ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳೆ ಮಾಡುವ ವಿವಿಪ್ಯಾಟ್‌ ಸಂಖ್ಯೆ ಹೆಚ್ಚಿಸಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ

ಲೋಕಸಭಾ ಚುನಾವಣೆ 2019
Last Updated 9 ಏಪ್ರಿಲ್ 2019, 1:28 IST
ಅಕ್ಷರ ಗಾತ್ರ

ನವದೆಹಲಿ:2019ರ ಲೋಕಸಭಾ ಚುನಾವಣೆಯಲ್ಲಿ ಪ್ರತಿ ಕ್ಷೇತ್ರದಿಂದ ಒಂದು ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ಬದಲು ಐದು ಇವಿಎಂಗಳ ವಿವಿಪ್ಯಾಟ್ ರಶೀತಿಗಳನ್ನು ತಾಳೆಮಾಡುವಂತೆಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ಆದೇಶಿಸಿದೆ.

‘2019ರ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ ಶೇ 50ರಷ್ಟು ಮತಗಟ್ಟೆಗಳ ಮತಯಂತ್ರ ಮತ್ತು ವಿವಿಪ್ಯಾಟ್‌ ರಶೀತಿಗಳನ್ನು ತಾಳೆ ಮಾಡಿಸಬೇಕು’ ಎಂದು 21 ವಿರೋಧಪಕ್ಷಗಳು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದವು.

ಇವಿಎಂಗಳನ್ನು ಮಾರ್ಪಡಿಸಲು ಸಾಧ್ಯವಿದ್ದು, ಪೇಪರ್‌ ಬ್ಯಾಲೆಟ್‌ ಮತದಾನ ಪ್ರಕ್ರಿಯಿಗೆ ಮರಳುವಂತೆಯೂ ಕೆಲವು ವಿರೋಧ ಪಕ್ಷಗಳು ಪ್ರಾರಂಭದಲ್ಲಿ ಒತ್ತಾಯಿಸಿದ್ದವು.ಇವಿಎಂ ಕುರಿತು ವಿರೋಧ ಪಕ್ಷಗಳು ಮಾಡಿದ ಆರೋಪಗಳನ್ನು ಚುನಾವಣಾ ಆಯೋಗ ತಳ್ಳಿ ಹಾಕಿತ್ತು. ಇದರ ಬೆನ್ನಲೇ ವಿರೋಧ ಪಕ್ಷಗಳು ಶೇ 50ರಷ್ಟು ಮತಗಳನ್ನು ತಾಳೆ ಮಾಡುವಂತೆ ಒತ್ತಾಯಿಸಿದ್ದವು.

’ರಶೀತಿಗಳ ತಾಳೆ ಕಾರ್ಯವನ್ನು ಒಂದು ಇವಿಎಂನ ವಿವಿಪ್ಯಾಟ್‌ನಿಂದ ಐದಕ್ಕೆ ಹೆಚ್ಚಿಸುವುದರಿಂದ ಹೆಚ್ಚುವರಿ ಮಾನಸಂಪನ್ಮೂಲದ ಅಗತ್ಯ ಎದುರಾಗುವುದಿಲ್ಲ ಅಥವಾ ಫಲಿತಾಂಶ ಪ್ರಕಟಣೆ ಸಮಯದಲ್ಲಿಯೂ ಹೆಚ್ಚು ವಿಳಂಬವಾಗುವುದಿಲ್ಲ’ ಎಂಬ ಅಭಿಪ್ರಾಯ ಹೊಂದಿರುವುದಾಗಿ ಕೋರ್ಟ್‌ ಹೇಳಿದೆ.

ಮತದಾರ ಇವಿಎಂನಲ್ಲಿ ಮತ ಚಲಾಯಿಸಿದ ನಂತರ ವಿವಿಪ್ಯಾಟ್‌ ಯಂತ್ರದಿಂದ ಮುದ್ರಿತ ರಶೀತಿ ಹೊರಬರುತ್ತದೆ. ಆ ರಶೀತಿಯಲ್ಲಿ ಅಭ್ಯರ್ಥಿ ಹೆಸರು ಹಾಗೂ ಪಕ್ಷದ ಚಿಹ್ನೆ ಒಳಗೊಂಡಿರುತ್ತದೆ. ಮತದಾರ ವಿವಿಪ್ಯಾಟ್‌ನ ಮೇಲ್ಭಾಗದ ಪಾರದರ್ಶಕ ಪರದೆಯಲ್ಲಿ ಏಳು ಸೆಕೆಂಡ್‌ಗಳ ವರೆಗೂ ರಶೀತಿ ಗಮನಿಸಬಹುದು. ಏಳು ಸೆಕೆಂಡ್‌ಗಳ ನಂತರ ರಶೀತಿ ಮುಚ್ಚಿದ ಡಬ್ಬದೊಳಗೆ ಸಂಗ್ರಹಗೊಳ್ಳುತ್ತದೆ.

ವಿವಿಪ್ಯಾಟ್‌ ತಾಳೆ ಮಾಡುವ ಸಂಖ್ಯೆಯನ್ನು ಐದಕ್ಕೆ ಹೆಚ್ಚಿಸಿದರೂ, ನಿಗದಿತ ಅಧಿಕಾರಿಗಳ ತಂಡದಿಂದಲೇ ತಾಳೆ ಕಾರ್ಯ ಪೂರ್ಣಗೊಳಿಸಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಳಕೆಯಾಗುವ ಎಲ್ಲ ಇವಿಎಂಗಳಿಗೂ ವಿವಿಪ್ಯಾಟ್‌ ಅಳವಡಿಸಲು ಕ್ರಮವಹಿಸಲಾಗಿದೆ.

ಕ್ಷೇತ್ರವಾರು ಮತಗಟ್ಟೆಗಳ ಲೆಕ್ಕಾಚಾರದಲ್ಲಿ ಚುನಾವಣಾ ಆಯೋಗ ಒಂದು ಇವಿಎಂನ ವಿವಿಪ್ಯಾಟ್‌ ರಶೀತಿ ತಾಳೆ ನಡೆಸಿದ್ದರೆ, ಒಟ್ಟು 4,125 ಇವಿಎಂಗಳ ತಾಳೆ ಕಾರ್ಯ ಮಾಡಬೇಕಿತ್ತು. ಕೋರ್ಟ್‌ ಆದೇಶದಿಂದಾಗಿ ಐದು ವಿವಿಪ್ಯಾಟ್‌ಗಳ ರಶೀತಿಗಳನ್ನು ತಾಳೆ ಮಾಡಬೇಕಿರುವುದರಿಂದ ಸುಮಾರು 20,625 ಇವಿಎಂಗಳ ತಾಳೆ ಕಾರ್ಯ ನಡೆಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT