ಭಾನುವಾರ, ಸೆಪ್ಟೆಂಬರ್ 22, 2019
22 °C

ರೋಗಿ ಹೊಟ್ಟೆಯಲ್ಲಿ 116 ಮೊಳೆಗಳು!

Published:
Updated:

ಕೋಟ (ರಾಜಸ್ಥಾನ): ಇಲ್ಲಿನ ಬೂಂದಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 42 ವರ್ಷದ ರೋಗಿಯ ಹೊಟ್ಟೆಯಿಂದ 116 ಮೊಳೆಗಳು, ಉದ್ದದ ವೈರ್ ಮತ್ತು ಕಬ್ಬಿಣದ ಗುಂಡುಗಳನ್ನು ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ತೆಗೆದಿದ್ದಾರೆ.

ಈ ಮೊಳೆಗಳು ತಲಾ 6.5 ಸೆಂ.ಮೀ ಉದ್ದವಾಗಿದ್ದು, ಅವುಗಳನ್ನು ಹೊರತೆಗೆಯಲು ಒಂದೂವರೆ ಗಂಟೆ ಶಸ್ತ್ರಚಿಕಿತ್ಸೆ ನಡೆಸಬೇಕಾಯಿತು ಎಂದು ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಅನಿಲ್‌ ಸೈನಿ ಮಂಗಳವಾರ ತಿಳಿಸಿದರು.

‘ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಭೋಲಾ ಶಂಕರ್‌ ಹೆಸರಿನ ರೋಗಿ ಭಾನುವಾರ ಆಸ್ಪತ್ರೆಗೆ ಬಂದಿದ್ದರು. ಅವರನ್ನು ಹಲವು ಪರೀಕ್ಷೆಗಳಿಗೆ ಒಳಪಡಿಸಿದೆವು. ರೋಗಿಯ ಎಕ್ಸ್‌ರೇ ನೋಡಿದಾಗಲೇ ನನಗೆ ಅನುಮಾನ ಬಂದಿತ್ತು. ಕೂಡಲೇ ಸಿ.ಟಿ ಸ್ಕ್ಯಾನ್‌ ಮಾಡಿಸಲು ತಿಳಿಸಿದ್ದೆ. ಅದರಲ್ಲಿ ನನ್ನ ಅನುಮಾನ ನಿಜವಾಯಿತು. ಸೋಮವಾರವೇ ಶಸ್ತ್ರಚಿಕಿತ್ಸೆ ಮಾಡಿದೆವು. ಇದೀಗ ರೋಗಿಯ ಆರೋಗ್ಯ ಸಹಜ ಸ್ಥಿತಿಗೆ ಬಂದಿದ್ದು, ಮಾತನಾಡುತ್ತಿದ್ದಾರೆ’ ಎಂದು ಅವರು ತಿಳಿಸಿದರು.

‘ಆದರೆ ಇಷ್ಟೊಂದು ಮೊಳೆಗಳನ್ನು ಮತ್ತು ಕಬ್ಬಿಣದ ಇತರ ಪದಾರ್ಥಗಳನ್ನು ಈ ವ್ಯಕ್ತಿ ಹೇಗೆ ನುಂಗಿರಬಹುದು ಎಂಬುದು ಗೊತ್ತಾಗಿಲ್ಲ. ಈ ಕುರಿತು ರೋಗಿಯಾಗಲಿ, ಅವರ ಕುಟುಂಬದವರಾಗಲಿ ಯಾವುದೇ ಮಾಹಿತಿ ನೀಡಿಲ್ಲ’ ಎಂದು ಅವರು ಹೇಳಿದರು.

Post Comments (+)