ಮಂಗಳವಾರ, ಸೆಪ್ಟೆಂಬರ್ 24, 2019
29 °C
ಕೇರಳದ ಮುನ್ನಾರ್‌‌‌ನಲ್ಲಿ ಘಟನೆ

ಚಲಿಸುವ ಜೀಪಿನಿಂದ ಬಿದ್ದ ಮಗು- ಗಮನಿಸದೇ 50 ಕಿ.ಮೀ. ಪ್ರಯಾಣಿಸಿದ ಪೋಷಕರು

Published:
Updated:

ಕೇರಳ: ಪೋಷಕರ ನಿರ್ಲಕ್ಷ್ಯದಿಂದ ಚಲಿಸುತ್ತಿದ್ದ ಜೀಪಿನಿಂದ ಮಗುವೊಂದು ಕೆಳಗೆ ಬಿದ್ದ ಘಟನೆ ಕೇರಳದಲ್ಲಿ ಭಾನುವಾರ ನಡೆದಿದೆ.

ಇಡುಕ್ಕಿ ಜಿಲ್ಲೆಯ ಮುನ್ನಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಒಂದು ವರ್ಷದ ಹೆಣ್ಣು ಮಗು ಜೀಪಿನಿಂದ ಕೆಳಗೆ ಬಿದ್ದಿದೆ. ಬಿದ್ದ ತಕ್ಷಣವೇ ಮಗು ಅಳುತ್ತಾ ರಸ್ತೆಯಲ್ಲಿ ತೆವಳುತ್ತಾ ಬರುತ್ತಿತ್ತು. ಇದನ್ನು ನೋಡಿದ ಅರಣ್ಯ ಇಲಾಖೆಯ ಸಿಬ್ಬಂದಿ ತಕ್ಷಣವೇ ಎತ್ತಿಕೊಂಡರು. ನಂತರ ಅದಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಿದರು.

ಮುನ್ನಾರ್‌ನ ಅರಣ್ಯ ಇಲಾಖೆಯ ಚೆಕ್ ಪೋಸ್ಟ್‌ನಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಮಗು ಬೀಳುವುದು ಮತ್ತು ರಸ್ತೆ ಮೇಲೆ ತೆವಳುತ್ತಿರುವುದು ಸೆರೆಯಾಗಿದೆ. ಈ ಚೆಕ್ ಪೋಸ್ಟ್‌ನಿಂದ ಸುಮಾರು 50 ಕಿಲೋ ಮೀಟರ್ ದೂರದಲ್ಲಿರುವ  ಕಂಬಿಲಿಕಂಡಂ ಎಂಬಲ್ಲಿ ಮಗುವನ್ನು ನೋಡಿಕೊಂಡ ಪೋಷಕರು ಗಾಬರಿಯಾಗಿ ಮಗು ಕಾಣೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದರು.

ಇತ್ತ ಅರಣ್ಯ ಇಲಾಖೆಯ ಸಿಬ್ಬಂದಿ ಮಗುವನ್ನು ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆ ಕೊಡಿಸಿದರು. ಮಗುವಿಗೆ ಸಣ್ಣ ಪುಟ್ಟ ತರಚಿದ ಗಾಯಗಳಾಗಿರುವುದನ್ನು ಹೊರತುಪಡಿಸಿದರೆ ಅಪಾಯದಿಂದ ಪಾರಾಗಿದೆ ಎಂದು ವೈದ್ಯರು ತಿಳಿಸಿದರು. ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ಮಗುವನ್ನು ಕರೆತಂದು ಕಚೇರಿಯಲ್ಲಿಯೇ ಪೋಷಿಸಿದರು. ಅಲ್ಲದೆ, ಹತ್ತಿರದ ಪೊಲೀಸರಿಗೆ ವಿಷಯ ತಿಳಿಸಿದರು.

ಈ ವಿಷಯ ತಿಳಿಯತ್ತಿದ್ದಂತೆ ಪೊಲೀಸರು ಮಗುವನ್ನು ಕಳೆದುಕೊಂಡ ಪೋಷಕರಿಗೆ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಬಳಿ ಹೋಗಿ ಮಗುವನ್ನು ಪರಿಶೀಲಿಸುವಂತೆ ಹೇಳಿದ್ದಾರೆ. ಆಗ ಮಗುವು ತಮ್ಮದೇ ಎಂದು ಹೇಳಿದಾಗ ಸೋಮವಾರ ಪೊಲೀಸರ ಸಮ್ಮುಖದಲ್ಲಿ ಮಗುವನ್ನು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ಅದೃಷ್ಟವಶಾತ್ ಆ ರಸ್ತೆಯಲ್ಲಿ ವಾಹನಗಳ ಓಡಾಟ ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ.

 

Post Comments (+)