ಸೋಮವಾರ, ಆಗಸ್ಟ್ 2, 2021
28 °C

ಲಾಕ್‌ಡೌನ್‌ನಿಂದ ಎಂಎಸ್ಎಂಇ ಮೇಲೆ ಹೊಡೆತ: ಕಾಸಿಯಾ ಅಧ್ಯಕ್ಷ ಕೆ.ಬಿ. ಅರಸಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ  ಒಂದು ವಾರ ಲಾಕ್ ಡೌನ್ ಘೋಷಿಸಿರುವುದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್ ಎಂಇ) ಮತ್ತೆ ಸಂಕಷ್ಟಕ್ಕೆ ಸಿಲುಕಲಿವೆ. ಉದ್ಯಮಗಳು‌ ಕನಿಷ್ಠ ಒಂದು ಪಾಳಿಯಲ್ಲಾದರೂ ಕಾರ್ಯನಿರ್ವಹಿಸಲು ಸರ್ಕಾರ ಅನುವು ಮಾಡಿಕೊಡಬೇಕು ಎಂದು ಕಾಸಿಯಾ ಒತ್ತಾಯಿಸಿದೆ. 

'ರಾಜ್ಯದಲ್ಲಿ ಒಂದು ತಿಂಗಳಲ್ಲಿ ಉದ್ಯಮಗಳಿಂದ ಬರುವ  ಸುಮಾರು ₹10,000 ಕೋಟಿ ಆದಾಯದಲ್ಲಿ ಬೆಂಗಳೂರು ಮಹಾನಗರವು ಶೇ 70ರಷ್ಟು  ಕೊಡುಗೆಯನ್ನು ನೀಡುತ್ತಿದೆ.  ಒಂದು ವಾರ ಮಹಾನಗರ ಲಾಕ್‌ಡೌನ್ ಆದರೆ ರಾಜ್ಯದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂಪಾಯಿ‌ ನಷ್ಟವಾಗುತ್ತದೆ' ಎಂದು ಕಾಸಿಯಾ ಅಧ್ಯಕ್ಷ ಕೆ.ಬಿ. ಅರಸಪ್ಪ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

'ನಗರದಲ್ಲಿ ತೀವ್ರವಾಗಿ ಉಲ್ಬಣಗೊಳ್ಳುತ್ತಿರುವ ಕೊರೊನಾ ಸೋಂಕು  ನಿಭಾಯಿಸಲು ಸರ್ಕಾರವು ಕಠಿಣ ಮತ್ತು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವುದು ಖಂಡಿತವಾಗಿಯೂ ಅಗತ್ಯವಿದೆ. ಆದರೆ,  ಸಂಪೂರ್ಣವಾಗಿ ತೊಂದರೆಗೊಳಗಾದ ಸಣ್ಣ ಕೈಗಾರಿಕಾ ವಲಯದ ಮೇಲೆ ಇವೆಲ್ಲವುಗಳ ಪರಿಣಾಮಗಳು ನಮ್ಮನ್ನು ಚಿಂತೆಗೀಡು ಮಾಡುತ್ತಿವೆ' ಎಂದು ಅವರು ಹೇಳಿದರು. 

'ಬೆಂಗಳೂರಿನಲ್ಲಿ ಸುಮಾರು 2.40 ಲಕ್ಷ ನೋಂದಾಯಿತ ಘಟಕಗಳಿದ್ದು, ಇವುಗಳು 25 ಲಕ್ಷ ಉದ್ಯೋಗ ಕಲ್ಪಿಸಿವೆ. ಅಲ್ಲದೆ ಸುಮಾರು ₹40 ಸಾವಿರ ಕೋಟಿ  ಬಂಡವಾಳ ಹೂಡಿವೆ' ಎಂದರು.

'ಹಿಂದಿನ ಲಾಕ್‌ಡೌನ್ ಕಾರಣದಿಂದಾಗಿ ಅಂದಾಜು ಶೇಕಡಾ 20ರಷ್ಟು ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಈಗಾಗಲೇ ರಾಜ್ಯದಲ್ಲಿ ಮುಚ್ಚಲ್ಪಟ್ಟಿವೆ. ಈಗ ಮತ್ತೆ ಲಾಕ್ ಡೌನ್ ಹೇರಿದರೆ ಅವುಗಳನ್ನು ತಡೆದುಕೊಳ್ಳುವ ಸ್ಥಿತಿಯಲ್ಲಿ ಕೈಗಾರಿಕೆಗಳಿಲ್ಲ' ಎಂದು ಅವರು ಹೇಳಿದರು.

'ಲಾಕ್ ಡೌನ್ ಮುಂದುವರಿಸಿದರೆ  ಯಾವುದೇ ಉದ್ಯಮಿಗಳಿಗೆ ಕಾರ್ಮಿಕರ ವೇತನವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಮತ್ತು ಸಾಮಾನ್ಯ ಸ್ಥಿತಿಗೆ ಮರಳಿದಾಗ  ಕಾರ್ಮಿಕರನ್ನ ಪುನಃ ನೇಮಿಸಿಕೊಳ್ಳಲು ಸಾಧ್ಯವಾಗುವುದಿಲ್ಲ' ಎಂದೂ ಅವರು ಹೇಳಿದರು. 

ಕಾಸಿಯಾದ ಪದಾಧಿಕಾರಿಗಳಾದ ಎನ್.ಆರ್. ಜಗದೀಶ್, ಪಿ.ಎನ್. ಜೈಕುಮಾರ್, ಎಸ್. ಶಂಕರನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು