ಶುಕ್ರವಾರ, ಅಕ್ಟೋಬರ್ 2, 2020
21 °C

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗೃಹ ಕಚೇರಿಯ ಆರು ಸಿಬ್ಬಂದಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರಿಗೆ ಕೋವಿಡ್‌–19 ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿಗಳು ಸಿಎಂ ಅಧಿಕೃತ ನಿವಾಸ ಮತ್ತು ಗೃಹ ಕಚೇರಿ ಕಾವೇರಿ ಒಳ ಹೊಕ್ಕು ಸ್ಯಾನಿಟೈಸ್‌ ಕೆಲಸ ಆರಂಭಿಸಿದ್ದಾರೆ. ಬಿಎಸ್‌ವೈ ಸಂಪರ್ಕಿತರನ್ನು ಪತ್ತೆಹಚ್ಚಿ ಕ್ವಾರಂಟೈನ್‌ ಮಾಡುವ ಕೆಲಸ ಆರಂಭಿಸಿದ್ದಾರೆ.

ಅತ್ತ ಡಾಲರ್ಸ್‌ ಕಾಲೋನಿಯಲ್ಲಿರುವ ಮುಖ್ಯಮಂತ್ರಿಗಳ ಖಾಸಗಿ ನಿವಾಸ ದವಳಗಿರಿಯಲ್ಲೂ ಸ್ಯಾನಿಟೈಸಿಂಗ್‌ ಆರಂಭವಾಗಿದೆ.

ಭದ್ರತಾ ಸಿಬ್ಬಂದಿ, ಅಡುಗೆಯವರು, ಮನೆಗೆಲಸದವರೂ ಸೇರಿದಂತೆ ಎಲ್ಲಾ ಸಿಬ್ಬಂದಿಯ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿಯ ಗೃಹ ಕಚೇರಿಯ ಮೂಲಗಳು ತಿಳಿಸಿವೆ. ‘ಆರೋಗ್ಯ ಸಿಬ್ಬಂದಿ, ಸಿಎಂ ಜೊತೆಗೆ ಕೆಲಸ ಮಾಡುವ ಎಲ್ಲರ ಪರೀಕ್ಷೆ ನಡೆಸುತ್ತಿದ್ದಾರೆ. ವರದಿಗಳನ್ನು ಅವಲಂಬಿಸಿ ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಲಾಗುತ್ತದೆ. ಅಗತ್ಯವಿರುವವರನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತದೆ’ ಎಂದು ಸಿಎಂ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

‘ಮುಖ್ಯಮಂತ್ರಿ ಬಿಎಸ್‌ವೈ ಗನ್‌ಮನ್‌, ಚಾಲಕ ಮತ್ತು ಕಾವೇರಿ ನಿವಾಸದ ಮೂವರು ಮನೆಕೆಲಸದ ಸಿಬ್ಬಂದಿ ಸೇರಿದಂತೆ ಆರು ಮಂದಿಗೆ ಕೋವಿಡ್‌ ಇರುವುದು ಪರೀಕ್ಷೆಯಲ್ಲಿ ಗೊತ್ತಾಗಿದೆ. ಅವರನ್ನು ಬೆಂಗಳೂರಿನ ಅಂತಾರಾಷ್ಟ್ರೀಯ ಎಕ್ಸಿಬಿಷನ್‌ ಸೆಂಟರ್‌ನಲ್ಲಿ ನಿರ್ಮಿಸಲಾಗಿರುವ ಕೋವಿಡ್‌ ಕೇರ್‌ ಸೆಂಟರ್‌ಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿದೆ,’ ಎಂದು ಹೆಸರು ಹೇಳಲಿಚ್ಚಿಸದ ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ರಜೆ ಮೇಲೆ ತೆರಳಿರುವ ಸಿಬ್ಬಂದಿಗೂ ಪರೀಕ್ಷೆಗೆ ಒಳಪಡುವಂತೆ ತಿಳಿಸಲಾಗಿದೆ.

ಕಳೆದ ಮೂರ್ನಾಲ್ಕು ದಿನಗಳಲ್ಲಿ ಮುಖ್ಯಮಂತ್ರಿ ತಮ್ಮ ಇಲಾಖೆ ಕೆಲಸ ಮತ್ತು ವೈಯಕ್ತಿಕ ಕೆಲಸ ಕಾರ್ಯಗಳ ನಿಮಿತ್ತ ಹಲವರೊಂದಿಗೆ ಸಭೆ, ಸಮಾಲೋಚನೆ ನಡೆಸಿದ್ದಾರೆ. ಇದರಲ್ಲಿ ಕುಟುಂಬಸ್ಥರು, ಸಂಪುಟ ಸಹೋದ್ಯೋಗಿಗಳು, ಶಾಸಕರು, ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಹಲವರಿದ್ದಾರೆ. ಹೀಗಾಗಿ ಗೃಹ ಕಚೇರಿ ಒಳ–ಹೊರಗೆ ದೊಡ್ಡ ಮಟ್ಟದ ಸ್ಯಾನಿಟೈಸಿಂಗ್‌ ಕೆಲಸ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು