ತಿತ್ಲಿ ಚಂಡಮಾರುತ: ಗುಹೆಯಲ್ಲಿ ಆಶ್ರಯ ಪಡೆದಿದ್ದ 12 ಮಂದಿ ಸಾವು,ನಾಲ್ವರು ನಾಪತ್ತೆ

7

ತಿತ್ಲಿ ಚಂಡಮಾರುತ: ಗುಹೆಯಲ್ಲಿ ಆಶ್ರಯ ಪಡೆದಿದ್ದ 12 ಮಂದಿ ಸಾವು,ನಾಲ್ವರು ನಾಪತ್ತೆ

Published:
Updated:

ಭುವನೇಶ್ವರ,ಒಡಿಶಾ: ತಿತ್ಲಿ ಚಂಡಮಾರುತದ ಪರಿಣಾಮ ಸುರಿದ ಭಾರಿ ಮಳೆಯಿಂದ ಪಾರಾಗಲು ಗುಹೆಯೊಂದರಲ್ಲಿ ಆಶ್ರಯ ಪಡೆದಿದ್ದ, ಗಜಪತಿ ಜಿಲ್ಲೆಯ ಬರಾಘರ್‌ ಗ್ರಾಮದ 12 ಮಂದಿ ಭೂಕುಸಿತದಿಂದ ಮೃತಪಟ್ಟಿದ್ದು, ನಾಲ್ಕು ಮಂದಿ ನಾಪತ್ತೆಯಾಗಿದ್ದಾರೆ.

‘ಶುಕ್ರವಾರ ಸಂಜೆ ಸುರಿದ ಭಾರಿ ಮಳೆಯಿಂದ ರಕ್ಷಣೆ ಪಡೆಯಲು ಜನರು ಗುಹೆಯೊಳಗೆ ತೆರಳಿದ್ದರು. ಈ ವೇಳೆ ಭೂಕುಸಿತ ಸಂಭವಿಸಿದೆ. ನಾಪತ್ತೆಯಾಗಿರುವ ನಾಲ್ವರು ಮಣ್ಣಿನಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಗಾಳಿ, ಮಳೆಗೆ ಮರಗಳು ರಸ್ತೆಗೆ ಉರುಳಿ ಬಿದ್ದಿರುವ ಕಾರಣ ಭೂಕುಸಿತ ಸಂಭವಿಸಿರುವ ಪ್ರದೇಶಕ್ಕೆ ತೆರಳಲು ಕಷ್ಟವಾಗುತ್ತಿದೆ ಎಂದಿದ್ದಾರೆ.

ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ಗಂಜಾಂ, ಗಜಪತಿ ಮತ್ತು ರಾಯಗಡ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್‌) ಮತ್ತು ಒಡಿಶಾ ವಿಪತ್ತು ಕ್ಷಿಪ್ರ ನಿರ್ವಹಣಾ ಪಡೆಯ (ಒಡಿಆರ್‌ಎಎಫ್‌) ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 963 ಪರಿಹಾರ ಶಿಬಿರಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

₹,1200 ಕೋಟಿ ನೆರವಿಗೆ ಮನವಿ

ಅಮರಾವತಿ ವರದಿ: ಚಂಡಮಾರುತದ ಪರಿಣಾಮ ಶ್ರೀಕಾಕುಳ ಮತ್ತು ವಿಶಾಖಪಟ್ಟಣ ಜಿಲ್ಲೆಗಳಲ್ಲಿ ಹಾನಿ ಸಂಭವಿಸಿದ್ದು, ಕೇಂದ್ರ ಸರ್ಕಾರ ₹1,200 ಕೋಟಿ ಮಧ್ಯಂತರ ನೆರವು ನೀಡಬೇಕು ಎಂದು ಆಂಧ್ರಪ್ರದೇಶ ಸರ್ಕಾರ ಮನವಿ ಮಾಡಿದೆ.

ಭಾರಿ ಪ್ರಮಾಣದಲ್ಲಿ ಬೆಳೆ ಮತ್ತು ಸೊತ್ತು ನಾಶವಾಗಿದೆ. ಕೇಂದ್ರ ಸರ್ಕಾರ ಹಣಕಾಸಿನ ನೆರವು ನೀಡಬೇಕು ಎಂದು ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !