ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುತಾತ್ಮ ಯೋಧರ ಕುಟುಂಬದೊಂದಿಗೆ ಸರ್ಕಾರವಿದೆ: ಬಿ.ಎಸ್. ಯಡಿಯೂರಪ್ಪ

Last Updated 26 ಜುಲೈ 2020, 8:37 IST
ಅಕ್ಷರ ಗಾತ್ರ

ಬೆಂಗಳೂರು: ದೇಶ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಯೋಧರ ಕುಟುಂಬದೊಂದಿಗೆ ನಮ್ಮ ಸರ್ಕಾರವಿದೆ. ಅವರ ಕುಟುಂಬಕ್ಕೆ ಎಲ್ಲ ಸೌಲಭ್ಯ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಕಾರ್ಗಿಲ್ ವಿಜಯ ದಿವಸ’ ಸಮಾರಂಭದಲ್ಲಿ ಮುಖ್ಯಮಂತ್ರಿ ಮಾತನಾಡಿದರು. ಅದಕ್ಕೂ ಮೊದಲು ಅವರು ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು.

‘ಭಾರತ ಮಾತೆಯ ರಕ್ಷಣೆಗಾಗಿ ಜೀವವನ್ನೇ ಸಮರ್ಪಿಸಿಕೊಂಡ ಭಾರತೀಯ ಯೋಧರ ಶೌರ್ಯ ಮತ್ತು ತ್ಯಾಗಕ್ಕೆ ಸದಾ ಕೃತಜ್ಞರಾಗಿದ್ದೇವೆ’ ಎಂದರು.

‘ದೇಶದ ಕಾರ್ಗಿಲ್ ಪ್ರದೇಶವನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿತ್ತು. ಅಸಾಧ್ಯವಾದ ವಾತಾವರಣದಲ್ಲಿಯೂ ಯೋಧರು ಕೆಚ್ಚೆದೆಯಿಂದ ಸತತವಾಗಿ ಹೋರಾಡಿ ಆ ಪ್ರದೇಶವನ್ನು ಮತ್ತೆ ವಶಪಡಿಸಿಕೊಂಡರು. ಯುದ್ಧದಲ್ಲಿ ಹುತಾತ್ಮರಾದವರು ಮತ್ತು ಮಾಜಿ ಸೈನಿಕರಿಗೆ ಸರ್ಕಾರ ಸದಾ ನೆರವು ನೀಡುತ್ತದೆ. ದೇಶ ರಕ್ಷಣೆ ಮಾಡುವ ಸೈನಿಕರ ಪರ ನಿಲ್ಲಲು ಸರ್ಕಾರ ಸದಾ ಸಿದ್ಧ’ ಎಂದು ಭರವಸೆ ನೀಡಿದರು.

‘ಕಾರ್ಗಿಲ್ ಅತ್ಯಂತ ದುರ್ಗಮ ಪ್ರದೇಶವಾಗಿತ್ತು. 1999 ಮೇ 5ರಿಂದ ಜುಲೈ 26ವರಗೆ ಹೋರಾಟ ನಡೆಸಿ ಭಾರತಿಯ ಸೈನಿಕರು ಶತ್ರುಗಳನ್ನು ಹಿಮ್ಮೆಟ್ಟಿಸಿ ವಿಜಯಿಯಾದರು. ಯೋಧರ ಈ ಸಾಹಸಗಾಥೆ ಯುವ ಪೀಳಿಗೆಗೆ ಸ್ಫೂತಿಯಾಗಿದೆ’ ಎಂದರು.

‘ಪ್ರವಾಹ, ಭೂಕಂಪ, ಸುನಾಮಿಯಂಥ ವಿಪತ್ತಿನ ಸಂದರ್ಭದಲ್ಲಿ ನಾಡಿನ ರಕ್ಷಣೆಗೆ ಧಾವಿಸುವ ಯೋಧರ ಸಾಹಸ ಅನುಕರಣೀಯ’ ಎಂದೂ ಮುಖ್ಯಮಂತ್ರಿ ಹೇಳಿದರು.

‘ಕರ್ನಾಟಕದ 16 ಸೈನಿಕರು ಸೇರಿದಂತೆ ಒಟ್ಟು 527 ಸೈನಿಕರು ಕಾರ್ಗಿಲ್‌ ಯುದ್ಧದಲ್ಲಿ ತಮ್ಮ ಪ್ರಾಣ ಬಲಿ ಕೊಟ್ಟಿದ್ದಾರೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕೆಚ್ಚೆದೆಯ ಯೋಧರ ಪರಂಪರೆ ಮುಂದುವರಿಸುವ ಪಣ ತೊಡೋಣ’ ಎಂದು ಯಡಿಯೂರಪ್ಪ ಹೇಳಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಿವೃತ್ತ ಯೋಧರು, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಪೊಲೀಸ್​ ಕಮಿಷನರ್‌ ಭಾಸ್ಕರ್ ರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT