಸುತ್ತಿದ್ದೇನೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದರಲ್ಲಿ ಹುರುಳಿಲ್ಲ’ ಎಂದು ಅವರು ಹೇಳಿದರು.

‘ಬೆಂಗಳೂರಿನಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಕುರಿತು ವದಂತಿ
ಗಳು ಹರಡಲಾರಂಭಿಸಿತು. ಇಲಾಖೆ ಕೆಲಸಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡುವ ಉದ್ದೇಶ
ದಿಂದ ದೆಹಲಿಗೆ ಬಂದಿದ್ದೇನೆ’ ಎಂದು ಹೇಳಿದರು.

‘ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಒಂದು ವರ್ಷದಲ್ಲಿ ಮಾಡಿರುವ ಸಾಧನೆಗಳನ್ನು ಅವರ ಗಮನಕ್ಕೆ ತಂದಿದ್ದೇನೆ. ನಡ್ಡಾ ಅವರು ಯಡಿಯೂರಪ್ಪ ಅವರಿಗೆ ಶುಭಾಶಯ
ಗಳನ್ನು ಕೋರಿದ್ದಾರೆ’ ಎಂದರು.

‘ನಾನು ನಡ್ಡಾ ಅವರನ್ನು ಭೇಟಿ ಮಾಡಲು ಹೋದಾಗ ಅವರು ವಿಡಿಯೊ ಸಂವಾದದಲ್ಲಿ ಯಡಿಯೂರಪ್ಪ ಜತೆ ಮಾತನಾಡುತ್ತಿದ್ದರು. ತಕ್ಷಣವೇ ನನ್ನನ್ನು ಒಳಗೆ ಕರೆದರು, ಏನಪ್ಪಾ ಏಕೆ ಬಂದಿದ್ದೀಯ ಎಂದು ಕೇಳಿದರು. ರಾಜ್ಯದಲ್ಲಿ ನಮ್ಮ ಸರ್ಕಾರ ಒಂದು ವರ್ಷ ತುಂಬಿದ್ದಕ್ಕೆ ಸಿಹಿ ನೀಡಲು ಬಂದಿದ್ದೇನೆ ಎಂದು ಅವರಿಗೆ ಹೇಳಿದೆ. ಅವರಿಗೆ ಬಹಳ ಸಂತೋಷ ಆಯಿತು’ ಎಂದು ಸವದಿ ಹೇಳಿದರು.

ಯಡಿಯೂರಪ್ಪ ಏಕಾಂಗಿ ಅಲ್ಲ: ‘ಯಡಿಯೂರಪ್ಪ ಏಕಾಂಗಿ ಅಲ್ಲ. ಸರ್ಕಾರದಲ್ಲಿ ಎಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ. ಸವದಿ ಮತ್ತು ಶಶಿಕಲಾ ಜೊಲ್ಲೆ ಅವರ ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ’ ಎಂದು ಮುಖ್ಯಮಂತ್ರಿ
ಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಹೇಳಿದ್ದಾರೆ.

ನಡ್ಡಾ ಭೇಟಿ ಬಳಿಕ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದೆ. ಕಾರ್ಯದ ಒತ್ತಡದ ಕಾರಣ ಭೇಟಿಗೆ ಅವಕಾಶ ಸಿಗಲಿಲ್ಲ
-ಲಕ್ಷ್ಮಣ ಸವದಿ, ಉಪಮುಖ್ಯಮಂತ್ರಿ

***

ಶಶಿಕಲಾ ಜೊಲ್ಲೆ ದೆಹಲಿಗೆ ದೌಡು

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಲು ದೆಹಲಿಯಲ್ಲಿ ಮೊಕ್ಕಾಂ ಮಾಡಿದ್ದಾರೆ.

ತಮ್ಮ ಭೇಟಿಯ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದೆಹಲಿ ಭೇಟಿಯ ಕುರಿತು ಊಹಾಪೋಹಗಳು ಹರಿದಾಡುತ್ತಿವೆ. ನನ್ನನ್ನು ಸಂಪುಟದಿಂದ ತೆಗೆಯುವ ಸ್ಥಿತಿ ಇಲ್ಲ. ಇಲಾಖೆಯ ಕೆಲಸ
ಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ಮೂರು ತಿಂಗಳ ಮೊದಲೇ ಬರಬೇಕಿತ್ತು. ಆದರೆ, ಆಗ ಲಾಕ್‌ಡೌನ್‌ ಆಗಿದ್ದರಿಂದ ಬರಲು ಸಾಧ್ಯವಾಗಲಿಲ್ಲ. ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ ಮತ್ತು ಸ್ಮೃತಿ ಇರಾನಿ ಅವರ ಭೇಟಿಗಾಗಿ ಬಂದಿದ್ದೇನೆ’ ಎಂದು ಹೇಳಿದರು. ‘ನಾನು ಇಲ್ಲಿ ಬಂದಾಗ ಸವದಿಯವರೂ ಇದ್ದರು. ಅವರನ್ನು ಭೇಟಿ ಮಾಡಿದೆ. ಸಂಪುಟ ಪುನಾರಚನೆ ಆಗಬಹುದು. ಆದರೆ ಯಾರನ್ನು ತೆಗೆಯುತ್ತಾರೆ ಎಂಬ ಬಗ್ಗೆ ಮಾಹಿತಿ ಇಲ್ಲ’ ಎಂದು ಜೊಲ್ಲೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT