ಸೋಮವಾರ, ಆಗಸ್ಟ್ 3, 2020
26 °C

ಕರ್ನಾಟಕ ಶಿಕ್ಷಣ ನೀತಿ ತಿಂಗಳಲ್ಲಿ ಅಂತಿಮ: ಸಚಿವ ಎಸ್.ಸುರೇಶ್‌ಕುಮಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಆಧಾರವಾಗಿಟ್ಟುಕೊಂಡು ಕರ್ನಾಟಕ ನೂತನ ಶಿಕ್ಷಣ ನೀತಿಯನ್ನು ಆ.20ರ ವೇಳೆಗೆ ಘೋಷಿಸುವ ಆಶಯ ಇದೆ. ಈ ನೀತಿಯನ್ನು ಜಾರಿಗೊಳಿಸಲಿರುವ ಮೊದಲ ರಾಜ್ಯ ನಮ್ಮದಾಗಲಿದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ಹೇಳಿದರು. 

ಈ ಕುರಿತು ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ‘ರಾಜ್ಯಕ್ಕೆ ವಿಶೇಷ ಶಿಕ್ಷಣ ನೀತಿ ರೂಪಿಸಲು ಕಳೆದ ಫೆಬ್ರುವರಿಯಲ್ಲಿ ಸಮಿತಿ ರಚಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯದ ನೀತಿಗಳನ್ನು ಅಭ್ಯಸಿಸಿ, ಹೊಸ ಶಿಕ್ಷಣ ನೀತಿಯನ್ನು ಹೊರತರಲು ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು. 

ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿಯ ಅಧ್ಯಕ್ಷ ಡಾ. ಕೆ. ಕಸ್ತೂರಿರಂಗನ್‌ ಅವರೊಂದಿಗೆ ವೆಬಿನಾರ್‌ನಲ್ಲಿ ಸಂವಾದ ನಡೆಸಿದ ಸುರೇಶ್‌ಕುಮಾರ್, ‘ಇಂದಿನ ಹಾಗೂ ಭವಿಷ್ಯದ ಶೈಕ್ಷಣಿಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು 34 ವರ್ಷಗಳ ಬಳಿಕ ರೂಪಿಸಲಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿ ಸಮಗ್ರವಾಗಿದ್ದು, ಇದನ್ನು ಅನುಷ್ಠಾನಗೊಳಿಸಲು ರಾಜ್ಯಸರ್ಕಾರ ಉತ್ಸುಕವಾಗಿದೆ’ ಎಂದರು. 

‘ದೇಶದ ಶಿಕ್ಷಣ ವ್ಯವಸ್ಥೆಯು ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಯೋಜನಗಳನ್ನು ಪಡೆಯುವ ಮುನ್ನವೇ ದೂರದೃಷ್ಟಿಯ ಧ್ಯೇಯಗಳನ್ನು ಅಳವಡಿಸಿಕೊಂಡ ಕರ್ನಾಟಕ ಇತರೆ ರಾಜ್ಯಗಳಿಗಿಂತ ಮುಂದಿದೆ’ ಎಂದು ಕಸ್ತೂರಿರಂಗನ್‌ ಹೇಳಿದರು. 

ವಿಧಾನಪರಿಷತ್ ಸದಸ್ಯರಾದ ಅರುಣ್ ಶಹಾಪುರ, ವೈ.ಎ. ನಾರಾಯಣಸ್ವಾಮಿ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಕೆ.ಜಿ. ಜಗದೀಶ್, ಸಮಗ್ರ ಶಿಕ್ಷಣದ ಕರ್ನಾಟಕ ಯೋಜನಾ ನಿರ್ದೇಶಕಿ ದೀಪಾ ಚೋಳನ್ ಹಾಗೂ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು