ಮಂಗಳವಾರ, ನವೆಂಬರ್ 12, 2019
28 °C
ಸಹಜ ಸ್ಥಿತಿಗೆ ಬರಲು ಕ್ರಮ ಕೈಗೊಳ್ಳಿ: ‘ಸುಪ್ರೀಂ’ ಸೂಚನೆ

ಕಾಶ್ಮೀರ ಸ್ಥಿತಿ ಭಯಾನಕ

Published:
Updated:
Prajavani

ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಪ‍ರಿಸ್ಥಿತಿ ಭಯಾನಕವಾಗಿದೆ ಎಂಬುದು ನಿಜ. ಆದರೆ, ಅಲ್ಲಿ ನಿರ್ಬಂಧಗಳನ್ನು ಹೇರುವುದಕ್ಕೆ ಕಾರಣಗಳೂ ಇವೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಅಭಿಪ್ರಾಯಪಟ್ಟಿದೆ.

ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸಹಜ ಸ್ಥಿತಿ ಮರಳುವಂತೆ ಎಲ್ಲ ಪ್ರಯತ್ನ ನಡೆಸಬೇಕು ಎಂದು ಮುಖ್ಯ ನ್ಯಾಯ ಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ಕೇಂದ್ರಕ್ಕೆ ಸೂಚಿಸಿದೆ. ಆದರೆ, ಈ ಪ್ರಯತ್ನವು ರಾಷ್ಟ್ರೀಯ ಹಿತಾಸಕ್ತಿ ಮತ್ತು ಆಂತರಿಕ ಭದ್ರತೆಯನ್ನು ಗಮನದಲ್ಲಿ ಇರಿಸಿಕೊಂಡಿರಬೇಕು ಎಂದು ಹೇಳಿದೆ.ಜನಜೀವನ ಸಹಜ ಸ್ಥಿತಿಗೆ ಮರಳಲು, ಆರೋಗ್ಯ ಸೇವೆ ದೊರೆಯಲು, ಸಾರ್ವಜನಿಕ ಸಾರಿಗೆ ಮರುಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚಿಸಿದೆ.

ಸಹಜಸ್ಥಿತಿ ಸ್ಥಾಪಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು ಪೀಠಕ್ಕೆ ವಿವರಣೆ ನೀಡಿದರು. ಈ ಕ್ರಮಗಳು ಯಾವುವು ಎಂಬ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಪೀಠವು ಅವರಿಗೆ ಸೂಚಿಸಿತು.

‘ಪರಿಸ್ಥಿತಿ ಈಗಲೂ ಹಾಗೆಯೇ ಇದೆಯೇ? ಇದು ಸ್ಥಳೀಯ ವಿಚಾರವಾಗಿದ್ದರೆ ಹೈಕೋರ್ಟ್‌ನಲ್ಲಿಯೇ ವಿಚಾರಣೆಗೆ ಒಳಪಡಿಸಬಹುದು. ಮೊಬೈಲ್‌ ಮತ್ತು ಇಂಟರ್‌ನೆಟ್‌ ಸ್ಥಗಿತದ ವಿಚಾರದಲ್ಲಿ ಸ್ಥಳೀಯವಾಗಿ ಏನಾಗುತ್ತಿದೆ ಎಂಬುದನ್ನು ತಿಳಿಯುವುದು ಹೈಕೋರ್ಟ್‌ಗೆ ಸುಲಭ’ ಎಂದು ಪೀಠವು ಅಭಿಪ್ರಾಯಪಟ್ಟಿತು.

ಕಾಶ್ಮೀರದಲ್ಲಿ ಮೊಬೈಲ್‌, ಇಂಟರ್‌ನೆಟ್‌ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯೇ ಇಲ್ಲ ಎಂದು ‘ಕಾಶ್ಮೀರ್‌ ಟೈಮ್ಸ್‌’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕಿ ಅನುರಾಧಾ ಭಾಷಿನ್‌ ಅವರ ವಕೀಲೆ ವೃಂದಾ ಗ್ರೋವರ್ ಹೇಳಿದರು. ಪತ್ರಕರ್ತರ ಮೇಲೆ ಹೇರಿರುವ ನಿರ್ಬಂಧ ಸಡಿಲಿಸಬೇಕು ಎಂದೂ ಅವರು ಕೋರಿದರು.  ಆದರೆ, ಇದು ನಿಜವಲ್ಲ ಎಂದು ವೇಣುಗೋಪಾಲ್‌ ಹೇಳಿದರು. ಕಾಶ್ಮೀರದ ಪತ್ರಿಕೆಗಳು ಪ್ರಕಟವಾಗುತ್ತಿವೆ. ಅವರಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠವು, ‘ಇದು ಒಂದೆರಡು ಪತ್ರಿಕೆಗಳ ಪ್ರಕಟಣೆಗೆ ಸಂಬಂಧಿಸಿದ ವಿಚಾರ ಅಲ್ಲ. ಸಂವಹನ ವ್ಯವಸ್ಥೆ ಸ್ಥಗಿತವಾಗಿದೆ. ಈ ಪರಿಸ್ಥಿತಿಯನ್ನು ನಿರ್ಮಿಸಿದವರು ಯಾರು ಮತ್ತು ಯಾಕೆ ಎಂಬುದನ್ನು ನಾವು ತಿಳಿಯಲು ಬಯಸುತ್ತೇವೆ. ನೀವು ಅಲ್ಲಿ ಎಲ್ಲ ಸೇವೆಗಳನ್ನು ಮರುಸ್ಥಾಪಿಸಬೇಕು. ಎಲ್ಲ ಸಮಸ್ಯೆಗಳನ್ನೂ ನಾವು ಪರಿಹರಿಸಲು ಆಗದು’ ಎಂದು ಪೀಠವು ಹೇಳಿತು.

ಪರಿಶೀಲನೆಗೆ ಕಾಶ್ಮೀರಕ್ಕೆ ಹೋಗಲು ಸಿಜೆಐ ಸಿದ್ಧ

ಸಮಸ್ಯೆ ಹೇಳಿಕೊಳ್ಳಲು ಜಮ್ಮು–ಕಾಶ್ಮೀರ ಹೈಕೋರ್ಟ್‌ಗೆ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತರಿಬ್ಬರ ಪರ ವಕೀಲರಾದ ಹುಸೇಫಾ ಅಹ್ಮದಿ ದೂರಿದರು.

ಇದು ಬಹಳ ಗಂಭೀರವಾದ ಆರೋಪ ಎಂದು ಪೀಠ ಹೇಳಿತು. ಈ ವಿಚಾರದಲ್ಲಿ ವರದಿ ಸಲ್ಲಿಸುವಂತೆ ಅಲ್ಲಿನ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಸೂಚಿಸಿತು. ಅಗತ್ಯ ಬಿದ್ದರೆ ತಾವೇ ಅಲ್ಲಿಗೆ ಹೋಗುವುದಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ (ಸಿಜೆಐ) ರಂಜನ್‌ ಗೊಗೊಯಿ ಹೇಳಿದರು.

‘ಹೈಕೋರ್ಟ್‌ಗೆ ಹೋಗಲು ಜನರಿಗೆ ಯಾಕೆ ಕಷ್ಟವಾಗುತ್ತಿದೆ ಎಂಬುದನ್ನು ತಿಳಿಸಿ. ಯಾರಾದರೂ ಜನರನ್ನು ತಡೆಯುತ್ತಿದ್ದಾರೆಯೇ? ಇದು ಬಹಳ ಗಂಭೀರ ವಿಚಾರ’ ಎಂದು ಪೀಠವು ಹೇಳಿತು.

ಒಂದು ವೇಳೆ ಈ ಆರೋಪವು ಸುಳ್ಳು ಎಂದಾದರೆ ಅರ್ಜಿದಾರರು ಅದರ ಪರಿಣಾಮ ಎದುರಿಸಲು ಸಿದ್ಧರಿರಬೇಕು ಎಂಬ ಎಚ್ಚರಿಕೆಯನ್ನೂ ಪೀಠವು ನೀಡಿದೆ.

***

lಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಜಮ್ಮು–ಕಾಶ್ಮೀರದ ಪರಿಸ್ಥಿತಿ ವಿವರಿಸಿದ ರಾಜ್ಯಪಾಲ ಸತ್ಯಪಾಲ ಮಲಿಕ್‌

lಸಿಪಿಎಂ ಮುಖಂಡ ಮೊಹಮ್ಮದ್‌ ಯೂಸುಫ್‌ ತಾರಿಗಾಮಿ ಅವರು ಕಾಶ್ಮೀರಕ್ಕೆ ಹಿಂದಿರುಗಲು ಸುಪ್ರೀಂ ಕೋರ್ಟ್‌ ಸಮ್ಮತಿ

lಅನಾರೋಗ್ಯ‍ಪೀಡಿತರಾಗಿದ್ದ ಅವರನ್ನು ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರು ಒಪ್ಪಿದರೆ ತಾರಿಗಾಮಿ ಹಿಂದಿರುಗಲು ಸ್ವತಂತ್ರರು ಎಂದ ಕೋರ್ಟ್‌

***

ಫಾರೂಕ್‌ ವಿರುದ್ಧ ಕಠಿಣ ಕಾಯ್ದೆ

ಶ್ರೀನಗರ: ನ್ಯಾಷನಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಮತ್ತು ಸಂಸದ ಫಾರೂಕ್‌ ಅಬ್ದುಲ್ಲಾ (81) ಅವರ ವಿರುದ್ಧ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ ಆರೋಪ ಹೊರಿಸಲಾಗಿದೆ. ಅವರ ವಿರುದ್ಧ ಸಾರ್ವಜನಿಕ ಸುರಕ್ಷತೆ ಕಾಯ್ದೆ (ಪಿಎಸ್‌ಎ) ಹೇರಲಾಗಿದೆ. ಈ ಕಾಯ್ದೆಯ ಅಡಿಯಲ್ಲಿ ಭಾನುವಾರ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರನ್ನು ‘ಅಕ್ರಮವಾಗಿ ಬಂಧನದಲ್ಲಿ ಇಡಲಾಗಿದೆ’ ಎಂಬ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ವಿಚಾರಣೆಗೆ ಬಂತು. ಅದಕ್ಕೂ ಮೊದಲೇ ಅವರ ವಿರುದ್ಧ ಕಠಿಣ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಕಾಯ್ದೆಯ ಅಡಿಯಲ್ಲಿ ಬಂಧಿಸಿದರೆ 2 ವರ್ಷ ಯಾವುದೇ ವಿಚಾರಣೆ ನಡೆಸದೆ ಸೆರೆಯಲ್ಲಿ ಇರಿಸುವುದಕ್ಕೆ ಅವಕಾಶ ಇದೆ.

ಆಜಾದ್‌ಗೆ ಕಾಶ್ಮೀರ ಭೇಟಿಗೆ ಅನುಮತಿ

ಕಾಂಗ್ರೆಸ್‌ ಮುಖಂಡ ಗುಲಾಂ ನಬಿ ಆಜಾದ್‌ ಅವರು ಕಾಶ್ಮೀರಕ್ಕೆ ಭೇಟಿ ಕೊಡಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ. ಶ್ರೀನಗರ, ಜಮ್ಮು, ಬಾರಾಮುಲ್ಲಾ ಮತ್ತು ಅನಂತನಾಗ್‌ ಜಿಲ್ಲೆಗಳಿಗೆ ಭೇಟಿ ಕೊಡಬಹುದು ಎಂದು ಅವರಿಗೆ ಕೋರ್ಟ್‌ ತಿಳಿಸಿದೆ. ಅವರು ಅಲ್ಲಿ ಜನರನ್ನು ಭೇಟಿಯಾಗಬಹುದು. ಆದರೆ ರಾಜಕೀಯ ಸಭೆ ನಡೆಸುವಂತಿಲ್ಲ ಎಂಬ ಷರತ್ತನ್ನು ವಿಧಿಸಲಾಗಿದೆ.

ಆಜಾದ್‌ ಅವರು ಕಾಶ್ಮೀರಕ್ಕೆ ಹೋಗಲು ಹಿಂದೆ ಪ್ರಯತ್ನಿಸಿದ್ದರು. ಅವರನ್ನು ಶ್ರೀನಗರ ವಿಮಾನ ನಿಲ್ದಾಣದಿಂದಲೇ ಹಿಂದಕ್ಕೆ ಕಳುಹಿಸಲಾಗಿತ್ತು. ಹಾಗಾಗಿ, ಮಾನವೀಯ ನೆಲೆಯಲ್ಲಿ ಕಾಶ್ಮೀರಕ್ಕೆ ಹೋಗಲು ಅನುಮತಿ ಕೋರಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಪ್ರತಿಕ್ರಿಯಿಸಿ (+)