ವಾಟ್ಸ್‌ಆ್ಯಪ್‌ ಕರೆ ಮೂಲಕ ವಿಚಾರಣೆ ನಡೆಸಿದ ಕೆಳ ನ್ಯಾಯಾಲಯ: ಸುಪ್ರಿಂ ತರಾಟೆ

7

ವಾಟ್ಸ್‌ಆ್ಯಪ್‌ ಕರೆ ಮೂಲಕ ವಿಚಾರಣೆ ನಡೆಸಿದ ಕೆಳ ನ್ಯಾಯಾಲಯ: ಸುಪ್ರಿಂ ತರಾಟೆ

Published:
Updated:

ನವದೆಹಲಿ: ನ್ಯಾಯಾಧೀಶರು ವಾಟ್ಸ್‌ಆ್ಯಪ್‌ ಕರೆಯ ಮೂಲಕವೇ ಕ್ರಿಮಿನಲ್‌ ಪ್ರಕರಣದ ವಿಚಾರಣೆ ನಡೆಸಿದ ಬಗ್ಗೆ ಎಲ್ಲಾದರೂ ಕೇಳಿದ್ದೀರಾ?

ಇದೆಂಥ ವಿಚಿತ್ರ ಪ್ರಶ್ನೆ ಎಂದು ನೀವು ನಗುತ್ತಿರಬಹುದು. ಆದರೆ, ಜಾರ್ಖಂಡ್‌ನ ಹಜಾರಿಬಾಗ್‌ನ ನ್ಯಾಯಾಲಯ ಈ ರೀತಿಯ ವಿಚಾರಣೆ ನಡೆಸಿದ್ದು, ಆ ಪ್ರಕರಣವೀಗ ಸುಪ್ರೀಂ ಕೋರ್ಟ್‌ನಲ್ಲಿದೆ. ನ್ಯಾಯಾಲಯವೊಂದು ಇಂತಹ ‘ಹಾಸ್ಯ’ಕ್ಕೆ ಅವಕಾಶ ನೀಡಿದ್ದಾದರೂ ಹೇಗೆ ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.

2016ರಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಜಾರ್ಖಂಡ್‌ನ ಮಾಜಿ ಸಚಿವ ಯೋಗೇಂದ್ರ ಸಾಹೊ ಹಾಗೂ ಅವರ ಪತ್ನಿ ಶಾಸಕಿ ನಿರ್ಮಲಾ ದೇವಿ ಆರೋಪಿಗಳಾಗಿದ್ದಾರೆ. ಕಳೆದ ವರ್ಷ ಅವರಿಬ್ಬರಿಗೂ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿತ್ತು. ಆರೋಪಿಗಳು ಭೋಪಾಲ್‌ನಲ್ಲೇ ಇರಬೇಕು ಮತ್ತು ಕೋರ್ಟ್‌ ವಿಚಾರಣೆ ಪ್ರಕ್ರಿಯೆಗಳಿಗೆ ಮಾತ್ರ ಜಾರ್ಖಂಡ್‌ಗೆ ಹೋಗಬೇಕು ಎಂದು ಷರತ್ತು ವಿಧಿಸಿತ್ತು.

ಆರೋಪಿಗಳ ಆಕ್ಷೇಪದ ಹೊರತಾಗಿಯೂ ವಿಚಾರಣಾ ನ್ಯಾಯಾಧೀಶರು ಏಪ್ರಿಲ್ 19ರಂದು 'ವಾಟ್ಸ್‌ಆ್ಯಪ್ ಕಾಲ್‌' ಮೂಲಕ ಆರೋಪ ಪಟ್ಟಿ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ. 

ನ್ಯಾಯಮೂರ್ತಿ ಎಸ್‌.ಎ ಬೋಬ್ಡೆ ಮತ್ತು ಎಲ್‌.ಎನ್‌ ರಾವ್ ಅವರ ಪೀಠ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ‘ವಾಟ್ಸ್‌ಆ್ಯಪ್ ಮೂಲಕ ನ್ಯಾಯದ ವಿಚಾರಣೆ ಮಾಡುವ ಹಂತಕ್ಕೆ ಬಂದಿದ್ದಾರೆಯೇ? ಜಾರ್ಖಂಡ್‌ನಲ್ಲಿ ಏನು ನಡೆಯುತ್ತಿದೆ. ನ್ಯಾಯಾಲಯಕ್ಕೆ ಅಗೌರವ ತೋರುವ ನಡೆಯನ್ನು ಒಪ್ಪಲಾಗದು. ಇದೇನು ತಮಾಷೆಯೇ?’ ಎಂದು ಜಾರ್ಖಂಡ್‌ ಪರ ವಕೀಲರನ್ನು ಪೀಠ ತರಾಟೆಗೆ ತೆಗೆದುಕೊಂಡಿತು. 

ಆರೋಪಿಗಳ ಕೋರಿಕೆ ಮೇರೆಗೆ ಜಾರ್ಖಂಡ್‌ ಸರ್ಕಾರಕ್ಕೆ ಪೀಠ ನೋಟಿಸ್‌ ಜಾರಿ ಮಾಡಿದ್ದು, ಪ್ರಕರಣವನ್ನು ಹಜಾರಿಬಾಗ್‌ ನ್ಯಾಯಾಲಯದಿಂದ ದೆಹಲಿ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿ ಎಂದು ಆರೋಪಿಗಳು ಸಲ್ಲಿಸಿದ್ದ ಮನವಿ ಯಾವ ಹಂತದಲ್ಲಿದೆ ಎನ್ನುವ ಬಗ್ಗೆ ಎರಡು ವಾರದೊಳಗೆ ಪ್ರತಿಕ್ರಿಯಿಸಬೇಕು ಎಂದು ಆದೇಶಿಸಿದೆ.

ಜಾರ್ಖಂಡ್‌ ಸರ್ಕಾರದ ಕೋರಿಕೆ ಮೇರೆಗೆ ಆರೋಪಿಗಳಿಗೆ ಪೀಠ ನೋಟೀಸ್ ಜಾರಿ ಮಾಡಿದೆ. ತಮ್ಮ ಪ್ರಕರಣಗಳನ್ನು ಹಜಾರಿಬಾಗ್‌ನಿಂದ ದಿಲ್ಲಿಗೆ ವರ್ಗಾಯಿಸಬೇಕೆಂದು ಕೋರಿ ಆರೋಪಿಗಳು ಅರ್ಜಿ ಸಲ್ಲಿಸಿದ್ದರು. ಎರಡು ವಾರದೊಳಗೆ ನೋಟೀಸ್‌ಗೆ ಉತ್ತರಿಸುವಂತೆ ಕೋರ್ಟ್‌ ಸೂಚಿಸಿದೆ. 

ಆರೋಪಿ ಸಾವೊ ಸುಪ್ರೀಂ ಕೋರ್ಟಿನ ಜಾಮೀನು ಷರತ್ತುಗಳನ್ನು ಉಲ್ಲಂಘಿಸುತ್ತಿದ್ದಾರೆ. ಹೆಚ್ಚಿನ ಸಮಯವೂ ಭೋಪಾಲ್‌ನಿಂದ ಹೊರಗೆ ಕಳೆಯುತ್ತಿದ್ದಾರೆ. ಇದರಿಂದ ವಿಚಾರಣೆ ವಿಳಂಬವಾಗುತ್ತಿದೆ ಎಂದು ಜಾರ್ಖಂಡ್‌ ಪರ ವಕೀಲರು ತಿಳಿಸಿದರು. 

'ಅದು ಬೇರೆ ವಿಚಾರ. ಆರೋಪಿಗಳು ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿದ್ದರೆ, ಜಾಮೀನು ರದ್ದುಪಡಿಸುವಂತೆ ಪ್ರತ್ಯೇಕ ಅರ್ಜಿ ಸಲ್ಲಿಸಿ. ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿದವರ ಪರ ನಮಗೆ ಯಾವುದೇ ಅನುಕಂಪವಿಲ್ಲ' ಎಂದು ಪೀಠ ಸ್ಪಷ್ಟಪಡಿಸಿತು. 

ವಾಟ್ಸ್‌ಆ್ಯಪ್‌ ಕರೆ ಮಾಡಿದ್ದು ಯಾಕೆ?

‘ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ 2017ರ ಡಿಸೆಂಬರ್‌ 15ರಂದು ಆರೋಪಿಗಳಿಗೆ ಜಾಮೀನು ನೀಡಿತ್ತು. ಭೋಪಾಲ್‌ ಬಿಟ್ಟು ಹೋಗದಂತೆ ಷರತ್ತು ವಿಧಿಸಿದ್ದರಿಂದ, ಹಜಾರಿಬಾಗ್‌ ನ್ಯಾಯಾಲಯದಿಂದ ಭೋಪಾಲ್‌ ಜಿಲ್ಲಾ ನ್ಯಾಯಾಲಯಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಈ ಪ್ರಕರಣ ವಿಚಾರಣೆ ನಡೆಸುವಂತೆ ಕೋರ್ಟ್‌ ನಿರ್ದೇಶನ ನೀಡಿತ್ತು. ಆದರೆ, ವಿಡಿಯೊ ಕಾನ್ಫರೆನ್ಸ್‌ಗೆ ನೆಟ್‌ವರ್ಕ್‌ ಸರಿಯಾಗಿ ಸಿಗುತ್ತಿರಲಿಲ್ಲವಾದ್ದರಿಂದ ವಿಚಾರಣಾ ನ್ಯಾಯಾಧೀಶರು ವಾಟ್ಸ್‌ಆ್ಯಪ್‌ ಮೂಲಕ ಕರೆ ಮಾಡಿದರು’ ಎಂದು ಆರೋಪಿಗಳ ಪರ ವಕೀಲ ವಿವೇಕ್‌ ತಂಖಾ ಕೋರ್ಟ್‌ಗೆ ವಿವರಿಸಿದರು.

‘ಆರೋಪಿ ಸಾಹೊ ವಿರುದ್ಧ 21 ಹಾಗೂ ನಿರ್ಮಲಾ ದೇವಿ ವಿರುದ್ಧ 9 ಪ್ರಕರಣಗಳು ಬಾಕಿ ಉಳಿದಿವೆ’ ಎಂದು ಅವರು ಕೋರ್ಟ್‌ಗೆ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !