ಬುಧವಾರ, ಆಗಸ್ಟ್ 4, 2021
22 °C

ಕೋವಿಡ್‌ ಗೆದ್ದವರ ಕಥೆಗಳು | ಭಯ ಬಿಟ್ಟರೆ ಕೊರೊನಾದಿಂದ ಹೊರಬರೋದು ಸುಲಭ

ರಘು ಹೆಬ್ಬಾಲೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ: ‘ಕೋವಿಡ್‌–19 ಬಂತೆಂದು ನಾನು ಭಯ ಪಡಲಿಲ್ಲ; ಯಾರಿಗೇ ಬಂದರೂ ಭಯಪಡುವ ಅಗತ್ಯವೂ ಇಲ್ಲ’ – ಹೀಗೆ ಹೇಳಿದವರು ಕೋವಿಡ್‌ನಿಂದ ಏಳು ದಿನಗಳಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಕುಶಾಲನಗರದ ಎನ್.ಕೆ.ಮೋಹನ್ ಕುಮಾರ್.

‘ಕೊರೊನಾ ರಿಪೋರ್ಟ್ ಪಾಸಿಟಿವ್ ಬಂದಿದೆ’ ಎಂದು ಫೋನ್‌ ಮೂಲಕ ವೈದ್ಯರು ತಿಳಿಸಿದಾಗ ನನಗೆ ತುಂಬ ಆಶ್ಚರ್ಯವಾಯಿತು. ಕ್ಷಣಕಾಲ ಯಾವುದೂ ತಿಳಿಯಲಿಲ್ಲ. ಕೊರೊನಾ ಪ್ರಕರಣದ ಯಾವುದೇ ಲಕ್ಷಣಗಳು ನನ್ನಲ್ಲಿ ಕಂಡುಬಂದಿರಲಿಲ್ಲ. ಆದರೆ, ಹೇಗೆ ಪಾಸಿಟಿವ್ ಬಂತೋ ಗೊತ್ತಿಲ್ಲ. ಆದರೆ, ಧೈರ್ಯದಿಂದ ಎದುರಿಸಿ ಗೆದ್ದ’ ಎಂದರು.

‘ಜುಲೈ 3ರಂದು ನನ್ನ ಮಗನಿಗೆ ಜ್ವರ ಬಂದಿತ್ತು. ಚಿಕಿತ್ಸೆ ಕೊಡಿಸಲು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದೆ. ಈ ಸಂದರ್ಭ ಮಗನ ಗಂಟಲು ದ್ರವ ಪರೀಕ್ಷೆ ಮಾಡಿಸಿದೆ. ಆಗ ವೈದ್ಯರು ನೀವೂ ಪರೀಕ್ಷೆ ಮಾಡಿಸಿಕೊಳ್ಳಿ ಎಂಬ ಸಲಹೆ ನೀಡಿದರು. ಅದರಂತೆ ನಾನೂ ಕೂಡ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡೆ. ಜುಲೈ 12ರಂದು ಮಧ್ಯಾಹ್ನ 12 ಗಂಟೆಗೆ ವೈದ್ಯರಾದ ಡಾ.ಮಹೇಶ್ ಕರೆ ಮಾಡಿ ನಾಳೆ ನಿಮ್ಮ ಮನೆಗೆ ಆರೋಗ್ಯ ಸಿಬ್ಬಂದಿಗಳು ಬಂದು ಪರೀಕ್ಷಿಸುವ ವಿಷಯ ತಿಳಿಸಿದರು. ಆರೋಗ್ಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಆಂಬ್ಯುಲೆನ್ಸ್ ಮೂಲಕ ಮನೆಗೆ ಬಂದು ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆಯೇ ಭಯಾನಕವಾಗಿತ್ತು. ಯಾರೋ ದೊಡ್ಡ ರೌಡಿ, ಅಪರಾಧ ಎಸಗಿದ ವ್ಯಕ್ತಿಯನ್ನು ಕರೆದುಕೊಂಡು ಹೋಗುವ ರೀತಿಯಲ್ಲಿತ್ತು. ಇದರಿಂದ ಸ್ವಲ್ಪ ಬೇಸರವಾಯಿತು. ಇದು ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಗೆ ಕಾರಣವಾಗುತ್ತಿದೆ. ಇದು ಎಷ್ಟು ದುಷ್ಪರಿಣಾಮ ಬೀರುತ್ತಿದೆ ಎಂದರೆ ಜನರು ಕೊರೊನಾ ಹೆಸರು ಕೇಳಿದರೆ ಸಾಕು ಭಯ ಪಡುವ ಪರಿಸ್ಥಿತಿಯಿದೆ. ಈ ವ್ಯವಸ್ಥೆ ಬದಲಾಗಬೇಕು’ ಎಂದು ಮೋಹನ್‌ಕುಮಾರ್‌ ನುಡಿದರು.

‘ಸೋಂಕಿತನ ಮನೆಗೆ ಮಾತ್ರ ಸೀಲ್‌ಡೌನ್ ಮಾಡಲಿ. ಅಗತ್ಯ ಆರೋಗ್ಯ ಸೇವೆ ಸೇರಿದಂತೆ ಇನ್ನಿತರ ವ್ಯವಸ್ಥೆ ಕಲ್ಪಿಸುವುದು ಅಗತ್ಯ. ಅದನ್ನು ಬಿಟ್ಟು ಇಡೀ ಬೀದಿಗೆ, ಊರಿಗೆ ಸೀಲ್‌ಡೌನ್ ಮಾಡುವ ಅವಶ್ಯಕತೆ ಇಲ್ಲ ಎಂಬುದು ನನ್ನ ಅನಿಸಿಕೆ’ ಎಂದು ಸಲಹೆ ನೀಡಿದರು.

ಜುಲೈ 13ರಂದು ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದೆ. ಅಲ್ಲಿ ಮೊದಲ 5 ದಿನ ವಿಟಮಿನ್ ‘ಸಿ’ ಸೇರಿದಂತೆ ವಿವಿಧ ಔಷಧವನ್ನು ನೀಡಲಾಗುತ್ತಿತ್ತು. ಜೊತೆಗೆ ರಕ್ತ, ಇಸಿಜಿ ಹಾಗೂ ಎಕ್ಸರೇ ಮಾಡಿದರು. ಆಸ್ಪತ್ರೆ ವ್ಯವಸ್ಥೆ ಮಾತ್ರ ತುಂಬ ಚೆನ್ನಾಗಿದೆ. ಆಸ್ಪತ್ರೆಯಲ್ಲಿನ ವೈದ್ಯರು ಹಾಗೂ ಸಿಬ್ಬಂದಿಗಳು ಪಿ.ಪಿ.ಇ ಕಿಟ್ ಧರಿಸಿಕೊಂಡೇ ತಮ್ಮ ಜೀವದ ಹಂಗು ತೊರೆದು ಚಿಕಿತ್ಸೆ ನೀಡಿದ ಅವರ ಸೇವೆ ಅವಿಸ್ಮರಣೀಯ. ಆಸ್ಪತ್ರೆಯಲ್ಲಿ ಯಾವುದೇ ಭಯವಿಲ್ಲದೆ ಆರಾಮವಾಗಿ ಆಸ್ಪತ್ರೆಯಲ್ಲಿದ್ದೆ. ಬಿಸಿನೀರು ಹಾಗೂ ಹೊಟ್ಟೆತುಂಬಾ ಊಟ ಮಾಡಲು ಹೇಳುತ್ತಿದ್ದರು. ವಿಟಮಿನ್ ‘ಸಿ’ ಮಾತ್ರೆಯನ್ನು ಕೆಲವು ದಿನಗಳವರೆಗೆ ಸೇವಿಸಲು ಸಲಹೆ ನೀಡಲಾಗಿದೆ. ಚಿಕಿತ್ಸೆಯ ಅವಧಿಯಲ್ಲಿ ಶುಚಿ, ರುಚಿಯಾದ ಉತ್ತಮ ಆಹಾರವನ್ನೇ ನೀಡಲಾಗುತ್ತಿತ್ತು’ ಎಂದು ಹೇಳಿದರು.

‘ಊಟ, ತಿಂಡಿ ವ್ಯವಸ್ಥೆ ಕೂಡ ತುಂಬ ಚೆನ್ನಾಗಿತ್ತು. ಇದರೊಂದಿಗೆ ಸಂಜೆ ವೇಳೆ ಸೂಪ್ ಸಹ ನೀಡುತ್ತಿದ್ದರು. 5 ದಿನಗಳ ನಂತರ ನೀವು ಗುಣಮುಖರಾಗಿದ್ದೀರಿ ಎಂದು ಆಸ್ಪತ್ರೆಯಿಂದ ಬಿಡುಗಡೆ ಪತ್ರ ನೀಡಿ ಕಳುಹಿಸಿದರು. ಆದರೆ, ಮುಂದೆ ನೀವು ಹೇಗೆ ಇರಬೇಕು ಎಂಬ ಮಾಹಿತಿ ಮಾತ್ರ ನೀಡಲಿಲ್ಲ. ಬಿಡುಗಡೆ ಪತ್ರದಲ್ಲಿ ಎಲ್ಲ ಮಾಹಿತಿ ಇದೆ ಎನ್ನುತ್ತಾರೆ. ಇದರಲ್ಲಿ ಏನು ಅರ್ಥವಾಗುವುದಿಲ್ಲ’ ಎಂದರು.

‘ಕೊರೊನಾ ಬಗ್ಗೆ ಯಾವುದೇ ಭಯ- ಆತಂಕ ಅನಗತ್ಯ. ಪ್ರತಿಯೊಬ್ಬರೂ ಆರೋಗ್ಯ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಅಷ್ಟೆ. ಹೆಚ್ಚಿನ ವಿಶ್ರಾಂತಿಯೊಂದಿಗೆ ಆಗಾಗ ಬಿಸಿನೀರು ಹಾಗೂ ಆರೋಗ್ಯಕರವಾದ ಆಹಾರ ಸೇವಿಸಿದರೆ ಯಾವ ಸೋಂಕಿಗೂ ಭಯಪಡುವ ಅಗತ್ಯವಿಲ್ಲ’ ಎಂದೂ ಮೋಹನ್‌ ಸಲಹೆಯಿತ್ತರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು