ಅಕ್ರಮ ವಲಸಿಗರ ಹೊರದಬ್ಬುತ್ತೇವೆ: ಶಾ

ಶನಿವಾರ, ಏಪ್ರಿಲ್ 20, 2019
32 °C

ಅಕ್ರಮ ವಲಸಿಗರ ಹೊರದಬ್ಬುತ್ತೇವೆ: ಶಾ

Published:
Updated:

ದಾರ್ಜಲಿಂಗ್‌: ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶದಾದ್ಯಂತ ‘ರಾಷ್ಟ್ರೀಯ ಪೌರತ್ವ ನೋಂದಣಿ’ (ಎನ್‌ಆರ್‌ಸಿ) ನಡೆಸಲಾಗುವುದು. ದೇಶದೊಳಕ್ಕೆ ನುಸುಳಿರುವ ಪ್ರತಿಯೊಬ್ಬರನ್ನೂ ಹೊರಕ್ಕೆ ದಬ್ಬಲಾಗುವುದು ಎಂದು ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ರಾಯ್‌ಗಂಜ್‌ನಲ್ಲಿನ ಚುನಾವಣಾ ರ್‍ಯಾಲಿಯಲ್ಲಿ ಹೇಳಿದ್ದಾರೆ. 

ಪಶ್ಚಿಮ ಬಂಗಾಳದಲ್ಲಿರುವ ಬಂಗಾಳಿ ವಲಸಿಗರು ಚಿಂತಿಸಬೇಕಿಲ್ಲ ಎಂದೂ ಭರವಸೆ ಕೊಟ್ಟಿದ್ದಾರೆ. ಬೌದ್ಧರು, ಹಿಂದೂಗಳು ಮತ್ತು ಸಿಖ್ಖರನ್ನು ಬಿಟ್ಟು ಉಳಿದೆಲ್ಲ ವಲಸಿಗರನ್ನು ದೇಶದಿಂದ ಹೊರಗೆ ಹಾಕಲಾಗುವುದು ಎಂದು ಶಾ ಹೇಳಿದ್ದಾರೆ ಎಂದು ಬಿಜೆಪಿ ಬಳಿಕ ಟ್ವೀಟ್ ಮಾಡಿದೆ. 

ಎನ್‌ಆರ್‌ಸಿಗೆ ಸಂಬಂಧಿಸಿ ಬಂಗಾಳಿ ವಲಸಿಗರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದಾರಿ ತಪ್ಪಿಸುತ್ತಿದ್ದಾರೆ ಎಂದೂ ಶಾ ಆರೋಪಿಸಿದ್ದಾರೆ. 

‘ಬಂಗಾಳಿ ವಲಸಿಗರೆಲ್ಲ ದೇಶ ಬಿಡಬೇಕಾಗುತ್ತದೆ ಎಂದು ನಾವು ಎನ್‌ಆರ್‌ಸಿ ಬಗ್ಗೆ ಮಾತನಾಡಿದಾಗೆಲ್ಲ ಮಮತಾ ಹೇಳುತ್ತಾರೆ. ಪೌರತ್ವ (ತಿದ್ದುಪಡಿ) ಮಸೂದೆಯನ್ನು ನಾವು ತಂದಿದ್ದೇವೆ. ಭಾರತಕ್ಕೆ ವಲಸೆ ಬಂದಿರುವ ಪಾಕಿಸ್ತಾನ ಅಥವಾ ಬಾಂಗ್ಲಾದೇಶದ ಹಿಂದೂ, ಸಿಖ್‌, ಬೌದ್ಧ ಮತ್ತು ಜೈನ ನಿರಾಶ್ರಿತರು ಹೆದರಬೇಕಿಲ್ಲ. ಅವರನ್ನು ವಾಪಸ್‌ ಕಳುಹಿಸುವುದಿಲ್ಲ’ ಎಂದರು

ಮಮತಾ ಬ್ಯಾನರ್ಜಿ ಅವರು ಇದಕ್ಕೆ ತಿರುಗೇಟು ನೀಡಿದ್ದಾರೆ. ದಾರ್ಜಲಿಂಗ್‌ನ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದಲ್ಲಿ ಎನ್‌ಆರ್‌ಸಿಗೆ ಅವಕಾಶ ಕೊಡುವುದಿಲ್ಲ ಎಂದಿದ್ದಾರೆ. 

‘ಪಶ್ಚಿಮ ಬಂಗಾಳದಲ್ಲಿ ಎನ್‌ಆರ್‌ಸಿ ಮಾಡುತ್ತೇವೆ ಎಂದು ಅವರು (ಬಿಜೆಪಿ) ಹೇಳುತ್ತಿದ್ದಾರೆ. ಇಲ್ಲಿನ ಒಬ್ಬರನ್ನಾದರೂ ಅವರು ಮುಟ್ಟಿ ನೋಡಲಿ ಎಂಬುದು ನನ್ನ ಸವಾಲು. ಅವರಿಗೆ ಯಾರು ಬೇಕಿಲ್ಲವೋ ಅಂಥವರನ್ನು ಹೊರಗೆ ಹಾಕಲು ಬಯಸಿದ್ದಾರೆ ಎಂದರು.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !