ಭಾನುವಾರ, ಏಪ್ರಿಲ್ 5, 2020
19 °C

ಕೊರೊನಾ ತಲ್ಲಣ: ಸೋಂಕು ಕಡಿವಾಣಕ್ಕೆ ಕಂಕಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌19 ರೋಗದಿಂದಾಗಿ ದೇಶದಲ್ಲಿ ನಾಲ್ಕನೇ ವ್ಯಕ್ತಿ ಮೃತಪಟ್ಟಿದ್ದಾರೆ. 70 ವರ್ಷ ವಯಸ್ಸಿನ ಈ ವ್ಯಕ್ತಿಗೆ ಮಧುಮೇಹ ಮತ್ತು ಹೃದಯಸಂಬಂಧಿ ಕಾಯಿಲೆಗಳೂ ಇದ್ದವು. ದೇಶದಲ್ಲಿ ಕೊರೊನಾ ವೈರಸ್‌ ಸೋಂಕು ದೃಢಪಟ್ಟವರ ಸಂಖ್ಯೆ ಗುರುವಾರ 173ಕ್ಕೆ ಏರಿದೆ. ಹೆಚ್ಚಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಿರ್ಬಂಧಗಳನ್ನು ಹೇರಿದ್ದು, ದೇಶದ ಬಹುಭಾಗ ಭಾಗಶಃ ಸ್ಥಗಿತದ ಸ್ಥಿತಿಯತ್ತ ಸಾಗಿದೆ. ಅಂತರರಾಷ್ಟ್ರೀಯ ವಿಮಾನಗಳು ಭಾರತದಲ್ಲಿ ಇಳಿಯುವುದಕ್ಕೆ ಭಾನುವಾರದಿಂದ ನಿಷೇಧ ಹೇರಲಾಗಿದೆ. ಇದೇ 29ರವರೆಗೆ ಇದು ಜಾರಿಯಲ್ಲಿರುತ್ತದೆ.

ಹೊಸ 20 ಪ್ರಕರಣಗಳು ಗುರುವಾರ ದೃಢಪಟ್ಟಿವೆ. ಗುಜರಾತ್‌ ಮತ್ತು ಛತ್ತೀಸಗಡಕ್ಕೂ ಕೊರೊನಾ ವೈರಸ್‌ ವಿಸ್ತರಿಸಿದೆ. ಗುಜರಾತ್‌ನಲ್ಲಿ ಎರಡು, ಛತ್ತೀಸಗಡ ಮತ್ತು ಚಂಡೀಗಡದಲ್ಲಿ ತಲಾ ಒಂದೊಂದು ಪ್ರಕರಣಗಳು ವರದಿಯಾಗಿವೆ. ಕೊರೊನಾ ವೈರಸ್‌ ತನ್ನ ಕಬಂಧ ಬಾಹುಗಳನ್ನು ದೇಶದ ವಿವಿಧ ಭಾಗಗಳತ್ತ ಚಾಚಿದೆ. ಕಾಶ್ಮೀರ ಕಣಿವೆಯು ಸಂಪೂರ್ಣ ಬಂದ್‌ ಆಗುವಂತೆ ತೋರುತ್ತಿದೆ. ಇಲ್ಲಿನ ವಿವಿಧ ಭಾಗಗಳಲ್ಲಿ ಜನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಶ್ರೀನಗರ ನಗರದಲ್ಲಿ ಸಾರ್ವಜನಿಕ ಸಾರಿಗೆಯನ್ನು ನಿಷೇಧಿಸಲಾಗಿದೆ.  

ಪಂಜಾಬ್ ಮತ್ತು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೂಡ ಇದೇ ಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರ ಮಧ್ಯರಾತ್ರಿಯಿಂದ ಸಾರ್ವಜನಿಕ ಸಾರಿಗೆಯನ್ನು ಅಮಾನತು ಮಾಡಲು ಪಂಜಾಬ್‌ ಸರ್ಕಾರ ನಿರ್ಧರಿಸಿದೆ. ಇಲ್ಲಿ, 20ಕ್ಕಿಂತ ಹೆಚ್ಚು ಜನ ಸೇರುವ ಎಲ್ಲ ಕಾರ್ಯಕ್ರಮಗಳ ಮೇಲೆ ನಿರ್ಬಂಧ ಹೇರಲಾಗಿದೆ. ಮದುವೆ ಮಂಟಪಗಳು, ಹೋಟೆಲ್‌ಗಳು, ರೆಸ್ಟೊರೆಂಟ್‌ಗಳನ್ನು ಮುಚ್ಚಲಾಗಿದೆ. ಮನೆಗೆ ಆಹಾರ ಪೂರೈಸುವ ವ್ಯವಸ್ಥೆಗೆ ಅವಕಾಶ ನೀಡಲಾಗಿದೆ. 

ಸರ್ಕಾರದ ಅತ್ಯಗತ್ಯವಲ್ಲದ ಸೇವೆಗಳನ್ನು ನಿಲ್ಲಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ತಿಳಿಸಿದ್ದಾರೆ. 

ಮಹಾರಾಷ್ಟ್ರದಲ್ಲಿ 45, ಕೇರಳದಲ್ಲಿ 27, ಉತ್ತರ ಪ್ರದೇಶದಲ್ಲಿ 17, ಹರಿಯಾಣದಲ್ಲಿ 17, ಕರ್ನಾಟಕದಲ್ಲಿ 14, ಲಡಾಖ್‌ನಲ್ಲಿ 8, ರಾಜಸ್ಥಾನದಲ್ಲಿ 7, ತೆಲಂಗಾಣದಲ್ಲಿ 6, ಜಮ್ಮು–ಕಾಶ್ಮೀರದಲ್ಲಿ 4, ತಮಿಳುನಾಡಿನಲ್ಲಿ 2, ಆಂಧ್ರ ಪ್ರದೇಶ, ಒಡಿಶಾ, ಉತ್ತರಾಖಂಡ, ಪಶ್ಚಿಮ ಬಂಗಾಳ, ಪುದುಚೇರಿ, ಚಂಡೀಗಡ ಮತ್ತು ಪಂಜಾಬ್‌ನಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿವೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ 23ಕ್ಕೆ ನಿರ್ಧಾರ

ಬೆಂಗಳೂರು: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ನಿಗದಿಯಂತೆ 27ರಿಂದ ನಡೆಸಬೇಕೇ ಅಥವಾ ಮುಂದೂಡಬೇಕೇ ಎನ್ನುವ ಕುರಿತು ಸರ್ಕಾರ ಇದೇ 23ರಂದು ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ.

ಕೋವಿಡ್ 19: ಇಬ್ಬರು ಗುಣಮುಖ

‘ಕೊರೊನಾ ಸೋಂಕಿತ ಇಬ್ಬರು ಸಂಪೂರ್ಣ ಚೇತರಿಸಿಕೊಂಡಿದ್ದು, ಅವರನ್ನು ಶುಕ್ರವಾರ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗುವುದು’ ಎಂದು ವೈದ್ಯಕೀಯ ಸಚಿವ ಡಾ. ಸುಧಾಕರ್ ತಿಳಿಸಿದರು.‘ಸೋಂಕು
ತಗಲಿದ್ದ ಎರಡನೇ ಮತ್ತು ಐದನೇ ವ್ಯಕ್ತಿ ಚೇತರಿಸಿಕೊಂಡವರು. ಮುಂದಿನ 24 ಗಂಟೆಗಳಲ್ಲಿ ಅವರಿಗೆ ಇನ್ನು ಎರಡು ಬಾರಿ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ಪೂರ್ಣ ಗುಣಮುಖರಾಗಿ ಮನೆಗೆ ತೆರಳುವ ಅವರಿಬ್ಬರ ಬಗ್ಗೆ ಇನ್ನೂ 14 ದಿನ‌ ಮನೆಯಲ್ಲಿ ನಿಗಾ ವಹಿಸಲಾಗುವುದು’ ಎಂದರು.

ಸೋಂಕಿತರ ಸಂಖ್ಯೆ 15ಕ್ಕೆ

ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 15ಕ್ಕೆ ಏರಿದೆ.

ದುಬೈನಿಂದ ಇದೇ 15ರಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ವ್ಯಕ್ತಿಯೊಬ್ಬರು ಬಿಎಂಟಿಸಿ ಬಸ್‌ ಮೂಲಕ ಮಲ್ಲೇಶ್ವರ, ಸೆಟಲೈಟ್ ಬಸ್‌ ನಿಲ್ದಾಣ, ಅಲ್ಲಿಂದ ರಾಜಹಂಸ ಬಸ್‌ನಲ್ಲಿ ಕೊಡಗಿನ ಮೂರ್ನಾಡಿಗೆ ಹೋಗಿ, ಕುಂಜಿಲದ ಮನೆ, ದರ್ಗಾಕ್ಕೆ ಭೇಟಿ ಕೊಟ್ಟಿದ್ದಾರೆ. ಅವರಲ್ಲಿ ಕೋವಿಡ್ ಇರುವುದು ದೃಢಪಟ್ಟಿದೆ.

ಮಸೀದಿ ಪ್ರಾರ್ಥನೆ 15 ನಿಮಿಷಕ್ಕೆ ಸೀಮಿತ

ಮಸೀದಿಗಳಲ್ಲಿ ಶುಕ್ರವಾರ ನಡೆಯುವ ನಮಾಜ್‌ ಅನ್ನು 15 ನಿಮಿಷಕ್ಕೆ ಸೀಮಿತಗೊಳಿಸುವಂತೆ ಮಸೀದಿಗಳ ವ್ಯವಸ್ಥಾಪನ ಸಮಿತಿಗಳು ಸೂಚಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು