ಮಂಗಳವಾರ, ಆಗಸ್ಟ್ 3, 2021
23 °C
ಪ್ರಥಮ ಸ್ಥಾನ ಕಾಯ್ದುಕೊಂಡ ಉಡುಪಿ: ಕಡೆಯಲ್ಲೇ ಉಳಿದ ವಿಜಯಪುರ

ಪಿಯು: ಫಸ್ಟ್‌ಕ್ಲಾಸ್‌ ಫಲಿತಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶ ಪ್ರಕಟವಾಗಿದ್ದು, ಶೇ 61.80ರಷ್ಟು ಮಂದಿ ಉತ್ತೀರ್ಣರಾಗಿದ್ದಾರೆ. ಉಡುಪಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದರೆ, ವಿಜಯಪುರ ಕೊನೆಯ ಸ್ಥಾನದಲ್ಲಿದೆ.

20 ವರ್ಷಗಳಲ್ಲೇ ಇದು ಅತ್ಯುತ್ತಮ ಫಲಿತಾಂಶವಾಗಿದ್ದು, ಕಳೆದ ವರ್ಷ ಶೇ 61.73ರಷ್ಟು ಮಂದಿ ಉತ್ತೀರ್ಣರಾಗಿದ್ದರು.

ಶೇ 68.73ರಷ್ಟು ಉತ್ತೀರ್ಣತೆಯೊಂದಿಗೆ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ 54.77ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ 41.27, ವಾಣಿಜ್ಯ ವಿಭಾಗದಲ್ಲಿ ಶೇ 65.52 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ 76.20ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹೊಸಬರಲ್ಲಿ ಉತ್ತೀರ್ಣತೆ ಪ್ರಮಾಣ ಶೇ 69.20ರಷ್ಟಿದ್ದರೆ, ಪುನರಾವರ್ತಿತರಲ್ಲಿ ಶೇ 46.56 ಹಾಗೂ ಖಾಸಗಿಯಲ್ಲಿ ಶೇ 24.11ರಷ್ಟಿದೆ.

ವಾಣಿಜ್ಯ ವಿಭಾಗದಲ್ಲಿ ಬೆಂಗಳೂರು ಮಲ್ಲೇಶ್ವರದ ವಿದ್ಯಾಮಂದಿರ ಕಾಲೇಜಿನ ಟಿ.ಸಿ.ಎಸ್‌.ಅರವಿಂದ ಶ್ರೀವತ್ಸ 598 ಅಂಕ ಗಳಿಸಿ ಟಾಪರ್‌ ಆಗಿದ್ದರೆ,  ವಿಜ್ಞಾನ ವಿಭಾಗದಲ್ಲಿ ಇದೇ ಕಾಲೇಜಿನ ಎಂ.ಎನ್.ಪ್ರೇರಣಾ ಮತ್ತು ಉಡುಪಿಯ ವಿದ್ಯೋದಯ ಕಾಲೇಜಿನ ಅಭಿಜ್ಞಾ ರಾವ್‌ ತಲಾ 596 ಅಂಕ ಗಳಿಸಿ ಟಾಪರ್ ಆಗಿದ್ದಾರೆ. ಬಳ್ಳಾರಿ ಜಿಲ್ಲೆ ಕೊಟ್ಟೂರಿನ ‘ಇಂದು’ ಕಾಲೇಜಿನ ಕರೆಗೌಡ ದಾಸನಗೌಡ್ರು 594 ಅಂಕ ಗಳಿಸಿ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಶೇಷವೆಂದರೆ ಇದೇ ಶಾಲೆಯ ಇನ್ನೂ 10 ಮಂದಿ ಟಾಪ್‌ 7ರಲ್ಲಿ ಸ್ಥಾನ ಪಡೆದಿದ್ದಾರೆ.

3 ಸರ್ಕಾರಿ ಕಾಲೇಜುಗಳು ಶೇ 100ರಷ್ಟು ಫಲಿತಾಂಶ ದಾಖಲಿಸಿದ್ದರೆ, 5 ಕಾಲೇಜುಗಳು ಶೂನ್ಯ ಸುತ್ತಿವೆ. 1 ಅನುದಾನಿತ ಕಾಲೇಜು ಶೇ 100ರಷ್ಟು ಫಲಿತಾಂಶ ಹಾಗೂ 5 ಕಾಲೇಜು ಶೂನ್ಯ ದಾಖಲೆ ಮಾಡಿದೆ. 88 ಖಾಸಗಿ ಕಾಲೇಜುಗಳು ಶೇ 100ರಷ್ಟು ಸಾಧನೆ ಮಾಡಿದ್ದರೆ, 78 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ. ಒಟ್ಟಾರೆ 92 ಕಾಲೇಜುಗಳಲ್ಲಿ ಶೇ 100ರಷ್ಟು ಫಲಿತಾಂಶ ಮತ್ತು 88 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶಗಳು ದಾಖಲಾಗಿವೆ.

ಪೂರಕ ಪರೀಕ್ಷೆ: ಶುಲ್ಕಕ್ಕೆ ಆ.3 ಕೊನೆದಿನ
‘ಆಗಸ್ಟ್‌ ಕೊನೆಯಲ್ಲಿ ಅಥವಾ ಸೆಪ್ಟೆಂಬರ್‌ ಮೊದಲ ವಾರ ಪೂರಕ ಪರೀಕ್ಷೆ ನಡೆಯಲಿದೆ. ಆಗಸ್ಟ್‌ 3ರೊಳಗೆ ಪರೀಕ್ಷಾ ಶುಲ್ಕ ಕಟ್ಟಬೇಕು’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಎಂ.ಕನಗವಲ್ಲಿ ತಿಳಿಸಿದರು. ‘ಅನುತ್ತೀರ್ಣ ವಿದ್ಯಾರ್ಥಿಗಳು ಮರುಮೌಲ್ಯಮಾಪನದ ಫಲಿತಾಂಶಕ್ಕೆ ಕಾಯದೆ ಪೂರಕ ಪರೀಕ್ಷೆಗೆ ಶುಲ್ಕ ಕಟ್ಟಬೇಕು. ಅನುತ್ತೀರ್ಣ ಒಎಂಆರ್‌ ಅರ್ಜಿಗಳಿಗೂ ಕಾಯಬೇಕಿಲ್ಲ’ ಎಂದು ಹೇಳಿದರು.

ಗಂಟೆ ಮೊದಲೇ ಫಲಿತಾಂಶ ಸೋರಿಕೆ!
ಫಲಿತಾಂಶ 12 ಗಂಟೆಗೆ ವೆಬ್‌ಸೈಟ್‌ನಲ್ಲಿ ಪ್ರಕಟವಾಗಬೇಕಿತ್ತು. ಅದಕ್ಕೆ ಮೊದಲಾಗಿ ಸಚಿವರು 11.30ಕ್ಕೆ ಫಲಿತಾಂಶ ಘೋಷಿಸಬೇಕಿತ್ತು. ಆದರೆ ಬೆಳಿಗ್ಗೆ 10.30ರ ಸುಮಾರಿಗೇ ಕೆಲವು ವಿದ್ಯಾರ್ಥಿಗಳಿಗೆ ಅದು ದೊರಕಿತ್ತು.

‘12 ಗಂಟೆಗೆ ಫಲಿತಾಂಶವನ್ನು ವಿದ್ಯಾರ್ಥಿಗಳು ಗಮನಿಸುವಾಗ ತೊಂದರೆ ಆಗುವುದು ಬೇಡ ಎಂಬ ಕಾರಣಕ್ಕೆ ಎನ್‌ಐಸಿಯವರು 10.30 ವೇಳೆಗೆ ಫಲಿತಾಂಶವನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾರಂಭಿಸಿದ್ದರು. ಆಗಲೇ ಫಲಿತಾಂಶಕ್ಕಾಗಿ ಹುಡುಕುತ್ತಿದ್ದ ಕೆಲವರಿಗೆ ಅದು ಸಿಕ್ಕಿಬಿಟ್ಟಿದೆ. ಬಳಿಕ ಅದನ್ನು ಸ್ಥಗಿತಗೊಳಿಸಿ 12 ಗಂಟೆಯ ಮೇಲೆಯೇ ದೊರೆಯುವಂತೆ ಮಾಡಲಾಯಿತು. ಇದನ್ನು ಫಲಿತಾಂಶದ ಸೋರಿಕೆ ಎಂದು ಹೇಳಲಾಗದು’ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

*

ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಧೃತಿಗೆಡಬಾರದು. ಇದುವೇ ಜೀವನದ ಕೊನೆಯ ಪರೀಕ್ಷೆ ಅಲ್ಲ. ಇನ್ನೊಮ್ಮೆ ಪ್ರಯತ್ನಿಸಿ, ಯಶಸ್ಸು ನಿಮ್ಮದಾಗುತ್ತದೆ.
-ಎಸ್‌.ಸುರೇಶ್‌ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ಸಾಧಕರ ಮಾತು

ಎಸ್ಸೆಸ್ಸೆಲ್ಸಿಯಲ್ಲೂ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್‌ ಪಡೆದಿದ್ದೆ. ಲಾಕ್‌ಡೌನ್‌ ಅವಧಿಯಲ್ಲಿ ಇಂಗ್ಲಿಷ್ ಚೆನ್ನಾಗಿ ಓದಿದ್ದರಿಂದ ಉತ್ತಮ ಅಂಕ ಸಿಕ್ಕಿತು. ಎಂಜಿನಿಯರ್‌ ಆಗುವ ಗುರಿ ಇದೆ.


-ಅಭಿಜ್ಞಾ ರಾವ್‌, ವಿಜ್ಞಾನ ವಿಭಾಗದ ಟಾಪರ್‌ (596 ಅಂಕ)

*

ವಿಶೇಷ ಕೋಚಿಂಗ್‌ ಏನೂ ಪಡೆದಿರಲಿಲ್ಲ. ಕಾಲೇಜಿನಲ್ಲಿ ಅತ್ಯುತ್ತಮವಾಗಿ ಬೋಧನೆ ಮಾಡುತ್ತಿದ್ದರು. ನನಗೆ ವೈದ್ಯೆಯಾಗಿ ಜನರ ಸೇವೆ ಸಲ್ಲಿಸಬೇಕು ಎಂಬ ಬಯಕೆ ಇದೆ.


-ಎಂ.ಎನ್‌.ಪ್ರೇರಣಾ, ವಿಜ್ಞಾನ ವಿಭಾಗದ ಟಾಪರ್‌ (596 ಅಂಕ)

*

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್‌ ಆಗಿದ್ದೆ. ವಿಶೇಷ ಓದು ಏನೂ ಇರಲಿಲ್ಲ. ಮುಂದೆ ವೈದ್ಯನಾಗುವ ಕನಸು ಇದೆ.


-ಎಂ.ಜಿ.ಯಶಸ್‌, ವಿಜ್ಞಾನ ವಿಭಾಗ 3ನೇ ಟಾಪರ್ (594 ಅಂಕ)

ನಿತ್ಯ 4-5 ತಾಸು ಓದುತ್ತಿದ್ದೆ, ವಿಶೇಷ ತರಗತಿಗಳ ಜೊತೆಗೆ ವರ್ಷ ಪೂರ್ತಿ ನಡೆಸುತ್ತಿದ್ದ ಪೂರ್ವಸಿದ್ಧತೆ ಪರೀಕ್ಷೆಗಳೂ ನೆರವಾದವು. ನಾನು ರೈತನ ಮಗ. ಐಎಎಸ್ ಮಾಡುವ ಕನಸಿದೆ.
-ಕರಗೌಡ ದಾಸನಗೌಡ್ರು, ಕಲಾ ವಿಭಾಗದ ಟಾಪರ್‌ (594 ಅಂಕ)

*

ಹಡಗಲಿ ತಾಲ್ಲೂಕಿನ ಕೆಂಚನಹಳ್ಳಿಯಿಂದ ಓಡಾಡಲು ಹಾಗೂ ಹಾಸ್ಟೆಲ್‌ಗೆ ಪಾವತಿಸಲು ಹಣದ ಕೊರತೆ ಇತ್ತು. ಹೀಗಾಗಿ ಮಾವನ ಮನೆಯಲ್ಲಿದ್ದುಕೊಂಡೇ ಓದಿದೆ. ಕೆಎಎಸ್ ಗುರಿ ಇದೆ.


-ಎಸ್ ಎಂ. ಸ್ವಾಮಿ, ಕಲಾ ವಿಭಾಗದ 2ನೇ ಟಾಪರ್ (592 ಅಂಕ)

*

ಇಂಗ್ಲಿಷ್‌ನಲ್ಲಷ್ಟೇ ಎರಡು ಅಂಕ ಹೋಯಿತು. ಕಾಲೇಜಿನಲ್ಲಿ ಪ್ರಬಲ ಸ್ಪರ್ಧೆ ಇತ್ತು. ಓದಲು ಅದು ಇನ್ನಷ್ಟು ಪ್ರೇರಣೆ ಕೊಟ್ಟಿತು. ಲೆಕ್ಕಪರಿಶೋಧಕ ಆಗುವ ಗುರಿ ಇದೆ.


-ಟಿ.ಸಿ.ಎಸ್‌.ಅರವಿಂದ ಶ್ರೀವತ್ಸ, ವಾಣಿಜ್ಯ ವಿಭಾಗದ ಟಾಪರ್‌  (598 ಅಂಕ)

*

ಉಪನ್ಯಾಸಕರ ಮಾರ್ಗದರ್ಶನ ಅತ್ಯುತ್ತಮವಾಗಿತ್ತು. ಅದಕ್ಕಾಗಿಯೇ ನನಗೆ ಇಷ್ಟು ಅಂಕ ಬಂದಿದೆ. ಮುಂದೆ ಲೆಕ್ಕಪರಿಶೋಧಕಿಯಾಗುವ ಗುರಿ ಇದೆ.


-ಜೆ.ಎನ್‌.ಬೃಂದಾ, ವಾಣಿಜ್ಯ ವಿಭಾಗ 2ನೇ ಟಾಪರ್ (596 ಅಂಕ)

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು