ಮಂಗಳವಾರ, ಸೆಪ್ಟೆಂಬರ್ 21, 2021
25 °C
ಕೊಡಗು– ಮೈಸೂರು ಜಿಲ್ಲೆಗಳನ್ನು ಸಂಪರ್ಕಿಸುವ ಸೇತುವೆ

ಕುಶಾಲನಗರ | ತೆಪ್ಪದಕಂಡಿ ತೂಗು ಸೇತುವೆ: ಬೈಕ್ ಸಂಚಾರ ನಿಷೇಧ

ರಘು ಹೆಬ್ಬಾಲೆ Updated:

ಅಕ್ಷರ ಗಾತ್ರ : | |

Prajavani

ಕುಶಾಲನಗರ: ಉತ್ತರ ಕೊಡಗಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಪ್ಪದಕಂಡಿ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆ ಮೇಲೆ ಬೈಕ್ ಸಂಚಾರಕ್ಕೆ ನಿಷೇಧ ಹೇರಲಾಗಿದ್ದು, ಸಾರ್ವಜನಿಕರ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಈ ಕ್ರಮವನ್ನು ಕೆಲವರು ಸ್ವಾಗತಿಸಿದರೆ ಇನ್ನು ಕೆಲವರು ವಿರೋಧಿಸಿದ್ದಾರೆ.

ಹತ್ತು ವರ್ಷಗಳ ಹಿಂದೆ ಕೊಡಗು ಹಾಗೂ ಮೈಸೂರು ಜಿಲ್ಲೆಗಳ ಗಡಿಗ್ರಾಮಗಳ ಜನರ ಅನುಕೂಲಕ್ಕಾಗಿ ಶಿವಮೊಗ್ಗ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ₹60 ಲಕ್ಷ ವೆಚ್ಚದಲ್ಲಿ 125 ಮೀಟರ್ ಉದ್ದದ ತೂಗು ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು. ಈ ಸೇತುವೆ ಪ್ರವಾಸಿಗರ ಆಕರ್ಷಣೆಯೂ ಆಗಿದ್ದು, ಪ್ರವಾಸಿ ತಾಣ ದುಬಾರೆ, ಚಿಕ್ಲಿಹೊಳೆ ವೀಕ್ಷಣೆಗೆ ಬರುವ ಪ್ರವಾಸಿಗರು ಈ ಸೇತುವೆ ಮೇಲೆ ಸಂಚರಿಸಿ ಸಂಭ್ರಮಿಸುತ್ತಿದ್ದರು.

ಈ ಸೇತುವೆಯಿಂದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಮರೂರು, ಲಿಂಗಾಪುರ, ರಾಣಿಗೇಟ್, ಚಿಕ್ಕಹೊಸೂರು, ದೊಡ್ಡಹೊಸೂರು, ದೊಡ್ಡಹರವೆ ಸುತ್ತಲಿನ ಗ್ರಾಮಗಳಿಗೆ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಗುಡ್ಡೆಹೊಸೂರು, ತೆಪ್ಪದಕಂಡಿ, ರಂಗಸಮ್ರಂದ್ರ, ಬಸವನಹಳ್ಳಿ ಮತ್ತಿತರ ಗ್ರಾಮಗಳ ಜನ ಈ ಸೇತುವೆಯನ್ನು ದಾಟಿದರೆ ಕುಶಾಲನಗರ ತಲುಪಬಹುದು. ಇಲ್ಲದಿದ್ದಲ್ಲಿ 25 ಕಿ.ಮೀ. ಬಳಸಿ ಕೊಪ್ಪ ಗ್ರಾಮದ ಮುಖಾಂತರ ಕುಶಾಲನಗರಕ್ಕೆ ಬರಬೇಕಾಗುತ್ತದೆ.

ಆದರೆ, ಈಗ ತೆಪ್ಪದಕಂಡಿ ತೂಗುಸೇತುವೆಯ ಮೇಲೆ ದ್ವಿಚಕ್ರ ವಾಹನಗಳ ಸಂಚಾರ ನಿರಂತರವಾಗಿ ನಡೆಯುತ್ತಿದ್ದು, ಯುವಕರು ಬೈಕ್ ಅನ್ನು ಸೇತುವೆ ಮೇಲೆ ಜೋರಾಗಿ ಓಡಿಸುವುದು, ಬೈಕ್ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳುವುದು, ಇನ್ನಿತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಕಂಡುಬಂದಿದೆ. ಇದರಿಂದ ಮುಂದಿನ ದಿನಗಳಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ನದಿಯಂಚಿನ ಗ್ರಾಮಸ್ಥರು ದೂರು ನೀಡಿದ ನಿಟ್ಟಿನಲ್ಲಿ  ತೂಗು ಸೇತುವೆಯ ಸಂರಕ್ಷಣೆ ದೃಷ್ಟಿಯಿಂದ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಬೈಕ್ ಸಂಚಾರಕ್ಕೆ ನಿಷೇಧ ಹೇರಿ ಗೇಟ್ ನಿರ್ಮಿಸಲಾಗಿದೆ.

ಮೈಸೂರು-ಕೊಡಗು ಜಿಲ್ಲೆಗಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ಮೂಲಕ ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನಗಳಲ್ಲಿ ಗಾಂಜಾ ಮತ್ತಿತರ ವಸ್ತುಗಳನ್ನು ಯಥೇಚ್ಚವಾಗಿ ಸಾಗಾಟ ಮಾಡುತ್ತಿರುವ ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ತಿಳಿಸಿದ್ದಾರೆ.

ಅಸಮಧಾನ: ತೂಗು ಸೇತುವೆ ಮೇಲೆ ಬೈಕ್ ಸಂಚಾರ ನಿಷೇಧಿಸಿರುವುದರಿಂದ ನೂರಾರು ಕೂಲಿ ಕಾರ್ಮಿಕರಿಗೆ ತೊಂದರೆ ಉಂಟಾಗಲಿದೆ. ಕುಶಾಲನಗರ, ಹಾರಂಗಿ, ದುಬಾರೆ, ಸುಂಟಿಕೊಪ್ಪ, ಮಡಿಕೇರಿ ಮತ್ತಿತರ ಊರುಗಳಿಗೆ ಕಾರ್ಮಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಬೈಕ್ ಹಾಗೂ ಸೈಕಲ್‌ನಲ್ಲಿ ತೆರಳತ್ತಾರೆ. ಈಗ ನಿಷೇಧ ಹೇರಿರುವುದರಿಂದ ನಡೆದುಕೊಂಡೇ ಹೋಗಬೇಕಾಗಿದೆ. ಆದ್ದರಿಂದ ಬೈಕ್ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಕೆಲವರು ಒತ್ತಾಯಿಸಿದ್ದಾರೆ.

ಎರಡು ಜಿಲ್ಲೆಗಳ ಗಡಿಗ್ರಾಮಗಳ ಜನರು ಹಿಂದೆ ತೆಪ್ಪದ ಮೂಲಕ ನದಿದಾಟುತ್ತಿದ್ದರು, ಇದನ್ನು ತಪ್ಪಿಸುವ ಉದ್ದೇಶದಿಂದ ತೂಗುಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಕಳೆದ ಎರಡು ವರ್ಷ ಪ್ರವಾಹಕ್ಕೆ ಸಿಲುಕಿ ಹಾನಿಯಾಗಿದ್ದ ಸೇತುವೆಯನ್ನು ದುರಸ್ತಿ ಮಾಡಲಾಗಿದ್ದು, ಅದರ ಮೇಲೆ ಯುವಕರು ಮನಸೋಇಚ್ಛೆ ಬೈಕ್ ಚಾಲನೆ ಮಾಡುತ್ತಿದ್ದರು. ಆದ್ದರಿಂದ ಸೇತುವೆ ಸುರಕ್ಷತೆ ದೃಷ್ಟಿಯಿಂದ ಬೈಕ್ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಗುಡ್ಡೆಹೊಸೂರು ಪಿಡಿಒ ಎಸ್.ಟಿ.ಶ್ಯಾಮ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು