ಬನ್ನಿ ನಿಮ್ಮ ಭ್ರಷ್ಟಾಚಾರದ ಬಗ್ಗೆ ಮಾತಾಡೋಣ: ಮೋದಿಗೆ ಚರ್ಚೆಗೆ ಕರೆದ ರಾಹುಲ್‌

ಬುಧವಾರ, ಏಪ್ರಿಲ್ 24, 2019
28 °C

ಬನ್ನಿ ನಿಮ್ಮ ಭ್ರಷ್ಟಾಚಾರದ ಬಗ್ಗೆ ಮಾತಾಡೋಣ: ಮೋದಿಗೆ ಚರ್ಚೆಗೆ ಕರೆದ ರಾಹುಲ್‌

Published:
Updated:

ನವದೆಹಲಿ: ‘ಚರ್ಚೆಗೆ ಬರಲು ಹೆದರುತ್ತಿರಬೇಕು’ ಎಂದು ನರೇಂದ್ರ ಮೋದಿ ಅವರ ಕಾಲೆಳೆದಿರುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ, ‘ತೆರೆದ ಪುಸ್ತಕ’ ಸವಾಲು ನೀಡಿ, ಚರ್ಚೆಗೆ ಬನ್ನಿ ಎಂದು ಆಹ್ವಾನಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ #Scared2Debate ಎನ್ನುವ ಹ್ಯಾಷ್‌ಟ್ಯಾಗ್‌ ಮೂಲಕ ಪ್ರಧಾನಿಯನ್ನು ಚರ್ಚೆಗೆ ಕರೆದಿರುವ ರಾಹುಲ್‌, ತಾವು ಕೇಳುವ ವಿಷಯಗಳ ಬಗ್ಗೆ ಮಾತನಾಡಿ ಎಂದಿದ್ದಾರೆ.

ಭ್ರಷ್ಟಾಚಾರದ ಬಗ್ಗೆ ನನ್ನೊಂದಿಗೆ ಚರ್ಚಿಸಲು ಪ್ರಧಾನಿ ಮೋದಿ ಹೆದರುತ್ತಿದ್ದಾರೆಯೇ? ಹಾಗಾದರೆ ನಾನು ನಿಮಗೆ ಕೊಂಚ ಸುಲಭ ಮಾಡುತ್ತೇನೆ. ರಾಫೇಲ್‌ ಮತ್ತು ಅಂಬಾನಿ, ನೀರವ್‌ ಮೋದಿ ಹಾಗೂ ಅಮಿತ್‌ ಶಾ ಮತ್ತು ನಗದು ರದ್ದತಿ ಈ ಮೂರು ವಿಷಯಗಳ ಬಗ್ಗೆ ಚರ್ಚಿಸಿ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

ರಾಹುಲ್‌ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ಈ ರೀತಿ ವಾದಕ್ಕೆ ಕರೆಯುತ್ತಿರುವುದು ಇದೇ ಮೊದಲೇನಲ್ಲ. ರಫೇಲ್‌ ಖರೀದಿ ಕುರಿತಾದ ಚರ್ಚೆ ತಾರಕಕ್ಕೆ ಏರಿದ ಸಂದರ್ಭದಲ್ಲಿ ಮೋದಿ ಮಾತನಾಡಬೇಕು ಎಂದು ಒತ್ತಾಯಿಸಿದ್ದರು. ಈಗಲೂ ರಫೆಲ್‌ ವಿಷಯ ಪ್ರಸ್ತಾಪಿಸಿರುವ ರಾಹುಲ್‌ ಅವರು, ‘ಉದ್ಯಮಿ ಅನಿಲ್‌ ಅಂಬಾನಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ರಫೇಲ್‌ ಒಪ್ಪಂದವನ್ನು ರಿಲಯನ್ಸ್ ಡಿಫೆನ್ಸ್‌ ಕಂಪನಿಗೆ ನೀಡಲಾಗಿದೆ’ ಎಂದು ಆರೋಪಿಸಿದ್ದಾರೆ.

ರಫೇಲ್‌ ಅನಿಲ್‌ ಅಂಬಾನಿ ಸಮೂಹ ಬಿಡ್‌ನಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡುವ ಉದ್ದೇಶದಿಂದಲೇ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ಮಾಡಿದ್ದ ಒಪ್ಪಂದನ್ನು ಪ್ರಧಾನಿ ಮೋದಿ ರದ್ದು ಪಡಿಸಿದ್ದಾರೆ ಎಂದು ದೂರಿದರು. 

ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ (ಪಿಎನ್‌ಬಿ) ನಡೆದ ಬಹುಕೋಟಿ ಹಗರಣದ ಕುರಿತು ಮಾತನಾಡಿರುವ ರಾಹುಲ್, ‘ಈ ವಂಚನೆಯ ಸೂತ್ರಧಾರಿಯಾಗಿರುವ ವಜ್ರಾಭರಣ ಉದ್ಯಮಿ ನೀರವ್‌ ಮೋದಿ ಅವರ ಬಗ್ಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮೃದು ಧೋರಣೆಯನ್ನು ಹೊಂದಿದೆ’ ಎಂದು ಟೀಕಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಸತ್ಯ ಎನ್ನುವುದು ಬಹಳ ಶಕ್ತಿಶಾಲಿ. ನಾನು ಸವಾಲಾಕುತ್ತಿದ್ದೇನೆ ನನ್ನ ಈ ಮೂರು ಪ್ರಶ್ನೆಗಳಿಗೆ ಉತ್ತರಿಸಿ ಎಂದಿದ್ದಾರೆ.

1. ₹3.5 ಲಕ್ಷ ಕೋಟಿ ಸಾಲಮನ್ನಗೊಂಡ ಆ 15 ಮಂದಿ ಉದ್ಯಮಿಗಳು ಯಾರು?

2. ರಫೇಲ್‌ ಒಪ್ಪಂದ ₹58 ಸಾವಿರ ಕೋಟಿಯದ್ದಾದರೆ, ಅನಿಲ್‌ ಅಂಬಾನಿಗೆ ಹೇಗೆ ₹130 ಸಾವಿರ ಕೋಟಿ ಸಿಗುತ್ತದೆ?

3. ಅನಿಲ್‌ ಅಂಬಾನಿ ವಂಚನ ಎನ್ನುವುದಾದರೆ, ವಕೀಲರು ಹಾಗೂ  ಕಾಂಗ್ರೆಸ್ ಮುಖಂಡರಾದ ಕಪಿಲ್‌ ಸಿಬಲ್‌ ಅವರ ಪರ ಯಾಕೆ ವಾದಿಸುತ್ತಿದ್ದಾರೆ? 

‘ಯುಪಿಎ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರವನ್ನು ಸರಿಯಾಗಿ ನಿಗ್ರಹಿಸದಿದ್ದರಿಂದಲೇ ಪಿಎನ್‌ಬಿ ಹಗರಣ ನಡೆದಿದೆ. ಯಾರು ಜನಸಾಮಾನ್ಯರ ಹಣವನ್ನು ಲೂಟಿ ಮಾಡಿದ್ದಾರೊ ಅವರೆಲ್ಲರೂ ಬೆಲೆ ತೆರುತ್ತಾರೆ’ ಮೋದಿ ತಿಳಿಸಿದ್ದಾರೆ.

2016ರ ನವೆಂಬರ್‌ನಲ್ಲಿ ಆದ ನೋಟು ರದ್ದತಿಯೂ ಮೋದಿ–ರಾಹುಲ್ ಚರ್ಚೆಯ ವಿಷಯಗಳಲ್ಲಿ ಒಂದಾಗಿದೆ. ನೋಟು ರದ್ದತಿ ಪ್ರಧಾನಿ ಮೋದಿ ನಡೆಸಿದ ಅತಿ ದೊಡ್ಡ ಹಗರಣ ಎಂದು ರಾಹುಲ್‌ ಪದೇ ಪದೇ ಉಲ್ಲೇಖಿಸಿದ್ದಾರೆ. ಇದಕ್ಕೆ ಸಂದರ್ಶನವೊಂದರಲ್ಲಿ ಉತ್ತರಿಸಿರುವ ಮೋದಿ, ‘ದೇಶದ ಹಿತಾಸಕ್ತಿಯಿಂದ ತೆಗೆದುಕೊಳ್ಳಬೇಕಾಗಿದ್ದ ಅತ್ಯಗತ್ಯ ನಿರ್ಧಾರ’ ಎಂದು ಹೇಳಿದ್ದಾರೆ.

ಸದ್ಯ ಟ್ವಿಟ್ಟರ್‌ನಲ್ಲಿ #Scared2Debate ಎಂಬ ಹ್ಯಾಷ್‌ಟ್ಯಾಗ್‌ನಡಿ ಕಾಂಗ್ರೆಸ್‌ ಮತ್ತು ಬಿಜೆಪಿಯ ವಾಗ್ವಾದ ಜೋರಾಗಿದೆ. ಕಾಂಗ್ರೆಸ್‌ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ದಿವ್ಯಾ ಸ್ಪಂದನಾ (ರಮ್ಯಾ) ಸಹ ಈ ಬಗ್ಗೆ ಟ್ವೀಟ್‌ ಮಾಡಿದ್ದು, ‘ಬಹುಶಃ ಚರ್ಚಿಸಲು ಪ್ರಧಾನಿ ಮೋದಿ ಅವರಿಗೆ ಭಯವಿರಬೇಕು. ಏಕೆಂದರೆ, ಅವರು ಭ್ರಷ್ಟರು. ಮೋದಿ #Scared2Debate ಬಗ್ಗೆ ನೀವೇನು ಹೇಳುತ್ತೀರೀ?’ ಎಂದು ಟೀಕಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 0

  Sad
 • 0

  Frustrated
 • 7

  Angry

Comments:

0 comments

Write the first review for this !