ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದಲ್ಲಿ ಕುರಿಗಾರರು ಅತಂತ್ರ: ಹಾಲುಮತ ಮಹಾಸಭಾ

Last Updated 16 ಜುಲೈ 2020, 17:54 IST
ಅಕ್ಷರ ಗಾತ್ರ

ಬೆಂಗಳೂರು: ಬೆಟ್ಟಗುಡ್ಡಗಳಲ್ಲಿ ಕುರಿ ಮೇಯಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದು, ಮಳೆಗಾಲದಲ್ಲಿ ಕುರಿಗಾರರಿಗೆ ಅತಂತ್ರ ಸ್ಥಿತಿ ಎದುರಾಗಿದೆ ಎಂದು ಹಾಲುಮತ ಮಹಾಸಭಾ ದೂರಿದೆ.

‘ಕುರಿಗಾರರ ಮೇಲಿನ ಈ ದೌರ್ಜನ್ಯ ನಿಲ್ಲಬೇಕು. ಕುರಿಗಳನ್ನು ಮೇಯಿಸಲು ಅವಕಾಶ ನೀಡಬೇಕು ಮತ್ತು ಕುರಿಗಾರರ ಜತೆ ಸೌಜನ್ಯದಿಂದ ವರ್ತಿಸಲು ಸಿಬ್ಬಂದಿಗೆ ಸೂಚನೆ ನೀಡಬೇಕು’ ಎಂದು ಮಹಾಸಭಾ ಅಧ್ಯಕ್ಷ ರುದ್ರಣ್ಣ ಗುಳಗುಳಿ ಅವರು, ಅರಣ್ಯ ಸಚಿವ ಆನಂದ್‌ ಸಿಂಗ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಜನವರಿಯಿಂದ ಏಪ್ರಿಲ್‌ ತನಕ ಕೃಷಿ ಜಮೀನಿನಲ್ಲೇ ಕುರಿಗಳಿಗೆ ಮೇವು ಒದಗಿಸಿಕೊಳ್ಳುವ ಕುರಿಗಾರರು, ಉಳಿದ ದಿನಗಳಲ್ಲಿ ಬೆಟ್ಟಗುಡ್ಡಗಳನ್ನೇ ಆಶ್ರಯಿಸುತ್ತಾರೆ. ನಾಲ್ಕೈದು ಕುಟುಂಬಗಳು ಕುರಿಗಳನ್ನು ಒಟ್ಟು ಮಾಡಿಕೊಂಡು ಬೆಟ್ಟಗುಡ್ಡಗಳಲ್ಲೇ ಜೀವನ ಸಾಗಿಸುತ್ತಾರೆ. ಮಕ್ಕಳು, ಮಹಿಳೆಯರೂ ಜೊತೆಯಲ್ಲಿ ಇರುವ ಕಾರಣ ಮಳೆಯಿಂದ ರಕ್ಷಣೆ ಪಡೆಯಲು ತಾತ್ಕಾಲಿಕ ಟೆಂಟ್‌ಗಳನ್ನು ನಿರ್ಮಿಸಿಕೊಳ್ಳುವುದು ರೂಢಿ. ಇದೀಗ ಅರಣ್ಯ ಇಲಾಖೆ ಸಿಬ್ಬಂದಿ ಈ ಟೆಂಟ್‌ಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಗರ್ಭಗುಡಿ ಬೆಟ್ಟದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕುರಿಗಾರರನ್ನು ಹೊರ ದಬ್ಬುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕುರುಬ ಸಮಾಜದ ಮುಖಂಡ ಕೆ. ಮುಕುಡಪ್ಪ, ‘ರಾಜ್ಯದ ಹಲವೆಡೆ ಇದೇ ಪರಿಸ್ಥಿತಿ ಇದೆ. ಕುರಿಗಳು ಅರಣ್ಯದಲ್ಲಿ ಯಾವುದೇ ಗಿಡಗಳನ್ನು ಮುಟ್ಟುವುದಿಲ್ಲ. ಗರಿಕೆ ರೀತಿಯ ಹುಲ್ಲನ್ನು ಮಾತ್ರ ತಿನ್ನುತ್ತವೆ. ಇವುಗಳು ಅರಣ್ಯದಲ್ಲಿ ಇದ್ದರೆ ಬೇರೆ ಗಿಡ–ಮರಗಳಿಗೆ ಗೊಬ್ಬರವೂ ಸಿಗುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದೆ ಕುರಿಗಾರರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT