ದೇವರು ‘ಮುನಿದ’ ನಾಡಲ್ಲಿ ವರುಣನ ಆರ್ಭಟ

7
ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ * ಅಪಾಯದ ಮಟ್ಟ ತಲುಪಿದ ಗೋದಾವರಿ ನದಿ * ಅಪಾರ ಬೆಳೆ ಹಾನಿ

ದೇವರು ‘ಮುನಿದ’ ನಾಡಲ್ಲಿ ವರುಣನ ಆರ್ಭಟ

Published:
Updated:

ತಿರುವನಂತಪುರ: ಕೇರಳದಲ್ಲಿ ನಿಲ್ಲದ ವರುಣನ ಆರ್ಭಟಕ್ಕೆ ಗುರುವಾರ ಒಂದೇ ದಿನ 106 ಮಂದಿ ಬಲಿಯಾಗಿದ್ದಾರೆ. ಇದರಿಂದ, ಕಳೆದ 11 ದಿನಗಳಲ್ಲಿ ಮಳೆಯಿಂದ ಸಾವಿಗೀಡಾದವರ ಸಂಖ್ಯೆ 173 ಮುಟ್ಟಿದೆ. ರಾಜ್ಯದ ಆಸ್ಪತ್ರೆಗಳಲ್ಲಿ ಆಮ್ಲಜನಕ ಮತ್ತು ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್‌ನ ತೀವ್ರ ಕೊರತೆ ಕಂಡುಬಂದಿದ್ದರಿಂದ, ಶುಕ್ರವಾರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.

ಶತಮಾನದಲ್ಲಿ ಕಂಡು ಕೇಳರಿಯದ ಮಹಾಪ್ರವಾಹದಿಂದ ‘ದೇವರ ನಾಡಿನ’ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಸಾವಿರಾರು ಹೆಕ್ಟೇರ್‌ಗಳಲ್ಲಿ ಬೆಳೆ ಹಾನಿಯಾಗಿದೆ. ಅಪಾರ ಪ್ರಮಾಣದ ಮೂಲಸೌಲಭ್ಯಕ್ಕೆ ಧಕ್ಕೆಯಾಗಿದೆ.

ಮೇಲ್ಚಾವಣಿಗಳಲ್ಲಿ ನಿಂತು ಪ್ರಾಣ ಉಳಿಸಿಕೊಂಡವರು, ಮುಚ್ಚಿಹೋದ ರಸ್ತೆಗಳಿಂದಾಗಿ ಹೊರಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಂಡು ದಿಕ್ಕುಗಾಣದಂತಾದವರು, ಎತ್ತರದ ಪ್ರದೇಶಗಳಲ್ಲಿ ನಿಂತು ಸಹಾಯಕ್ಕಾಗಿ ಅಂಗಲಾಚುವವರು, ದ್ವೀಪಗಳಂತಾಗಿರುವ ಹಳ್ಳಿಗಳಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಜತೆಗೆ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಯೋಧರು ಅಹರ್ನಿಶಿ ಶ್ರಮಿಸುತ್ತಿದ್ದಾರೆ. ಸುರಕ್ಷಿತ ಸ್ಥಳಗಳಿಗೆ ತೆರಳಲು ದೋಣಿಗಳು ದೊರೆಯದೆ ಪಡಿಪಾಟಲು ಪಟ್ಟ ನೂರಾರು ಮಂದಿಯನ್ನು ಸೇನೆಯ ಹೆಲಿಕಾಪ್ಟರ್ ಬಳಸಿ ಕರೆದೊಯ್ಯಲಾಯಿತು.

ಪಟ್ಟಣಂತಿಟ್ಟ, ಅಲಪ್ಪುಳ, ಎರ್ನಾಕುಲಂ ಮತ್ತು ತ್ರಿಶೂರ್‌ ಜಿಲ್ಲೆಗಳು ಮುಂಗಾರಿನ ಆವೇಶಕ್ಕೆ ತತ್ತರಿಸಿವೆ. ಕೆಲವು ಆಸ್ಪತ್ರೆಗಳ ಒಳಕ್ಕೂ ಮಳೆ ನೀರು ನುಗ್ಗಿದ್ದರಿಂದ ರೋಗಿಗಳನ್ನು ಬೇರೆಡೆ ಸ್ಥಳಾಂತರಿಸಲಾಯಿತು.

ಆಸ್ಟ್ರೇಲಿಯಾ, ಅಮೆರಿಕ ಹಾಗೂ ಬ್ರಿಟನ್‌ನಲ್ಲಿ ನೆಲೆಸಿರುವ ಅನಿವಾಸಿ ಕೇರಳೀಯರು ತಮ್ಮ ಊರುಗಳಲ್ಲಿನ ಪ್ರೀತಿಪಾತ್ರರನ್ನು ರಕ್ಷಿಸುವಂತೆ ಟಿ.ವಿ ಚಾನೆಲ್‌ಗಳ ಮೂಲಕ ಅಧಿಕಾರಿಗಳಿಗೆ ಮೊರೆ ಇಡುತ್ತಿದ್ದಾರೆ.

‘ನನ್ನ ತಂದೆ ತಾಯಿ ಮತ್ತು ಸಂಬಂಧಿಕರು ಆಲುವಾದಲ್ಲಿ ಕಳೆದೆರಡು ದಿನಗಳಿಂದಲೂ ಸಿಲುಕಿಕೊಂಡಿದ್ದಾರೆ’ ಎಂದು ಸೌಮ್ಯಾ ಎಂಬುವವರು ಅಲವತ್ತುಕೊಂಡರೆ, ಮೇರಿ ವರ್ಗೀಸ್‌ ಎಂಬ ಹಿರಿಯ ಮಹಿಳೆಗೆ ಆಕ್ಸಿಜನ್‌ ಸಿಲಿಂಡರ್‌ನ ತುರ್ತು ಅಗತ್ಯವಿದ್ದು, ಅವರ ಪರಿಸ್ಥಿತಿ ತೀರಾ ಹದಗೆಟ್ಟಿದೆ ಎಂದು ಮತ್ತೊಬ್ಬರು ವಿವರಿಸಿದರು.

6 ವರ್ಷದ ಮಗುವಿನೊಂದಿಗೆ ನಿಂತ ತಾಯಿಯೊಬ್ಬರು ‘ನಮಗೆ ಅನ್ನ ನೀರು ಏನೂ ಇಲ್ಲ. ದಯಮಾಡಿ ಕಾಪಾಡಿ’ ಎಂದು ವಾಟ್ಸ್‌ಆ್ಯಪ್‌ ವಿಡಿಯೊದಲ್ಲಿ ಅಂಗಲಾಚಿದರು.

ರಾಜಧಾನಿ ತಿರುವನಂತಪುರದ ಹಲವು ಪೆಟ್ರೋಲ್‌ ಬಂಕ್‌ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪರಿಹಾರ ಕಾರ್ಯಾಚರಣೆಗೆ ತುರ್ತಾಗಿ ಬಳಸಲು ಬಂಕ್‌ಗಳಲ್ಲಿ 3,000 ಲೀಟರ್ ಡೀಸೆಲ್‌ ಮತ್ತು 1,000 ಲೀಟರ್‌ ಪೆಟ್ರೋಲ್‌ ಸಂಗ್ರಹಿಸಿ ಇಡುವಂತೆ ಜಿಲ್ಲಾಡಳಿತ ಸೂಚಿಸಿದೆ.

ಪರಿಹಾರ ಶಿಬಿರದಲ್ಲಿ 2.23 ಲಕ್ಷ ಜನ: ಮಳೆಯಿಂದ ತೊಂದರೆಗೊಳಗಾದ 50 ಸಾವಿರ ಕುಟುಂಬಗಳ 2.23 ಲಕ್ಷಕ್ಕೂ ಹೆಚ್ಚು ಜನರಿಗೆ ಪರಿಹಾರ ಶಿಬಿರಗಳಲ್ಲಿ ತಾತ್ಕಾಲಿಕ ವಸತಿ ಕಲ್ಪಿಸಲಾಗಿದೆ. ಆದರೆ ಅಲ್ಲಿ ಸೂಕ್ತ ಆಹಾರ ಮತ್ತು ನೀರು ಲಭ್ಯವಿಲ್ಲ ಎಂದು ಜನ ದೂರಿದ್ದಾರೆ.

ಅಪಾಯದ ಮಟ್ಟದತ್ತ ಗೋದಾವರಿ
ಹೈದರಾಬಾದ್ ವರದಿ: ಮಳೆಯಿಂದಾಗಿ ತೆಲಂಗಾಣದ ಹಲವು ಭಾಗಗಳು ಜಲಾವೃತವಾಗಿವೆ. ‘ದೇವಾಲಯ ಪಟ್ಟಣ’ ಎಂದೇ ಖ್ಯಾತವಾದ ಭದ್ರಾಚಲಂನಲ್ಲಿ ಗೋದಾವರಿ ನದಿ ಶುಕ್ರವಾರ ಅಪಾಯದ ಮಟ್ಟವನ್ನು ತಲು‍ಪಿದೆ.

ಪಂಜಾಬ್‌ನಿಂದ ಪರಿಹಾರ
ಚಂಡೀಗಡ: 
ಪ್ರವಾಹಪೀಡಿತ ಕೇರಳಕ್ಕೆ ₹10 ಕೋಟಿ ಪರಿಹಾರದ ನೆರವನ್ನು ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಘೋಷಣೆ ಮಾಡಿದ್ದಾರೆ.

₹5 ಕೋಟಿಯನ್ನು ಹಣದ ರೂಪದಲ್ಲಿ ಹಾಗೂ ಇನ್ನುಳಿದ ₹5 ಕೋಟಿಯನ್ನು ಆಹಾರ ಸಾಮಗ್ರಿ ಮತ್ತು ಇತರ ಅಗತ್ಯವಸ್ತುಗಳ ರೂಪದಲ್ಲಿ ನೀಡಲಾಗುವುದು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

‘ಮೊದಲ ಬಾರಿಗೆ 30 ಟನ್‌ ಬಿಸ್ಕತ್ತು, ರಸ್ಕ್‌, ಬಾಟಲಿ ನೀರು, ಹಾಲಿನ ಪುಡಿ ಮುಂತಾದ ಸಿದ್ಧ ಆಹಾರವನ್ನು ಶನಿವಾರ ಕಳುಹಿಸಿಕೊಡಲಾಗುತ್ತದೆ. ಒಂದು ಲಕ್ಷ ಆಹಾರದ ಪೊಟ್ಟಣಗಳನ್ನು ಮೊದಲು ಒದಗಿಸಲಾಗುವುದು. ನಂತರ ಕೇರಳ ಸರ್ಕಾರದ ಬೇಡಿಕೆ ಆಧರಿಸಿ ವಿತರಿಸಲಾಗುತ್ತದೆ’ ಎಂದು ಹೇಳಿಕೆ ತಿಳಿಸಿದೆ.

ತಮಿಳುನಾಡಿನಲ್ಲೂ ಎಚ್ಚರಿಕೆ
ಚೆನ್ನೈ :
ಮಳೆಯಿಂದಾಗಿ ತಮಿಳುನಾಡಿನ ಥೇಣಿ ಮತ್ತು ಮದುರೈ ಜಿಲ್ಲೆಗಳಲ್ಲಿ ಅಪಾಯದ ಎಚ್ಚರಿಕೆ ನೀಡಲಾಗಿದೆ. ಕಾವೇರಿ ಮತ್ತು ಭವಾನಿ ನದಿ ಪಾತ್ರದಲ್ಲಿ ವಾಸವಿರುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಮೆಟ್ಟೂರು ಸೇರಿದಂತೆ ಮೂರು ಅಣೆಕಟ್ಟೆಗಳಿಂದ ಎರಡು ಲಕ್ಷ ಕ್ಯುಸೆಕ್‌ ನೀರನ್ನು ಹೊರಬಿಟ್ಟ ಪರಿಣಾಮವಾಗಿ ನದಿ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾಗಿದೆ.

ತಮಿಳುನಾಡಿನಲ್ಲಿ 8,410 ಜನ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಅಪಾಯದ ಮಟ್ಟದತ್ತ ಗೋದಾವರಿ
ಹೈದರಾಬಾದ್:
ಮಳೆಯಿಂದಾಗಿ ತೆಲಂಗಾಣದ ಹಲವು ಭಾಗಗಳು ಜಲಾವೃತವಾಗಿವೆ. ‘ದೇವಾಲಯ ಪಟ್ಟಣ’ ಎಂದೇ ಖ್ಯಾತವಾದ ಭದ್ರಾಚಲಂನಲ್ಲಿ ಗೋದಾವರಿ ನದಿ ಶುಕ್ರವಾರ ಅಪಾಯದ ಮಟ್ಟವನ್ನು ತಲು‍ಪಿದೆ.

ಪ್ರವಾಹದಲ್ಲಿ ಸಿಲುಕಿದ್ದ ಗರ್ಭಿಣಿ
ಆಲುವಾದಲ್ಲಿ ಮಳೆ ನೀರಿನಲ್ಲಿ ಸಿಲುಕಿದ್ದ ಸಜಿತಾ ಎಂಬ ಗರ್ಭಿಣಿಯನ್ನು ಹಗ್ಗದ ಮೂಲಕ ಮೇಲೆತ್ತಿ, ನೌಕಾಪಡೆ ವಿಮಾನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗರ್ಭಪೊರೆ ಹರಿದು ಅಪಾಯದ ಸ್ಥಿತಿಯಲ್ಲಿದ್ದ ಅವರು ಅಲ್ಲಿ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !