ಐವರನ್ನು ಹೊಡೆದು ಕೊಂದ ಗ್ರಾಮಸ್ಥರು

7
ಮಕ್ಕಳ ಕಳ್ಳರೆಂಬ ಶಂಕೆ

ಐವರನ್ನು ಹೊಡೆದು ಕೊಂದ ಗ್ರಾಮಸ್ಥರು

Published:
Updated:

ಮುಂಬೈ: ಮಕ್ಕಳ ಕಳ್ಳರ ತಂಡದ ಸದಸ್ಯರೆಂಬ ಶಂಕೆಯಿಂದ ಐವರನ್ನು ಗ್ರಾಮಸ್ಥರು ಹೊಡೆದು ಕೊಂದು ಹಾಕಿರುವ ಘಟನೆ ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.

‘ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಬಂದಿದ್ದ ಈ ವ್ಯಕ್ತಿಗಳು, ರೈನ್‌ಪಾದ ಎಂಬ ಬುಡಕಟ್ಟು ಹಾಡಿಯಲ್ಲಿ ಇಳಿದರು. ಅವರಲ್ಲಿ ಒಬ್ಬಾತ ಸ್ಥಳೀಯ ಬಾಲಕಿಯೊಂದಿಗೆ ಮಾತನಾಡಲು ಯತ್ನಿಸಿದ. ಆಗ, ಭಾನುವಾರದ ಸಂತೆಗೆ ಬಂದಿದ್ದ ಗ್ರಾಮಸ್ಥರು, ಅವರು ಮಕ್ಕಳನ್ನು ಅಪಹರಿಸಿಕೊಂಡು ಹೋಗಲು ಬಂದಿದ್ದಾರೆ ಎಂದು ತಿಳಿದು ಅವರ ಮೇಲೆರಗಿ ಕೊಂದು ಹಾಕಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಮಕ್ಕಳ ಕಳ್ಳರ ತಂಡ ಸಕ್ರಿಯವಾಗಿದೆ ಎಂಬ ವದಂತಿ ಹರಿದಾಡುತ್ತಿತ್ತು.

ಕಂಬಕ್ಕೆ ಕಟ್ಟಿ ಮಹಿಳೆಗೆ ಹಿಂಸೆ

ಗುವಾಹಟಿ : ಅಸ್ಸಾಂನ ಸೋನಿತ್‌ಪುರದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳನ್ನು ಗ್ರಾಮಸ್ಥರು ಮಕ್ಕಳ ಕಳ್ಳಿ ಎಂದು ಶಂಕಿಸಿ ಕಂಬಕ್ಕೆ ಕಟ್ಟಿ ಹಿಂಸಿಸಿದ್ದಾರೆ.

‘ಥೆಲಮಾರ ‍ಪೊಲೀಸ್‌ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಮಹಿಳೆ ಶುಕ್ರವಾರ ರಾತ್ರಿ ತಿರುಗಾಡುತ್ತಿದ್ದಳು. ಕೆಲವರು ಪ್ರಶ್ನಿಸಿದಾಗ ಆಕೆ 
ಸರಿಯಾಗಿ ಉತ್ತರ ನೀಡಲಿಲ್ಲ. ಇದರಿಂದ ಕೆರಳಿದ ಗ್ರಾಮಸ್ಥರು ಆಕೆಯ ಮೇಲೆ ಹಲ್ಲೆ ನಡೆಸಿದರು.

ಇದನ್ನು ಕಂಡ ಕೆಲವು ಸ್ಥಳೀಯರು ಮತ್ತು ಗ್ರಾಮ ರಕ್ಷಣಾ ಪಕ್ಷದ (ವಿಡಿಪಿ) ಸದಸ್ಯರು ತಡೆಯಲು ಯತ್ನಿಸಿದರಲ್ಲದೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಹಿಳೆಯನ್ನು ರಕ್ಷಿಸಿದರು’ ಎಂದು ಸೋನಿತ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಪ್ರತಾಪ್‌ ಸಿಂಗ್ ತಿಳಿಸಿದ್ದಾರೆ.

‘ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಕೆಲವರು ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಮೂವರು ವ್ಯಕ್ತಿಗಳನ್ನು ಗುರುತಿಸಿದ್ದು, ಎಲ್ಲರ ವಿರುದ್ಧ ಕ್ರಮ ಜರುಗಿಸಲಾಗುವುದು. ಮಹಿಳೆಯನ್ನು ರಕ್ಷಿಸಲು ಯತ್ನಿಸಿದವರಿಗೆ ಬಹುಮಾನ ನೀಡಲಾಗುವುದು. ಹೀಗೆ ಧೈರ್ಯ ತೋರಿದವರನ್ನು ಗುರುತಿಸಿದರೆ ಮುಂದೆ ಇಂತಹ ಘಟನೆಗಳಾಗುವುದನ್ನು ತಪ್ಪಿಸಬಹುದು’ ಎಂದು ಹೇಳಿದ್ದಾರೆ.

ಇಬ್ಬರ ಮೇಲೆ ಹಲ್ಲೆ

ಚೆನ್ನೈ : ಮಗುವೊಂದನ್ನು ಅಪಹರಿಸಲು ಯತ್ನಿಸುತ್ತಿದ್ದಾರೆ ಎಂಬ ಶಂಕೆಯಿಂದ ತೇನಂಪೇಟ್‌ ಎಂಬಲ್ಲಿ ಇಬ್ಬರು ವಲಸೆ ಕಾರ್ಮಿಕರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ.

ಈ ಕಾರ್ಮಿಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ತಾಯಿಯು ಕಾರ್ಮಿಕರು ಮೊದಲು ವಾಸವಿದ್ದ ಮನೆಯ ಮಾಲೀಕರಾಗಿದ್ದು, ಶನಿವಾರ ರಾತ್ರಿ ಸಮೀಪದ ಅಂಗಡಿಗೆ ತೆರಳಿದ್ದರು. ಆ ವೇಳೆ ಕಾರ್ಮಿಕರು ಮಗುವಿನ ಬೆನ್ನುತಟ್ಟಿ ಮಾತನಾಡಿಸುತ್ತಿದ್ದರು. ಇದನ್ನು ಸ್ಥಳೀಯರು ಗಮನಿಸಿ ಪ್ರಶ್ನಿಸಿದ್ದರು. ಅಸ್ಪಷ್ಟ ಉತ್ತರ ಬಂದಾಗ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !