ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಸಂದೇಶ: ಕ್ಷಮೆ ಕೇಳಿದ ಮುರುಗೇಶ ನಿರಾಣಿ

Last Updated 21 ಜುಲೈ 2020, 17:29 IST
ಅಕ್ಷರ ಗಾತ್ರ

ಬಾಗಲಕೋಟೆ: ಹಿಂದೂ ದೇವತೆಗಳ ಬಗ್ಗೆ ಅವಹೇಳನ ಮಾಡಿಬಸವಣ್ಣನ ವಿಚಾರಗಳ ಉಲ್ಲೇಖಿಸಿದ ಸಂದೇಶವೊಂದು ಶಾಸಕರ ವಾಟ್ಸ್ಆ್ಯಪ್ ಗುಂಪಿಗೆ ಬೀಳಗಿ ಶಾಸಕ ಮುರುಗೇಶ ನಿರಾಣಿ ಅವರ ಮೊಬೈಲ್‌ ಸಂಖ್ಯೆಯಿಂದ ರವಾನೆಯಾಗಿದೆ ಎಂಬ ವಿಚಾರ ಮಂಗಳವಾರ ವಿವಾದಕ್ಕೆ ಕಾರಣವಾಗಿದೆ. ಪೋಸ್ಟ್‌ ವೈರಲ್‌ ಆದ ಬೆನ್ನಲ್ಲೇ ನಿರಾಣಿ ಅವರು ಕ್ಷಮೆ ಯಾಚಿಸಿದ್ದಾರೆ.

ಸನಾತನ ಧರ್ಮವನ್ನು ಹೀಗಳೆಯುವಂಥ, ಮಗಳನ್ನು ಮದುವೆಯಾದ ಬ್ರಹ್ಮ, 16 ಸಾವಿರ ಹೆಂಡಂದಿರ ಗಂಡ, ಗೋಪಿಕೆಯರ ವಸ್ತ್ರ ಕದ್ದವ ದೇವರು, ಹೀಗೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಟೀಕಿಸುವ ಅಂಶಗಳೊಂದಿಗೆ, ಬಸವಣ್ಣನವರನ್ನು ಮೆಚ್ಚುವ ಮಾತುಗಳೂ ಈ ಸಂದೇಶದಲ್ಲಿವೆ.

ಸನಾತನಿಗಳ ಧರ್ಮವನ್ನು ತಿರಸ್ಕರಿಸಿ, ಸ್ತ್ರೀ ಸಮಾನತೆ ಹಾಗೂ ಸಮಾನತೆಯ ಆಧಾರದ ಮೇಲಿರುವ ಪ್ರಜಾಸತ್ತಾತ್ಮಕ ಲಿಂಗಾಯತ ಧರ್ಮ ಎಂದು ಹೊಗಳಿರುವ ಈ ಸಂದೇಶ ವೈರಲ್‌ ಆಗಿದೆ.

ಸೋಮವಾರ ರಾತ್ರಿ ಮುರುಗೇಶ ನಿರಾಣಿ ಅವರ ಮೊಬೈಲ್‌ ಸಂಖ್ಯೆಯಿಂದ ಈ ಸಂದೇಶ ರವಾನೆ ಆಗಿದ್ದು, ಗಮನಿಸಿದ ಪ್ರಮುಖ ಸಚಿವರೊಬ್ಬರು ಗುಂಪಿನಿಂದ ಹೊರ ನಡೆದು ತಮ್ಮ ವಿರೋಧ ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.

ತಪ್ಪಾಗಿದೆ ಕ್ಷಮಿಸಿ; ಮುರುಗೇಶ ನಿರಾಣಿ

‘ಶಾಸಕರ ಗ್ರೂಪ್‌ಗೆ ಸಂದೇಶ ಕಳುಹಿಸಿದ್ದ ಮೊಬೈಲ್‌ಫೋನ್‌ ಸಂಖ್ಯೆ ನನ್ನದೇ ಆಗಿದೆ. ಆದರೆ ಅದನ್ನು ನಾನು ಫಾರ್ವರ್ಡ್ ಮಾಡಿಲ್ಲ. ನನ್ನ ಆಪ್ತ ಕಾರ್ಯದರ್ಶಿ ರಾತ್ರಿ ಎಲ್ಲಿಂದಲೋ ಬಂದ ಆ ಸಂದೇಶವನ್ನು ಅಜಾಗರೂಕತೆಯಿಂದ ಫಾರ್ವರ್ಡ್ ಮಾಡಿದ್ದಾರೆ. ತಪ್ಪು ಯಾರು ಮಾಡಿದರೂ ತಪ್ಪೇ. ಹೀಗಾಗಿ ನಾಡಿನ ಜನತೆಯ ಕ್ಷಮೆ ಕೇಳುತ್ತೇನೆ.’

ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಸಂದೇಶವೊಂದು ಶಾಸಕರ ವಾಟ್ಸ್ಆ್ಯಪ್ ಗ್ರೂಪ್‌ಗೆ ಮುರುಗೇಶ ನಿರಾಣಿ ಅವರ ಮೊಬೈಲ್‌ ಸಂಖ್ಯೆಯಿಂದ ರವಾನೆಯಾಗಿದೆ ಎಂಬ ವಿಚಾರ ವಿವಾದಕ್ಕೆ ತಿರುಗುತ್ತಿದ್ದಂತೆಯೇ ಅವರು ಮೇಲಿನಂತೆ ಸ್ಪಷ್ಟನೆ ನೀಡಿದ್ದಾರೆ.

’ನಾನು ಸರ್ವಧರ್ಮ ಸಹಿಷ್ಣುವಾಗಿದ್ದೇನೆ. ಧರ್ಮ-ನಂಬಿಕೆಗಳ ಬಗ್ಗೆ ಹಗುರವಾಗಿ ಎಂದೂ ಮಾತನಾಡಿಲ್ಲ. ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತೇನೆ. ಸನಾತನ ಧರ್ಮದ ಬಗ್ಗೆಯಂತೂ ಅತ್ಯಂತ ಭಕ್ತಿಯಿಂದ ನಡೆದುಕೊಳ್ಳುತ್ತೇನೆ. ಹಿಂದೂವಾಗಿ ನನ್ನ ಧರ್ಮದ ಬಗ್ಗೆ ನನಗೆ ಅಭಿಮಾನವಿದೆ. ನನ್ನ ಆಪ್ತ ಸಹಾಯಕನ ಅಚಾತುರ್ಯದಿಂದ ಈ ತಪ್ಪು ನಡೆದಿದೆ. ನಾಡಿನ ಜನತೆ ನನ್ನ ಬಗ್ಗೆ ತಪ್ಪು ಭಾವಿಸಬೇಡಿ‘ ಎಂದು ಮಾಧ್ಯಮಗಳಿಗೆ ಕಳುಹಿಸಿದ ಸ್ಪಷ್ಟನೆಯಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT