ಶುಕ್ರವಾರ, ಜುಲೈ 30, 2021
28 °C
ಸುಭದ್ರಮ್ಮ ಮನ್ಸೂರ್‌ ಎಂಬ ‘ಸರ್ವ ಋತು ಕೋಗಿಲೆ’, ‘ಅನುಪಮ ಅಭಿನೇತ್ರಿ’

ಕಳಚಿದ ಬಳ್ಳಾರಿ ರಂಗಭೂಮಿಯ ಕಳಸ!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಏಕೀಕರಣಕ್ಕೆ ಮುಂಚಿನ ಹಳೇ ಬಳ್ಳಾರಿಯಿಂದ, ಏಕೀಕರಣ ನಂತರ ಹೊಸ ಕರ್ನಾಟಕದವರೆಗೆ ಸುಭದ್ರಮ್ಮ (1939–2020) ಮನ್ಸೂರ್‌ ಎಂದರೆ ‘ಸರ್ವ ಋತು ಕೋಗಿಲೆ’, ಕರ್ನಾಟಕ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಯ ‘ಅನುಪಮ ಅಭಿನೇತ್ರಿ’.

ಕಂದಗಲ್ಲ ಹನುಮಂತರಾಯರ ‘ರಕ್ತರಾತ್ರಿ’ ನಾಟಕದ ದ್ರೌಪದಿ ಪಾತ್ರವೊಂದರಿಂದಲೇ ಕರ್ನಾಟಕ, ಆಂಧ್ರದ ಹಳ್ಳಿಗಳ್ಳಿಗಳಲ್ಲಿ ಮನೆಮಾತಾಗಿದ್ದ ಸುಭದ್ರಮ್ಮ ಎಂಬ ಅಂಕದ ಪರದೆ ಬುಧವಾರ ಮಧ್ಯರಾತ್ರಿ ಜಾರಿತು. ರಂಗಭೂಮಿಯ ಹಿರಿಯ–ಕಿರಿಯರಲ್ಲಿ ಅನುಪಮ ನೆನಪುಗಳಷ್ಟೇ ಉಳಿದವು.

‘ಕೋಗಿಲೆ ದನಿ ಎತ್ತಿ ಹಾಡಲು ವಸಂತ ಋತುವೇ ಬರಬೇಕು. ಆದರೆ ಈ ರಂಗಕೋಗಿಲೆಗೆ ದ್ವಾದಶ ಮಾಸಗಳು ಮಧುಮಾಸವೇ’ ಎಂದು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಲೇಖಕ ಗಂಗಾಧರ ಪತ್ತಾರ್ ಗುರುವಾರ ಬೆಳಿಗ್ಗೆ ಬರೆದುಕೊಂಡಿದ್ದರಲ್ಲಿ ಉತ್ಪ್ರೇಕ್ಷೆ ಏನಿಲ್ಲ. ಅವರು ನಿಂತ ನೆಲವೇ ರಂಗಭೂಮಿಯಾಗಿತ್ತು.

ಬಾಲ್ಯದಲ್ಲೇ ರಂಗಭೂಮಿಗೆ ಕಾಲಿಟ್ಟು ಅರ್ಧಶತಮಾನಕ್ಕೂ ಹೆಚ್ಚು ಕಾಲ ಅದನ್ನೇ ಬದುಕಾಗಿಸಿಕೊಂಡಿದ್ದ ಅವರು ತಮ್ಮ ಇಳಿವಯಸ್ಸಿನಲ್ಲೂ ನಾಟಕ ಪ್ರದರ್ಶನಗಳಿಗೆ ಬಂದು ಗಂಟೆಗಟ್ಟಳೆ ಕುಳಿತು ನೋಡುತ್ತಿದ್ದರು, ಯಾವುದೇ ನಾಟಕದ ಕೊನೆಗೆ ಅವರಿಂದ ಅಕ್ಕಮಹಾದೇವಿಯ ‘ಬೆಟ್ಟದ ಮೇಲೊಂದು ಮನೆಯ ಮಾಡಿ’ ವಚನ ಹಾಡಿಸಿದರಷ್ಟೇ ಅದಕ್ಕೆ ಸರಿಯಾದ ಮುಕ್ತಾಯ.

ಪೌರಾಣಿಕ ನಾಟಕಗಳ ಸುದೀರ್ಘ ಸಂಭಾಷಣೆ, ಹಾಡುಗಳನ್ನು ನಿರರ್ಗಳವಾಗಿ ಹೇಳುತ್ತಿದ್ದರು ಸುಭದ್ರಮ್ಮ. ಅದಕ್ಕೆ ಕನ್ನಡ–ತೆಲುಗೆಂಬ ಭೇದವಿರಲಿಲ್ಲ. ಶಾಸ್ತ್ರೀಯ ಗಾಯನದಲ್ಲೂ ನಿಪುಣೆಯಾಗಿದ್ದರು. ‘ಪಾಂಚಾಲಿ’ ನಾಟಕದ ಉಪಪಾಂಡವರ ಸಂಹಾರದ ಬಳಿಕ ನಡೆಯುವ ಸುಮಾರು 20 ನಿಮಿಷದ ತಾಯಿ ರೋದನದ ದೃಶ್ಯವೇ ಅವರನ್ನು ಅಕ್ಕ ಸಮ್ಮೇಳನಕ್ಕೂ ಕರೆದೊಯ್ದಿದ್ದು ಈಗ ನೆನಪು.

ದ್ರೌಪದಿ ಪಾತ್ರದ ಜೊತೆಗೆ ಅವರನ್ನು ರಂಗಜಗತ್ತು ವಿಶೇಷವಾಗಿ ಗುರುತಿಸಿದ್ದು ಹೇಮರೆಡ್ಡಿ ಮಲ್ಲಮ್ಮನ ಪಾತ್ರದಲ್ಲಿ. ಈಗಲೂ ಆಂಧ್ರದ ಹಲವು ಹಳ್ಳಿಗಳಲ್ಲಿ ಮಳೆ ಬರದಿದ್ದರೆ ಈ ನಾಟಕವನ್ನು ಆಡಿಸುವ ಪರಿಪಾಠವಿದೆ. ಅಂಥ ಎಷ್ಟೋ ನಾಟಕಗಳಲ್ಲಿ ಸುಭದ್ರಮ್ಮ ಮಿಂಚಿದ್ದರು. ಮಳೆಯೂ ಬಂದಿತ್ತು. ಕೆಲವೆಡೆ ಈಗಲೂ ಮಲ್ಲಮ್ಮನ ಪಾತ್ರದ ಸುಭದ್ರಮ್ಮ ಅವರ ಫೋಟೋವನ್ನೇ ಮನೆಯಲ್ಲಿಟ್ಟು ಪೂಜಿಸುವ ಮಂದಿ ಇದ್ದಾರೆ!

ಬಾಲ್ಯದಲ್ಲೇ ವಿವಾಹ: ಬಡತನದ ನಡುವೆಯೇ, ಬಾಲ್ಯದಲ್ಲೇ ರಂಗಭೂಮಿ ಕಡೆಗೆ ಆಕರ್ಷಿತರಾಗಿದ್ದ ಸುಭದ್ರಮ್ಮ 15ನೇ ವಯಸ್ಸಿನಲ್ಲೇ ತಮಗಿಂತಲೂ ಹೆಚ್ಚು ಹಿರಿಯರಾಗಿದ್ದ ಸಹನಟ, ಲಿಂಗರಾಜ ಮನ್ಸೂರ್ ಅವರೊಂದಿಗೆ ಪ್ರೇಮ‌ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು.

ಶ್ರೀಧರರಾವ್ ಮಾಲಿಕತ್ವದ ಸುಮಂಗಳಿ ನಾಟ್ಯ ಸಂಘದಿಂದ ಆರಂಭವಾದ ಅವರ ರಂಗಭೂಮಿ ಜೀವನವು, ಏಣಗಿ ಬಾಳಪ್ಪನವರ ವೈಭವ, ಮಾಸ್ಟರ್ ಹಿರಣ್ಣಯ್ಯ ನಾಟಕ ಕಂಪನಿ, ಬಾಗಲಕೋಟೆಯ ಬೇಸಕಟ್ಟಿ ಕಂಪನಿಯ ಮೂಲಕ ಮುಂದುವರಿದಿತ್ತು. ರಾಜ್ಯದ ಎಲ್ಲೆಡೆಯೂ ಅವರ ಅಭಿನಯ ಮತ್ತು ಕಂಠಸಿರಿಗೆ ಮುಕ್ತಪ್ರಶಂಸೆಯ ಸ್ವಾಗತ ದೊರಕುತ್ತಿದ್ದುದು ವಿಶೇಷ. ನಾಡೋಜ, ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿವೀರಣ್ಣ ಪ್ರಶಸ್ತಿಗಳು ಅವರಿಗೆ ಸಂದಿದ್ದವು.

ಇಳಿವಯಸ್ಸು ದೈಹಿಕವಾಗಿ ಅವರನ್ನು ಕುಗ್ಗಿಸಿದ್ದರೂ ಮನೋಬಲ ಕುಗ್ಗಿರಲಿಲ್ಲ. ನಾಟಕಗಳ ವೀಕ್ಷಣೆಯ ಜೊತೆಗೆ ಹೊಸಬರಿಗೆ ಸಾಧ್ಯವಿದ್ದಷ್ಟು ಮಾರ್ಗದರ್ಶನ ನೀಡುತ್ತಿದ್ದರು.

‘ಅವರು ಹೊಸ ಕಲಾವಿದರ ಪಾಲಿಗೆ ತಾಯಿಯಂತಿದ್ದರು. ಅವರು ಕಲಾವಿದರಿಗೆ ಗೌರವ ತಂದುಕೊಟ್ಟ ತಾಯಿ. ಅವರೊಂದಿಗಿನ ಒಡನಾಟವೇ ನನ್ನಂಥ ಎಷ್ಟೋ ಮಂದಿಯನ್ನು ಕಲಾವಿದರನ್ನಾಗಿ ರೂಪಿಸಿತ್ತು’ ಎಂಬುದು ಕಲಾವಿದ ಪುರುಷೋತ್ತಮ ಹಂದ್ಯಾಳ್‌ ಅವರ ಕೃತಜ್ಞತೆಯ ನುಡಿ.

ಇದನ್ನೂ ಓದಿ... ರಂಗಭೂಮಿ ಕಲಾವಿದೆ ಸುಭದ್ರಮ್ಮ ಮನ್ಸೂರ್‌ ವಿಧಿವಶ

‘ಅರ್ಧ ಶತಮಾನ ಕಲಾಭಿಮಾನಿಗಳ ಮನಸೂರೆಗೊಂಡು ’ಸುಭದ್ರ’ವಾಗಿ ನಿಂತು ಕಲಾಸೇವೆ ಮಾಡಿದ್ದ ಸುಭದ್ರಮ್ಮ ರಂಗಭೂಮಿಯನ್ನೇ ಉಸಿರಾಗಿಸಿಕೊಂಡಿದ್ದ ಅನನ್ಯ ಕಲಾವಿದೆ’ ಎಂದು ರಂಗಕರ್ಮಿ ಕೆ.ಜಗದೀಶ್‌ ಅವರ ಅಭಿಮಾನದ ನುಡಿ.

ರಂಗ ಪರಂಪರೆಯ ‘ರಕ್ತರಾತ್ರಿ’, ‘ಬಾಣಸಿಗ ಭೀಮ’, ‘ಚಿತ್ರಾಂಗದ’, ’ಪಾಂಚಾಲಿ’ಯಂಥ ಪೌರಾಣಿಕ ನಾಟಕ ಮೊದಲಾಗಿ ಅಸಂಖ್ಯ ಸಾಮಾಜಿಕ ನಾಟಕಗಳಲ್ಲಿ, ‘ಸಂಗ್ಯಾಬಾಳ್ಯ’, ‘ಸೂರ್ಯ ಶಿಕಾರಿ’, ‘ಜೋಕುಮಾರ ಸ್ವಾಮಿ’, ‘ಯಯಾತಿ’ಯಂಥ ಆಧುನಿಕ ನಾಟಕಗಳಲ್ಲೂ ಅವರು ತಮ್ಮ ಛಾಪು ಮೂಡಿಸಿದ್ದರು. ಅವರ ಜೀವನವು ರಂಗಭೂಮಿ ಚರಿತ್ರೆಯ ಮಹತ್ವದ ದಾಖಲೆಯಾಗಿ ಉಳಿದಿದೆ.


ರಂಗಭೂಮಿ ಕಲಾವಿದೆ​ ಸುಭದ್ರಮ್ಮ ಮನ್ಸೂರ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು