ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ: ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ, ಪಕ್ಷದ 12 ಶಾಸಕರು ಟಿಆರ್‌ಎಸ್‌ಗೆ

Last Updated 6 ಜೂನ್ 2019, 10:46 IST
ಅಕ್ಷರ ಗಾತ್ರ

ಹೈದರಾಬಾದ್‌: ತೆಲಂಗಾಣದ 12 ಮಂದಿ ಕಾಂಗ್ರೆಸ್‌ ಶಾಸಕರು ಪಕ್ಷ ತ್ಯಜಿಸಿ ಟಿಆರ್‌ಎಸ್‌ ಸೇರ್ಪಡೆಯಾಗಲು ತೀರ್ಮಾನಿಸಿದ್ದಾರೆ. ಈ ಶಾಸಕರು ಸ್ಪೀಕರ್‌ ಅವರನ್ನು ಗುರುವಾರ ಭೇಟಿಮಾಡಿದ್ದು, ತಮ್ಮನ್ನು ಟಿಆರ್‌ಎಸ್‌ ಜತೆ ವಿಲೀನ ಮಾಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.

119 ಸದಸ್ಯಬಲದ ತೆಲಂಗಾಣ ವಿಧಾನಸಭೆಯಲ್ಲಿ ಕಾಂಗ್ರೆಸ್‌ನ 19 ಸದಸ್ಯರಿದ್ದರು. ಇವರಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಉತ್ತಮ್‌ ಕುಮಾರ್‌ ರೆಡ್ಡಿ ಅವರು ಈಚೆಗೆ ಲೋಕಸಭೆಗೆ ಆಯ್ಕಯಾಗಿದ್ದರಿಂದ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ ಶಾಸಕರ ಸಂಖ್ಯೆ 18ಕ್ಕೆ ಇಳಿದಿದೆ. ಗುರುವಾರ ಇನ್ನೂ 12 ಶಾಸಕರು ಪಕ್ಷಾಂತರಕ್ಕೆ ಮುಂದಾಗಿ ಕಾಂಗ್ರೆಸ್‌ಗೆ ದೊಡ್ಡ ಆಘಾತ ನೀಡಿದ್ದಾರೆ.

ಟಿಆರ್‌ಎಸ್‌ ಪಕ್ಷವನ್ನು ಸೇರಲು ಸಿದ್ಧ ಎಂದು 11 ಮಂದಿ ಶಾಸಕರು ಮಾರ್ಚ್‌ನಲ್ಲೇ ಹೇಳಿದ್ದರು. ಗುರುವಾರ ಬೆಳಿಗ್ಗೆ ಟಿಆರ್‌ಎಸ್‌ನ ಕಾರ್ಯಾಧ್ಯಕ್ಷ, ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ಅವರ ಪುತ್ರ ಕೆ.ಟಿ. ರಾಮರಾವ್‌ ಅವರನ್ನು ಭೇಟಿಮಾಡಿದ ಕಾಂಗ್ರೆಸ್‌ ಶಾಸಕ ರೋಹಿತ್‌ ರೆಡ್ಡಿ ಅವರು ಪಕ್ಷಾಂತರದ ಮಾತುಕತೆ ನಡೆಸಿದ್ದರು. ಅದಾದ ಬಳಿಕ ಈ ಬೆಳವಣಿಗೆ ನಡೆದಿದೆ.

‘ರಾಜ್ಯದ ಅಭಿವೃದ್ಧಿಗಾಗಿ ಕಾಂಗ್ರೆಸ್‌ನ 12 ಶಾಸಕರು ಮುಂಖ್ಯಮಂತ್ರಿ ಜೊತೆ ಕೈಜೋಡಿಸಲು ತೀರ್ಮಾನಿಸಿದ್ದಾರೆ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ವಿಶೇಷ ಸಭೆ ನಡೆಸಿ, ಕೆಸಿಆರ್‌ ಜೊತೆ ಸೇರಿ ಕೆಲಸ ಮಾಡುವ ನಿರ್ಣಯ ಅಂಗೀಕರಿಸಿದ್ದೇವೆ. ಇದಾದ ಬಳಿಕ ಸ್ಪೀಕರ್‌ ಅವರನ್ನು ಭೇಟಿಮಾಡಿ ನಮ್ಮ ಪಕ್ಷವನ್ನು ಟಿಆರ್‌ಎಸ್‌ನಲ್ಲಿ ವಿಲೀನ ಮಾಡುವಂತೆ ವಿನಂತಿಸಿದ್ದೇವೆ’ ಎಂದು ಕಾಂಗ್ರೆಸ್‌ ಮುಖಂಡ, ಶಾಸಕ ಜಿ. ವೆಂಕಟರಮಣ ರೆಡ್ಡಿ ತಿಳಿಸಿದರು.

ಕಾಂಗ್ರೆಸ್‌ನ ಒಟ್ಟು ಶಾಸಕರಲ್ಲಿ ಮೂರನೇ ಎರಡರಷ್ಟು ಮಂದಿ ಟಿಆರ್‌ಎಸ್‌ ಸೇರಲು ಮುಂದಾಗಿದ್ದರಿಂದ ಪಕ್ಷಾಂತರ ವಿರೋಧಿ ಕಾಯ್ದೆ ಅವರಿಗೆ ಅನ್ವಯವಾಗುವುದಿಲ್ಲ. ಇವರ ಮನವಿಯನ್ನು ಸ್ಪೀಕರ್‌ ಅಂಗೀಕರಿಸಿದರೆ ತೆಲಂಗಾಣ ವಿಧಾನಸಭೆಯಲ್ಲಿ ಅಧಿಕೃತ ವಿರೋಧಪಕ್ಷದ ಸ್ಥಾನವನ್ನು ಕಾಂಗ್ರೆಸ್‌ ಕಳೆದುಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆಲಂಗಾಣ ವಿಧಾನಸಭೆಯಲ್ಲಿ ಅಸಾದುದ್ದಿನ್‌ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷದ ಏಳು ಮಂದಿ ಸದಸ್ಯರಿದ್ದರೆ ಬಿಜೆಪಿಯ ಒಬ್ಬರೇ ಒಬ್ಬ ಸದಸ್ಯರಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಟಿಆರ್‌ಎಸ್‌ 88 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT