ಭಾನುವಾರ, ಸೆಪ್ಟೆಂಬರ್ 27, 2020
21 °C

ಪುಣೆಯಲ್ಲಿ ನಾಯಿಮರಿ ಹೊತ್ತೊಯ್ದ ‘ಜೊಮೆಟೊ’ ಹುಡುಗ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ವಂದನಾ ಶಾ ಅವರ ‘ದೋತ್ತು‘ (ನಾಯಿಮರಿ)

ಪುಣೆ: ಆಹಾರದ ಪೊಟ್ಟಣ ಕೊಡಲೆಂದು ಮನೆಗೆ ಬಂದ ‘ಜೊಮೆಟೊ’ ಹುಡುಗ ವಾಪಾಸ್ ಹೋಗುವಾಗ ಮನೆಯಲ್ಲಿದ್ದ ನಾಯಿಮರಿ ಹೊತ್ತೊಯ್ದಿರುವ ಸಂಗತಿ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ವಂದನಾ ಶಾ ಟ್ವಿಟರ್‌ನಲ್ಲಿ ಈ ಘಟನೆ ಬಗ್ಗೆ ಪೋಸ್ಟ್‌ ಮಾಡಿದ್ದಾರೆ. ಸೋಮವಾರ ಮಧ್ಯಾಹ್ನ ಮನೆಗೆ ಆಹಾರದ ಪೊಟ್ಟಣ ಕೊಟ್ಟು ಹೋಗಲೆಂದು ಬಂದ ಜೊಮೆಟೊ ಡೆಲಿವರಿ ಬಾಯ್ ವಾಪಸ್ ಹೋಗುವಾಗ ಮುದ್ದಿನ ನಾಯಿಮರಿ ‘ದೊತ್ತು’ವನ್ನೂ ಜೊತೆಗೆ ಕರೆದೊಯ್ದ ಎನ್ನುವುದು ಅವರ ಆರೋಪ.

ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ನಾಪತ್ತೆಯಾಗುವ ಮೊದಲು ‘ದೊತ್ತು’ ಆಕೆಯ ಮನೆ ಮತ್ತು ಅದಕ್ಕೆ ಹೊಂದಿಕೊಂಡಿರುವ ಫ್ಯಾಕ್ಟರಿ ಸಂಕೀರ್ಣದಲ್ಲಿ ಆಡಿಕೊಂಡಿದ್ದ ಸಂಗತಿ ಬೆಳಕಿಗೆ ಬಂದಿತ್ತು.

ಹಲವು ಗಂಟೆಗಳವರೆಗೆ ನಾಯಿಮರಿ ನಾಪತ್ತೆಯಾದ ನಂತರ ಬೇಸರಗೊಂಡ ದಂಪತಿ ಹುಡುಕಾಡಿದರು. ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಹತ್ತಿದರು. ಪೊಲೀಸರು ನಾಯಿಮರಿ ಹುಡುಕಿಕೊಡುವ ಭರವಸೆ ಕೊಟ್ಟರು.

ಆತಂಕಗೊಂಡ ಶಾ ಅವರ ತಮ್ಮ ಮನೆಯ ಸಮೀಪ ಇರುವ ಆಹಾರ ಸರಬರಾಜು ಮಾಡುವ ಹುಡುಗರಲ್ಲಿ ವಿಚಾರಿಸಿದ್ದಾರೆ. ಒಬ್ಬ ಹುಡುಗ ‘ದೋತ್ತು‘ವನ್ನು ಗುರುತು ಹಿಡಿದು ಇದನ್ನು ನನ್ನ ಸಹೋದ್ಯೋಗಿ ತೆಗೆದುಕೊಂಡು ಹೋಗಿದ್ದಾನೆ ಎಂದು ಮಾಹಿತಿ ನೀಡಿದ್ದಾನೆ. 

ಶಾ ಅವರು ಮಾಹಿತಿ ನೀಡಿದ ಹುಡುಗನ ಜೊತೆ ದೋತ್ತುವಿನ ಫೋಟೊ ತೆಗೆದುಕೊಂಡು ಕೆಲ ಜೊಮೆಟೊ ಸಿಬ್ಬಂದಿಗಳನ್ನು ಸಂಪರ್ಕಿಸುತ್ತಾರೆ. ಆಗ ದೋತ್ತುವನ್ನು ತೆಗೆದುಕೊಂಡು ಹೋಗಿದ್ದು ತುಷಾರ್‌ ಎಂಬುದು ಗೊತ್ತಾಗುತ್ತದೆ. 

ತುಷಾರ್‌ ಮೊಬೈಲ್‌ ನಂಬರ್ ಪಡೆದು ಅವನಿಗೆ ಫೋನ್‌ ಮಾಡುತ್ತಾರೆ. ದೋತ್ತುವನ್ನು ವಾಪಾಸು ನೀಡು ಕೇಳಿದಾಗ, ತುಷಾರ್‌  ಗಾಬರಿಗೊಂಡು ಕ್ಷಮೆಯಾಚಿಸುತ್ತಾನೆ. ಬಳಿಕ ದೋತ್ತುವನ್ನು ತಮ್ಮ ಊರಿಗೆ ಕಳುಹಿಸಿರುವುದಾಗಿ ತುಷಾರ್‌ ಹೇಳಿದ ಎಂದು ಶಾ  ಟ್ವೀಟ್ ಮಾಡಿದ್ದಾರೆ.

ದೋತ್ತುವನ್ನು ನೀಡಿದರೆ ನಿನಗೆ ಹಣ ನೀಡುತ್ತೇವೆ ಎಂದು ಕೋರಿದರೂ ತುಷಾರ್‌ ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದ. ಪದೇ ಪದೇ ಫೋನ್‌ ಮಾಡಿದ ಬಳಿಕ ಅವನು ಮೊಬೈಲ್‌ ಆಫ್‌ ಮಾಡಿಕೊಂಡ ಎಂದು ಶಾ ಹೇಳಿದ್ದಾರೆ. 

ಶಾ ಅವರು ಜೊಮೆಟೊ ಕಂಪನಿಯನ್ನು ಸಂಪರ್ಕಿಸಿ ‘ಆಕ್ಟೋಬರ್‌ 7 ರಂದು ನಿಮ್ಮ ಕಂಪನಿಯ ತುಷಾರ್‌ ಎಂಬ ಹುಡುಗ ನಮ್ಮ ಮನೆಗೆ ಆಹಾರ ನೀಡಲು ಬಂದಾಗ ನಾಯಿಮರಿಯನ್ನು ತೆಗೆದುಕೊಂಡು ಹೋಗಿದ್ದಾನೆ. ಅದನ್ನು ಮರಳಿಸುವಲ್ಲಿ ಸಹಾಯ ಮಾಡಿ ಎಂದು ಮನವಿ ಮಾಡುತ್ತಾರೆ. ನಿಮ್ಮ ವಿಳಾಸ, ಆಹಾರ ಸರಬರಾಜಿನ ಮಾಹಿತಿ ನೀಡಿದರೆ ನಾವು ನಿಮಗೆ ಸಹಾಯ ಮಾಡಬಲ್ಲೆವು ಎಂದು ಜೊಮೆಟೊ ಕಂಪನಿಯ ಸಿಬ್ಬಂದಿ ಮೈಕ್ರೊಬ್ಲಾಗಿಂಗ್‌ನಲ್ಲಿ ಪ್ರತಿಕ್ರಿಯಿಸುತ್ತಾರೆ. 

ಕೊನೆಗೆ ಶಾ ಅವರು ತಮ್ಮ ಪತಿಯೊಂದಿಗೆ ಪೊಲೀಸ್‌ ಠಾಣೆಗೆ ಹೋಗಿದ್ದಾರೆ. ಅಲ್ಲಿ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿ ನಾಯಿಮರಿ ಹುಡುಕಿಕೊಡುವ ಭರವಸೆ ಕೊಟ್ಟಿದ್ದಾರೆ ಎಂದು ವಂದನಾ ಶಾ ಬರೆದುಕೊಂಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು