ಅಪಘಾತ ಭಯ: ಸರ್ಕಾರಿ ಶಾಲೆ ತ್ಯಜಿಸಿದ ಮಕ್ಕಳು

7
ಇಂಡುವಾಳು; ಹೆದ್ದಾರಿ ದಾಟಲು ಪರದಾಡುತ್ತಿರುವ ವಿದ್ಯಾರ್ಥಿಗಳು, ಪೋಷಕರಿಗೆ ಆತಂಕ

ಅಪಘಾತ ಭಯ: ಸರ್ಕಾರಿ ಶಾಲೆ ತ್ಯಜಿಸಿದ ಮಕ್ಕಳು

Published:
Updated:
Deccan Herald

ಮಂಡ್ಯ: ನಗರದ ಹೊರವಲಯದ ಇಂಡುವಾಳು ಗೇಟ್‌ನ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿನಿತ್ಯ ರಸ್ತೆ ಅಪಘಾತ ನಡೆಯುತ್ತಿವೆ. ರಸ್ತೆ ಬದಿಯಲ್ಲೇ ಇರುವ ಸರ್ಕಾರಿ ಶಾಲೆಯ ಮಕ್ಕಳು ಹೆದ್ದಾರಿ ದಾಟಲು ಪರದಾಡುತ್ತಿದ್ದಾರೆ. ಅಪಘಾತ ಭಯದಿಂದಾಗಿ ಬಹುತೇಕ ಮಕ್ಕಳು ಶಾಲೆಯನ್ನೇ ತ್ಯಜಿಸುತ್ತಿದ್ದಾರೆ.

ಇಂಡುವಾಳು ಗ್ರಾಮದ ಹೆದ್ದಾರಿ ಬದಿಯಲ್ಲಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಿವೆ. ಕಳೆದ ವರ್ಷ ಶಾಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಕಾಳೇನಹಳ್ಳಿ, ಸುಂಡಹಳ್ಳಿ, ರಾಗಿಮುದ್ದನಹಳ್ಳಿ, ಉರಮಾರಕಸಲಗೆರೆ, ದೊಡ್ಡಬ್ಯಾಡರಹಳ್ಳಿ, ತೂಬಿನಕೆರೆ, ಮೋಳೆಕೊಪ್ಪಲು ಮುಂತಾದ ಗ್ರಾಮಗಳಿಂದ ಮಕ್ಕಳು ಈ ಶಾಲೆಗಳಿಗೆ ದಾಖಲಾಗುತ್ತಿದ್ದರು. ನಗರದ ಕಡೆಯಿಂದ ಈ ಶಾಲೆಗಳು ಬಲಭಾಗಕ್ಕಿವೆ. ಮಕ್ಕಳು ಎಡಭಾಗದಲ್ಲಿ ಬಸ್‌ ಇಳಿದು ರಸ್ತೆ ದಾಟಿ ಬಲಭಾಗಕ್ಕೆ ತೆರಳಬೇಕು. ಇಂಡುವಾಳು ಗೇಟ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಅತೀ ಹೆಚ್ಚು ವೇಗವಾಗಿ ಚಲಿಸುವ ಕಾರಣ ಮಕ್ಕಳ ಪ್ರಾಣಕ್ಕೆ ಕುತ್ತು ಎದುರಾಗಿದೆ.

ಇದೇ ಗೇಟ್‌ನಲ್ಲಿ ಕಳೆದ ವರ್ಷ 1ನೇ ತರಗತಿಯ ಮಗುವೊಂದು ಆಟೊ ಚಕ್ರಕ್ಕೆ ಸಿಲುಕಿ ಮೃತಪಟ್ಟಿತು. ಈ ಘಟನೆಯ ನಂತರ ಆತಂಕಗೊಂಡ ಪೋಷಕರು ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲು ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಶಾಲೆಯಲ್ಲಿ ದಾಖಲಾತಿ ಕುಸಿದಿದ್ದು ಮಕ್ಕಳ ಸಂಖ್ಯೆ 80ಕ್ಕೆ ಇಳಿದಿದೆ. ಮಕ್ಕಳು ಈಗಲೂ ಕೈಯಲ್ಲಿ ಜೀವ ಹಿಡಿದು ರಸ್ತೆ ದಾಟುತ್ತಿವೆ. ಗೇಟ್‌ನಲ್ಲಿ ಬ್ಯಾರಿಕೇಡ್‌, ಹಂಪ್‌, ಟ್ರಾಫಿಕ್‌ ಸಿಬ್ಬಂದಿ, ಸಿಸಿಟಿವಿ ಕ್ಯಾಮೆರಾ ಇಲ್ಲದ ಕಾರಣ ಅಪಘಾತ ಭೀತಿ ಸದಾ ಮಕ್ಕಳು ಹಾಗೂ ಪೋಷಕರನ್ನು ಕಾಡುತ್ತಿದೆ.

‘ನಮ್ಮ ಶಾಲೆಗೆ ಮೋಳೆಕೊಪ್ಪಲು ಕಿರಿಯ ಪ್ರಾಥಮಿಕ ಶಾಲೆಯಿಂದ ಹೆಚ್ಚು ವಿದ್ಯಾರ್ಥಿಗಳು ದಾಖಲಾಗುತ್ತಿದ್ದರು. ಆದರೆ 1ನೇ ತರಗತಿ ವಿದ್ಯಾರ್ಥಿ ರಸ್ತೆ ಅಪಘಾತದಿಂದ ಮೃತಪಟ್ಟ ನಂತರ ಶಾಲಾ ದಾಖಲಾತಿ ಕುಸಿದಿದೆ. ಇದಕ್ಕೆ ಪ್ರಾಣ ತೆಗೆಯುವ ರಾಷ್ಟ್ರೀಯ ಹೆದ್ದಾರಿಯೇ ಕಾರಣ. ಮಕ್ಕಳನ್ನು ರಸ್ತೆ ದಾಟಿಸಲು ಅರ್ಧಗಂಟೆ ನಾವೇ ರಸ್ತೆಯಲ್ಲಿ ನಿಂತಿರುತ್ತೇವೆ. ಯಾವ ಕಡೆಯಿಂದ ವಾಹನ ಬಂದು ಡಿಕ್ಕಿ ಹೊಡೆಯುತ್ತವೋ ಎಂಬ ಭಯ ಕಾಡುತ್ತದೆ. ಜೀವ ಕೈಗೆ ಬಂದಂತಾಗುತ್ತದೆ. ಇಲ್ಲಿ ಪೊಲೀಸರು ಯಾವ ರಕ್ಷಣಾ ವ್ಯವಸ್ಥೆಯನ್ನೂ ಮಾಡಿಲ್ಲ. ಕಡೇ ಪಕ್ಷ, ಇಲ್ಲಿ ಶಾಲೆ ಇದೆ ಎಂಬ ಫಲಕವನ್ನೂ ಹಾಕಿಲ್ಲ. ಶೀಘ್ರ ಪೊಲೀಸರು ಇಲ್ಲಿಗೆ ಟ್ರಾಫಿಕ್‌ ಸಿಬ್ಬಂದಿಯನ್ನು ನೇಮಕ ಮಾಡಬೇಕು’ ಎಂದು ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ಎಸ್‌.ಸುಧಾ ಆಗ್ರಹಿಸಿದರು.

ಐದು ದಿನದಲ್ಲಿ ಐದು ಅಪಘಾತ:
ಕಳೆದ ಐದು ದಿನದಿಂದೀಚೆಗೆ ಇಂಡುವಾಳು ಗೇಟ್‌ನಲ್ಲಿ ಐದು ಅಪಘಾತಗಳಾಗಿವೆ. ಇದರಲ್ಲಿ ಒಬ್ಬರು ಮೃತಪಟ್ಟಿದ್ದು ಐವರು ತೀವ್ರವಾಗಿ ಗಾಯಗೊಂಡಿದ್ದಾರೆ. ‘ಇದು ಹೆದ್ದಾರಿಯಲ್ಲ, ಹೆಬ್ಬಾವು. ಈ ರಸ್ತೆಗೆ ಶಾಲಾ ಮಕ್ಕಳು ಬಲಿಯಾಗಬಾರದು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಈ ಬಗ್ಗೆ ಕೂಡಲೇ ಗಮನ ಹರಿಸಿ ಟ್ರಾಫಿಕ್‌ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು’ ಎಂದು ಹೋರಾಟಗಾರ ಇಂಡುವಾಳು ಬಸವರಾಜು ಆಗ್ರಹಿಸಿದರು.

ಬೈಕ್‌ ಡಿಕ್ಕಿ: ಸರ್ಕಾರಿ ಶಾಲೆಯ ಆಯ ಸಾವು

ಇಂಡುವಾಳು ಗೇಟ್‌ ಬಳಿ ಸರ್ಕಾರಿ ಶಾಲೆಯ ಮಕ್ಕಳನ್ನು ರಸ್ತೆ ದಾಟಿಸಿ ಬರುತ್ತಿದ್ದ ಮಹಿಳೆಯೊಬ್ಬರಿಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ಆ ಮಹಿಳೆ ಮಂಗಳವಾರ ಸಂಜೆ ಮೃತಪಟ್ಟಿದ್ದಾರೆ.
ಇಂಡುವಾಳು ಗ್ರಾಮದ ನಿಂಗಮ್ಮ (60) ಮೃತಪಟ್ಟವರು. ಸರ್ಕಾರಿ ಶಾಲೆಯಲ್ಲಿ 40 ವರ್ಷಗಳಿಂದ ಆಯ ಆಗಿ ಕೆಲಸ ಮಾಡುತ್ತಿದ್ದರು. ಮಕ್ಕಳನ್ನು ಸುರಕ್ಷಿತವಾಗಿ ರಸ್ತೆ ದಾಟಿಸಿ ಮನೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಮೈಸೂರು ಕಡೆಯಿಂದ ವೇಗವಾಗಿ ಬಂದ ಬೈಕ್‌ ಮಹಿಳೆಗೆ ಡಿಕ್ಕಿ ಹೊಡೆದಿದೆ. ಸವಾರ ಬೈಕ್‌ ನಿಲ್ಲಿಸದೇ ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡ ನಿಂಗಮ್ಮ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟರು. ಗ್ರಾಮಾಂತರ ಠಾಣೆಯಲ್ಲಿ ಹಿಟ್‌ ಅಂಡ್‌ ರನ್‌ ಪ್ರಕರಣ ದಾಖಲಾಗಿದೆ.

ಇಂಡುವಾಳು ಸರ್ಕಲ್‌ನಲ್ಲಿ ಸಿಬ್ಬಂದಿ ಹಾಕುವುದು ಕಷ್ಟ, ಆದರೆ ಅಲ್ಲಿ ಪ್ರತಿಬಿಂಬಿಸುವ ಬ್ಯಾರಿಕೇಡ್‌ (ರಿಫ್ಲೆಕ್ಟೀವ್‌) ಹಾಕುತ್ತೇವೆ. ಇದರಿಂದ ಅರ್ಧ ಕಿ.ಮೀ ದೂರದಲ್ಲಿ ಬರುತ್ತಿರುವ ವಾಹನಗಳು ವೇಗ ನಿಯಂತ್ರಿಸುತ್ತವೆ
– ಅಜರುದ್ದೀನ್‌, ಸಬ್‌ ಇನ್‌ಸ್ಪೆಕ್ಟರ್‌, ಗ್ರಾಮಾಂತರ ಠಾಣೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !