ಗುರುವಾರ , ಸೆಪ್ಟೆಂಬರ್ 19, 2019
26 °C

ಗಾಜಿನ ಪುಡಿ ಲೇಪಿತ ಮಾಂಜಾ ದಾರಕ್ಕೆ ಯುವಕ ಬಲಿ

Published:
Updated:

ದೆಹಲಿ: ಗಾಳಿಪಟ ಹಾರಿಸಲು ಬಳಸಲಾಗುವ ಮಾರಕ ಚೈನೀಸ್‌ ಕೈಟ್‌ ಮಾಂಜಾ ದಾರಕ್ಕೆ ದೆಹಲಿಯಲ್ಲಿ ಯುವಕನೊಬ್ಬ ಬಲಿಯಾಗಿದ್ದಾರೆ.

ವೃತ್ತಿಯಿಂದ ಸಿವಿಲ್‌ ಎಂಜಿನಿಯರ್‌ ಆಗಿರುವ ಮಾನವ್‌ ಶರ್ಮಾ ಮೃತ ಯುವಕ.

ಮಾನವ್‌ ಶರ್ಮಾ ಅವರು ಗುರುವಾರ ತಮ್ಮ ಸೋದರಿಯರೊಂದಿಗೆ ರಕ್ಷಾ ಬಂಧನ ಹಬ್ಬ ಆಚರಿಸಿದ್ದರು. ನಂತರ ತಮ್ಮ ಸೋದರ ಸಂಬಂಧಿಯನ್ನು ಭೇಟಿಯಾಗಲು ಬುದ್ಧ ವಿಹಾರದ ತಮ್ಮ ನಿವಾಸದಿಂದ ಹರಿನಗರಕ್ಕೆ ಸೋದರಿಯರೊಂದಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾರೆ. ಈ ವೇಳೆ ದೆಹಲಿ ಪಶ್ಚಿಮ ವಿಹಾರದ ಫ್ಲೈಓವರ್‌ ಮೇಲೆ ಗಾಳಿಪಟವೊಂದರ ಮಾಂಜಾ ದಾರ ಅವರ ಕುತ್ತಿಗೆಯನ್ನು ಸುತ್ತಿಕೊಂಡು ಸೀಳಿದೆ. ಇದರಿಂದ ಕುತ್ತಿಗೆಯಲ್ಲಿ ಆಳವಾಗಿ ಗಾಯ ಮಾಡಿದೆ. ಅವಘಡಕ್ಕೆ ಸಿಲುಕುತ್ತಲೇ ಮಾನವ್‌ ಶರ್ಮ ವಾಹನದಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೊತ್ತಿಗಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಮಾನವ್‌ ಶರ್ಮ ಸೋದರಿಯರಿಬ್ಬರೂ ಪಾರಾಗಿದ್ದಾರೆ. ದೆಹಲಿಯಲ್ಲಿ ಗುರುವಾರ ಮಾಂಜಾ ದಾರದ ಅವಘಡಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ 15 ದೂರುಗಳು ಬಂದಿದ್ದವು ಎನ್ನಲಾಗಿದೆ. ಈ ಘಟನೆಗಳಲ್ಲಿ 8 ಮಂದಿ ಗಾಯಗೊಂಡಿದ್ದಾರೆ.

ನಿಷೇಧವಿದ್ದರೂ ಮಾರಾಟ, ಬಳಕೆ 

ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ ದೇಶದಲ್ಲಿ ಗಾಜಿನ ಪುಡಿ ಲೇಪಿತ ಮಾಂಜಾ ದಾರದ ಸಂಗ್ರಹಣೆ, ಮಾರಾಟವನ್ನು ನಿಷೇಧಿಸಲಾಗಿದೆ. ಆದರೆ, ಅದರ ಮಾರಾಟ ಮಾತ್ರ ನಿಂತಿಲ್ಲ. ಹೀಗಾಗಿ ನಿತ್ಯವೂ ಮಾಂಜಾ ದಾರದಿಂದಾದ ಅವಘಡಗಳ ಕುರಿತು ವರದಿಯಾಗುತ್ತಲೇ ಇದೆ. ಹಲವರು ಪ್ರಾಣ ತೆತ್ತಿದ್ದಾರೆ. ಪಕ್ಷಿ ಸಂಕುಲಕ್ಕೂ ಇದು ಮಾರಕವಾಗಿದೆ. ದೇಶದಲ್ಲಿ ಪ್ರತಿ ನಿಮಿಷಕ್ಕೆ 3 ಪಕ್ಷಿಗಳು ಮಾಂಜಾ ದಾರಕ್ಕೆ ಬಲಿಯಾಗುತ್ತಿವೆ ಎನ್ನುತ್ತವೆ ವರದಿಗಳು.‌

ಇನ್ನಷ್ಟು...

ಜೀವಕ್ಕೆ ಕುತ್ತು ತರುವ ‘ಮಾಂಜಾ’ ದಾರ ನಿಷೇಧ

‘ಮಾಂಜಾ’ ನಿಷೇಧ

ಹಕ್ಕಿಯ ಯಾತನೆಗೆ ಮಿಡಿದ ಹೃದಯಗಳು

Post Comments (+)