ಗುರುವಾರ , ನವೆಂಬರ್ 14, 2019
18 °C
ಭಾರತ, ಜಪಾನ್‌ ಜೊತೆ ವಾಣಿಜ್ಯ ಒಪ್ಪಂದ ಕುದುರಿಸಲು ಅಮೆರಿಕ ಕ್ಷಿಪ್ರ ಹೆಜ್ಜೆ

‘ಹೌಡಿ ಮೋದಿ’ ಮತ್ತು ವಾಣಿಜ್ಯ ಉದ್ದೇಶ

Published:
Updated:
Prajavani

ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಮರ ಸುದೀರ್ಘ ಅವಧಿಯಿಂದ ಸಾಗಿದೆ. ಇದರ ನಡುವೆಯೇ ಅಮೆರಿಕದ ಡೊನಾಲ್ಡ್‌ ಟ್ರಂಪ್ ಆಡಳಿತವು ಭಾರತ ಮತ್ತು ಜಪಾನ್‌ ಜೊತೆ ಸೀಮಿತ ಪ್ರಮಾಣದ ವಾಣಿಜ್ಯ ಒಪ್ಪಂದಗಳ ಘೋಷಣೆ ವಿಚಾರದಲ್ಲಿ ವೇಗವಾಗಿ ಹೆಜ್ಜೆ ಹಾಕುತ್ತಿದೆ.

ಟ್ರಂಪ್ ಅವರು ವಾಣಿಜ್ಯ ವಹಿವಾಟುಗಳ ವಿಚಾರದಲ್ಲಿ ಇಟ್ಟಿರುವ ಹೆಜ್ಜೆಗಳ ಬಗ್ಗೆ ವ್ಯಕ್ತವಾಗಿರುವ ಕಳವಳಗಳಿಗೆ 2020ರ ಚುನಾವಣೆಗೂ ಮೊದಲೇ ಉತ್ತರ ನೀಡುವುದು ಈ ‘ಸಣ್ಣ ಒಪ್ಪಂದ’ಗಳ ಉದ್ದೇಶ. ಹಾಗೆಯೇ, ದ್ವಿಪಕ್ಷೀಯ ವ್ಯಾಪಾರ ಒಪ್ಪಂದಗಳು ಅಮೆರಿಕದ ಪರವಾಗಿ ಇರುವಂತೆ ನೋಡಿಕೊಳ್ಳುವುದಾಗಿ ಹಿಂದಿನ ಚುನಾವಣೆ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸಲಾಗುತ್ತಿದೆ ಎಂದು ಮತದಾರರಿಗೆ ಮನವರಿಕೆ ಮಾಡಿಕೊಡುವ ಉದ್ದೇಶ ಕೂಡ ಇದರ ಹಿಂದೆ ಇದೆ. ಚೀನಾದ ಜೊತೆಗಿನ ವಾಣಿಜ್ಯ ಸಮರದ ಪರಿಣಾಮವಾಗಿ, ಅಮೆರಿಕದ ರೈತರಿಗೆ ಚೀನಾದ ಮಾರುಕಟ್ಟೆ ಪ್ರವೇಶಿಸುವುದು ಕಷ್ಟವಾಗುತ್ತಿದೆ. ಹಾಗಾಗಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶದ ರೈತರನ್ನು ಸಮಾಧಾನಪಡಿಸುವ ಉದ್ದೇಶ ಕೂಡ ಟ್ರಂಪ್ ಅವರಿಗೆ ಇದೆ.

ಮುಂದಿನ ದಿನಗಳಲ್ಲಿ ಯಾವುದೇ ಬಗೆಯ ಒಪ್ಪಂದದ ಘೋಷಣೆ ಹೊರಬೀಳಬಹುದು. ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಅಮೆರಿಕದ ಹ್ಯೂಸ್ಟನ್‌ನಲ್ಲಿ ಭಾನುವಾರ ಕಾರ್ಯಕ್ರಮವೊಂದರಲ್ಲಿ (ಹೌಡಿ ಮೋದಿ) ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ, ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಜೊ ಅಬೆ ಅವರ ಜೊತೆ ಮುಂದಿನ ವಾರ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟ್ರಂಪ್ ಅವರ ಸಲಹೆಗಾರರು ಸಿದ್ಧಪಡಿಸುತ್ತಿರುವ ಒಪ್ಪಂದದ ಕರಡುಗಳು ಕೆಲವೇ ಕೆಲವು ವಸ್ತುಗಳು ಹಾಗೂ ಕ್ಷೇತ್ರಗಳಿಗೆ ಸೀಮಿತ ಆಗಿರುವ ಸಾಧ್ಯತೆ ಇದೆ. ವಿವಾದಿತ ವಿಷಯಗಳನ್ನು ಬದಿಗಿರಿಸಿ, ಪ್ರಮುಖ ಕ್ಷೇತ್ರಗಳ ಮೇಲೆ ರೈತರ ಹಿತಾಸಕ್ತಿ ಕಾಯುವಂಥವು 

ಟ್ರಾನ್ಸ್‌–ಪೆಸಿಫಿಕ್‌ ಪಾಲುದಾರಿಕೆ ಒಪ್ಪಂದ ಇದ್ದಿದ್ದರೆ ಯಾವೆಲ್ಲ ಪ್ರಯೋಜನಗಳು ಸಿಗುತ್ತಿದ್ದವೋ ಅಂಥವೇ ಪ್ರಯೋಜನಗಳು ಈಗ ಅಮೆರಿಕದ ಕೃಷಿ ಉತ್ಪನ್ನಗಳಿಗೆ ಸಿಗುವಂತಾಗಬೇಕು ಎನ್ನುವ ಒಪ್ಪಂದವನ್ನು ಜಪಾನ್ ಜೊತೆ ಮಾಡಿಕೊಳ್ಳಲು ಟ್ರಂಪ್ ಆಡಳಿತ ಯತ್ನಿಸುತ್ತಿದೆ. ಟ್ರಂಪ್ ಅವರು ತಾವು ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಟ್ರಾನ್ಸ್‌–ಪೆಸಿಫಿಕ್ ಒಪ್ಪಂದದಿಂದ ಅಮೆರಿಕ ಹಿಂದಕ್ಕೆ ಸರಿಯಲಿದೆ ಎಂದು ಘೋಷಿಸಿದ್ದರು. ಅಮೆರಿಕದ ರೈತರಿಗೆ ಹಂದಿಮಾಂಸದಂತಹ ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚಿನ ಅವಕಾಶ ನೀಡಬೇಕು, ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲಿನ ಸುಂಕ ಕಡಿಮೆ ಮಾಡಬೇಕು ಎಂದು ಟ್ರಂಪ್ ಆಡಳಿತವು ಭಾರತದ ಮೇಲೆ ಒತ್ತಡ ಹೇರುತ್ತಿದೆ.

ದಕ್ಷಿಣ ಕೊರಿಯಾ ಜೊತೆಗಿನ ವ್ಯಾಪಾರ ಒಪ್ಪಂದದಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡಿರುವ ಅಮೆರಿಕವು ಆ ದೇಶಕ್ಕೆ ಆಟೊಮೊಬೈಲ್‌ ಉತ್ಪನ್ನಗಳನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುವುದನ್ನು ಸಾಧ್ಯವಾಗಿಸಿಕೊಂಡಿದೆ. ಚೀನಾ ಜೊತೆಗೆ ಟ್ರಂಪ್ ನಡೆಸುತ್ತಿರುವ ವಾಣಿಜ್ಯ ಸಮರವು ಆಗಾಗ ಉಲ್ಬಣಗೊಳ್ಳುತ್ತ ಇರುತ್ತದೆ. ಈ ವಿಚಾರದಲ್ಲಿ ಒಪ್ಪಂದ ಸಾಧ್ಯವಾಗಬೇಕು ಎಂದಾದರೆ ಬಹಳಷ್ಟು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಬೇಕು. ಚೀನಾದ ಹಲವು ವಸ್ತುಗಳ ಮೇಲೆ ಸುಂಕ ವಿಧಿಸಿರುವ ಟ್ರಂಪ್ ಅವರು, ಈ ವರ್ಷಾಂತ್ಯದ ವೇಳೆಗೆ ಚೀನಾದಿಂದ ಆಮದಾಗುವ ಎಲ್ಲವುಗಳ ಮೇಲೆಯೂ ಸುಂಕ ವಿಧಿಸುವ ಆಲೋಚನೆ ಹೊಂದಿದ್ದಾರೆ.

ಟ್ರಂಪ್ ಅವರು ವಿಧಿಸಿರುವ ಸುಂಕಗಳ ಪರಿಣಾಮವಾಗಿ ಮಾತುಕತೆಯ ಅಂಗಳಕ್ಕೆ ಚೀನಾ ಬಂದಿದೆ. ಆದರೆ, ಹಲವು ವಿಚಾರಗಳಲ್ಲಿ ಎರಡೂ ದೇಶಗಳ ನಡುವೆ ಭಿನ್ನಾಭಿಪ್ರಾಯ ಇದೆ. ‘ಬಹುಶಃ, ಆದಷ್ಟು ಬೇಗ ಒಂದು ಒಪ್ಪಂದ ಸಾಧ್ಯವಾಗಲಿದೆ ಎಂದು ನಾನು ಭಾವಿಸಿದ್ದೇನೆ. ಒಪ್ಪಂದವು ಚುನಾವಣೆಗೂ ಮೊದಲೇ ಆಗಬಹುದು ಅಥವಾ ಚುನಾವಣೆಯ ನಂತರ ಆಗಬಹುದು’ ಎಂದು ಟ್ರಂಪ್ ಅವರು ಸುದ್ದಿಗಾರರ ಬಳಿ ಈಚೆಗೆ ಹೇಳಿದ್ದಾರೆ.

ಟ್ರಂಪ್ ಅವರು ಚೀನಾ ಮತ್ತು ಇತರ ಕೆಲವು ದೇಶಗಳ ಜೊತೆ ವಾಣಿಜ್ಯ ಸಮರ ನಡೆಸಿರುವ ಹೊತ್ತಿನಲ್ಲೇ, ಜಪಾನ್, ಕೆನಡಾ, ಆಸ್ಟ್ರೇಲಿಯಾದಂತಹ ದೇಶಗಳು ಹಾಗೂ ಐರೋಪ್ಯ ಒಕ್ಕೂಟವು ಅಮೆರಿಕವನ್ನು ಹೊರಗಿಟ್ಟು ಮುಕ್ತ ವ್ಯಾಪಾರ ಒಪ್ಪಂದದ ವಿಚಾರವಾಗಿ ಮುನ್ನಡೆದಿವೆ. ಇದರಿಂದಾಗಿ ಅಮೆರಿಕದ ಕಂಪನಿಗಳು ಹಿನ್ನಡೆ ಅನುಭವಿಸಬೇಕಾಗಿದೆ. ಟ್ರಾನ್ಸ್‌–ಪೆಸಿಫಿಕ್ ಒಪ್ಪಂದದ ಪರಿಣಾಮವಾಗಿ ದನದ ಮಾಂಸ ಮತ್ತು ಹಾಲಿನ ಉತ್ಪನ್ನಗಳು ಸೇರಿದಂತೆ ಹಲವಾರು ಕೃಷಿ ಉತ್ಪನ್ನಗಳಿಗೆ ಜಪಾನ್‌ನಲ್ಲಿ ಸುಂಕ ಕಡಿಮೆ ಆಯಿತು. ಟ್ರಂಪ್ ಅವರು ಈ ಒಪ್ಪಂದದಿಂದ ಹಿಂದೆ ಸರಿದ ನಂತರ, ಜಪಾನ್ ದೇಶವು ಇತರ ಹತ್ತು ಸದಸ್ಯರ ಜೊತೆ ಈ ಒಪ್ಪಂದಕ್ಕೆ ಅನುಮೋದನೆ ನೀಡಿದೆ. ಇದರಿಂದಾಗಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಕೆನಡಾ ಮತ್ತು ಮೆಕ್ಸಿಕೊ ದೇಶಗಳ ಉತ್ಪನ್ನಗಳಿಗೆ ಜಪಾನ್‌ ಮಾರುಕಟ್ಟೆಗೆ ಅಮೆರಿಕದ ಉತ್ಪನ್ನಗಳಿಗಿಂತ ಚೆನ್ನಾಗಿ ಪ್ರವೇಶ ಸಿಗುತ್ತಿದೆ.

ಟ್ರಂಪ್ ಅವರು ಜಪಾನ್‌ ಜೊತೆಗೆ ಮಾಡಿಕೊಂಡಿರುವ ಒಪ್ಪಂದದ ವಿವರಗಳು ಬಹಿರಂಗವಾಗಿಲ್ಲ. ಆದರೆ, ದನದ ಮಾಂಸ, ಹಂದಿ ಮಾಂಸ, ಗೋಧಿ ಮತ್ತು ವೈನ್‌ಗೆ ಹೆಚ್ಚಿನ ಮಾರುಕಟ್ಟೆ ಅವಕಾಶ ಸಿಗುವಂತೆ ಅಮೆರಿಕ ನೋಡಿಕೊಂಡಿದೆ. ಇದಕ್ಕೆ ಪ್ರತಿಯಾಗಿ, ಜಪಾನಿನ ಯಂತ್ರೋಪಕರಣಗಳು ಸೇರಿದಂತೆ ಕೆಲವು ಕೈಗಾರಿಕಾ ಉತ್ಪನ್ನಗಳ ಮೇಲಿನ ಸುಂಕವನ್ನು ಅಮೆರಿಕ ಕಡಿಮೆ ಮಾಡಲಿದೆ. ‘ಅಮೆರಿಕವು ಜಪಾನ್ ವಿಚಾರದಲ್ಲಿ ಮಹತ್ವದ ಬೆಳವಣಿಗೆಯನ್ನು ಕಾಣುವ ಹಂತದಲ್ಲಿದೆ’ ಎಂದು ಟ್ರಂಪ್ ಅವರ ಮುಖ್ಯ ಆರ್ಥಿಕ ಸಲಹೆಗಾರರಲ್ಲಿ ಒಬ್ಬರಾದ ಲ್ಯಾರಿ ಕುಡ್ಲೊವ್ ಅವರು ಜಪಾನ್ ಮತ್ತು ಅಮೆರಿಕದ ವಾಣಿಜ್ಯೋದ್ಯಮಿಗಳ ಬಳಿ ಹೇಳಿದ್ದಾರೆ.

ಜಪಾನ್ ಜೊತೆಗಿನ ಒಪ್ಪಂದವು ಡಿಜಿಟಲ್ ವಾಣಿಜ್ಯ ವ್ಯವಹಾರ ಹಾಗೂ ಇ–ಕಾಮರ್ಸ್‌ ವಿಚಾರದಲ್ಲಿ ಕೂಡ ಮುಂದಡಿ ಇರಿಸಲಿದೆ ಎಂದು ಕುಡ್ಲೊವ್ ಹೇಳಿದ್ದಾರೆ. ಟ್ರಾನ್ಸ್–ಪೆಸಿಫಿಕ್ ಒಪ್ಪಂದವು ‘ನಮ್ಮ ದೇಶದ ಮೇಲೆ ನಡೆದ ಅತ್ಯಾಚಾರ’ ಎಂದು ಟ್ರಂಪ್ ಹೇಳಿದ್ದರು. ಆದರೆ, ಈಗ ಜಪಾನ್ ಜೊತೆ ಸಾಧ್ಯವಾಗಿರುವ ಒಪ್ಪಂದದ ಮೂಲಕ, ಟ್ರಾನ್ಸ್‌–ಪೆಸಿಫಿಕ್‌ ಒಪ್ಪಂದದಿಂದ ಸಿಗಬಹುದಾಗಿದ್ದ ಲಾಭಗಳು ಸಿಗಲಿವೆ ಎಂದು ಪ್ರತಿಪಾದಿಸಲು ಅಮೆರಿಕದ ಆಡಳಿತ ಉತ್ಸಾಹದಿಂದ ನಿಂತಿದೆ.

ಭಾರತದ ಜೊತೆ ಸಾಧ್ಯವಾಗಬಹುದಾದ ವಾಣಿಜ್ಯ ಒಪ್ಪಂದದ ವ್ಯಾಪ್ತಿ ತೀರಾ ಸೀಮಿತವಾಗಿರುವಂತೆ ತೋರುತ್ತಿದೆ. ಭಾರತ ಮತ್ತು ಅಮೆರಿಕದ ಜೊತೆಗಿನ ವಾಣಿಜ್ಯ ಮಾತುಕತೆ ಮುರಿದುಬಿದ್ದ ತಿಂಗಳುಗಳ ನಂತರ, ಮೋದಿ ಅವರು ವಿಶ್ವಸಂಸ್ಥೆಯ ಸಭೆಗಳಲ್ಲಿ ಪಾಲ್ಗೊಳ್ಳಲು ಬರುವ ಮೊದಲು ಸಣ್ಣಮಟ್ಟಿಗಿನ ಒಪ್ಪಂದವನ್ನಾದರೂ ಸಾಧ್ಯವಾಗಿಸಿಕೊಳ್ಳಬೇಕು ಎಂದು ಎರಡೂ ದೇಶಗಳು ಪ್ರಯತ್ನಿಸುತ್ತಿವೆ.

ಅಮೆರಿಕದ ಕೆಲವು ಕೃಷಿ ಉತ್ಪನ್ನಗಳ ಮೇಲಿನ ನಿರ್ಬಂಧಗಳನ್ನು ತೆಗೆಯಲು, ಅಮೆರಿಕದ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲಿನ ಸುಂಕವನ್ನು ಗರಿಷ್ಠ ₹ 5000ಕ್ಕೆ ಮಿತಿಗೊಳಿಸಲು ಭಾರತ ಈ ಮೊದಲು ಒಪ್ಪಿದಂತೆ ಕಂಡುಬಂದಿತ್ತು. ಇದು ಸಾಧ್ಯವಾಗಿದ್ದರೆ ಆ್ಯಪಲ್‌ನಂತಹ ಅಮೆರಿಕದ ಕಂಪನಿಗಳಿಗೆ ಲಾಭವಾಗುತ್ತಿತ್ತು. ಇದಕ್ಕೆ ಪ್ರತಿಯಾಗಿ ಭಾರತವು ಅಮೆರಿಕದಿಂದ, ವಾಣಿಜ್ಯ ವ್ಯವಹಾರಗಳಲ್ಲಿ ಆದ್ಯತೆಯ  ಸ್ಥಾನಮಾನ (ಜಿಎಸ್‌ಪಿ) ಪುನಃ ಪಡೆದುಕೊಳ್ಳುವ ನಿರೀಕ್ಷೆಯಲ್ಲಿದೆ. ಈ ಸ್ಥಾನಮಾನ ಪುನಃ ದೊರೆತರೆ, ಭಾರತದ ಕೋಟ್ಯಂತರ ರೂಪಾಯಿ ಮೌಲ್ಯದ ಹಲವು ಬಗೆಯ ವಸ್ತುಗಳು ಅಮೆರಿಕವನ್ನು ಸುಂಕರಹಿತವಾಗಿ ಪ್ರವೇಶಿಸುವುದು ಸಾಧ್ಯವಾಗುತ್ತದೆ.

– ದಿ ನ್ಯೂಯಾರ್ಕ್‌ ಟೈಮ್ಸ್‌

ಪ್ರತಿಕ್ರಿಯಿಸಿ (+)