ಬಿಹಾರದಲ್ಲಿ ಮಕ್ಕಳ ಸಾವು ಪ್ರಕರಣ-ಸುಪ್ರೀಂ ಕೋರ್ಟ್ ತರಾಟೆ

ಮಂಗಳವಾರ, ಜೂಲೈ 16, 2019
23 °C

ಬಿಹಾರದಲ್ಲಿ ಮಕ್ಕಳ ಸಾವು ಪ್ರಕರಣ-ಸುಪ್ರೀಂ ಕೋರ್ಟ್ ತರಾಟೆ

Published:
Updated:

ನವದೆಹಲಿ: ಬಿಹಾರದಲ್ಲಿ ಎಇಎಸ್ ಸೋಂಕಿನಿಂದ ಸಂಭವಿಸಿದ ಮಕ್ಕಳ ಸಾವಿನ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆರೋಗ್ಯ ಇಲಾಖೆಗಳ ತೀವ್ರ ನಿರ್ಲಕ್ಷ್ಯ ಹಾಗೂ ನಿಷ್ಕ್ರಿಯತೆಯೇ ಕಾರಣ ಎಂದು ಸುಪ್ರೀಂ ಕೋರ್ಟ್ ಸೋಮವಾರ ಸಂಬಂಧಪಟ್ಟ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿತು. 

ಮಕ್ಕಳ ಸಾವಿನ ಕುರಿತು ವಕೀಲರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ಬಿಆರ್ ಗವಾಯ್ ಅವರಿದ್ದ ಪೀಠ ಮೇಲಿನಂತೆ ಅಭಿಪ್ರಾಯಪಟ್ಟಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ಸಾವು ಸಂಭವಿಸಿರುವುದು ತುಂಬಾ ಗಂಭೀರವಾದ ಪ್ರಕರಣ. ಇನ್ನು ಮುಂದೆ ಈ ಘಟನೆ ನಡೆಯಬಾರದು ಎಂಬ ಎಚ್ಚರಿಕೆಯನ್ನೂ ನೀಡಿದ್ದಲ್ಲದೆ, ಈ ಸಂಬಂಧ ಸೂಕ್ತ ವಿವರಣೆ ನೀಡುವಂತೆ ಆದೇಶಿಸಿದೆ. 

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಿದ್ದ ವಕೀಲರು, ಬಿಹಾರದ ಮುಜಾಫರ್ ನಗರದಲ್ಲಿ ಮಕ್ಕಳ ಸಾವು ತಡೆಗಟ್ಟಲು ಬೇಕಾದ ವೈದ್ಯರಾಗಲಿ, ಔಷಧಗಳಾಗಲಿ, ತುರ್ತುನಿಗಾ ಘಟಕಗಳಾಗಲಿ ಇಲ್ಲ ಎಂದು ಆರೋಪಿಸಿದ್ದರು. ಈ ವಿಷಯವನ್ನು ಪ್ರಸ್ತಾಪಿಸಿದಾಗ ಬಿಹಾರ ಸರ್ಕಾರದ ಪರವಾಗಿ ಉತ್ತರಿಸಿದ ವಕೀಲರು ಸರ್ಕಾರ ವೈದ್ಯರು ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದರು. ವೈದ್ಯರು ಹಾಗೂ ಅಗತ್ಯ ಕ್ರಮಗಳು ಇರಬಹುದು ಆದರೆ, ಪೌಷ್ಠಿಕಾಂಶ, ಆರೋಗ್ಯ ಹಾಗೂ ಸ್ವಚ್ಛತೆ ವಿಷಯಗಳಲ್ಲಿ ಸರ್ಕಾರ ಹೆಚ್ಚಿನ ವಿವರಗಳನ್ನು ನ್ಯಾಯಾಲಯಕ್ಕೆ ತಿಳಿಸಬೇಕು.

ಅರ್ಜಿಯಲ್ಲಿ ಅಗತ್ಯ ವೈದ್ಯರು, ಹಾಸಿಗೆಗಳ ಕೊರತೆ, ತುರ್ತುನಿಗಾ ಘಟಕಗಳ ಕೊರತೆ ಇದ್ದುದೇ ಸೋಂಕು ಉಲ್ಬಣಿಸಲು ಕಾರಣವಾಗಿದೆ. ಇದರಿಂದಾಗಿಯೇ  ಮುಜಾಫರ್ ನಗರ ಜಿಲ್ಲೆಯಲ್ಲಿಯೇ 126 ಮಂದಿ ಮಕ್ಕಳು ಸಾವನ್ನಪ್ಪಲು ಕಾರಣ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಮನೋಹರ್ ಪ್ರತಾಪ್ ಎಂಬ ವಕೀಲರು ಕಳೆದ ವಾರ ಅರ್ಜಿ ಸಲ್ಲಿಸಿ, ಆಗತಾನೆ ಹುಟ್ಟಿದ ಮಗುವಿನಿಂದ 10 ವರ್ಷ ವಯಸ್ಸಿನ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದರು. ಒಟ್ಟು ಬಿಹಾರದ 38 ಜಿಲ್ಲೆಗಳಲ್ಲಿ 152 ಮಕ್ಕಳು ಮೃತಪಟ್ಟಿದ್ದರು. 

ಮೊದಲ ಮಗುವಿನ ಸಾವು ಸಂಭವಿಸಿದ ಪ್ರಕರಣ ಜೂನ್ 5ರಂದು ಸಂಭವಿಸಿತ್ತು. ಮುಜಾಫರ್ ನಗರ ಜಿಲ್ಲೆಯ ಆಸ್ಪತ್ರೆಗಳಲ್ಲಿ ಕಳಪೆ ಗುಣಮಟ್ಟದ ಸೇವೆಯೇ ಸಾವಿಗೆ ಕಾರಣ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಮತ್ತೊಬ್ಬ ವಕೀಲರು ಅರ್ಜಿ ಸಲ್ಲಿಸಿ ಉತ್ತರಪ್ರದೇಶದಲ್ಲಿಯೂ ಇದೇ ರೀತಿ ಸಾವು ಸಂಭವಿಸಿವೆ ಎಂಬುದನ್ನು ಗಮನಕ್ಕೆ ತಂದಾಗ ನ್ಯಾಯಲಯವು ಉತ್ತರಪ್ರದೇಶ ಸರ್ಕಾರವೂ ಕೂಡಲೆ ಪ್ರತಿಕ್ರಿಯಿಸುವಂತೆ ಆದೇಶಿಸಿ, ವಿಚಾರಣೆಯನ್ನು 10 ದಿನಗಳ ಕಾಲ ಮುಂದೂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !