ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣಾ ಕಪೂರ್‌ಗೆ 2 ಕೋಟಿಗೆ ಕಲಾಕೃತಿ ಮಾರಿದ ಪ್ರಿಯಾಂಕಾ ವಾದ್ರಾ: ಬಿಜೆಪಿ ಕಿಡಿ

YES Bank ಬಿಕ್ಕಟ್ಟು
Last Updated 10 ಮಾರ್ಚ್ 2020, 6:43 IST
ಅಕ್ಷರ ಗಾತ್ರ

ನವದೆಹಲಿ: ಯೆಸ್ ಬ್ಯಾಂಕ್ ಸಂಸ್ಥಾಪಕ, ಈಗ ಬಂಧಿತರಾಗಿರುವ ರಾಣಾ ಕಪೂರ್ ಅವರಿಗೆ 2 ಕೋಟಿ ರೂ. ಮೊತ್ತಕ್ಕೆ ಚಿತ್ರಕಲೆಯೊಂದನ್ನು ಮಾರಾಟ ಮಾಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ವಿರುದ್ಧ ಬಿಜೆಪಿ ಕಿಡಿ ಕಾರಿದೆ. ಪ್ರಿಯಾಂಕಾ ಹಾಗೂ ಪತಿ ರಾಬರ್ಟ್ ವಾದ್ರಾರನ್ನು ರಾಜಕೀಯದ 'ಬಂಟಿ ಮತ್ತು ಬಬ್ಲಿ' ಎಂದು ಕರೆದಿರುವ ಬಿಜೆಪಿ, ಬೇರೆಯವರ ಆಸ್ತಿಯ ಮೂಲಕ ಹಣ ಮಾಡುವ ಚಮತ್ಕಾರಿ ಮಾರ್ಗಗಳನ್ನು ಅವರು ಕಂಡುಕೊಂಡಿದ್ದಾರೆ ಎಂದು ಆರೋಪಿಸಿದೆ.

ಆದರೆ, ಬಿಜೆಪಿ ಆರೋಪವನ್ನು ಕಾಂಗ್ರೆಸ್ ಸಾರಾಸಗಟಾಗಿ ನಿರಾಕರಿಸಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಅವರು ಚೆಕ್ ಮೂಲಕವೇ ಹಣ (2 ಕೋಟಿ ರೂ.) ಪಡೆದಿದ್ದಾರೆ ಮತ್ತು ಅದನ್ನು 2010ರ ಆದಾಯ ತೆರಿಗೆ ದಾಖಲೆಗಳಲ್ಲಿಯೂ ನಮೂದಿಸಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ರಾಬರ್ಟ್ ವಾದ್ರಾ ನಿಗೂಢವಾದ ರಿಯಲ್ ಎಸ್ಟೇಟ್ ವಹಿವಾಟುಗಳಲ್ಲಿ ಭರ್ಜರಿ ಲಾಭ ಮಾಡಿಕೊಳ್ಳಲು ಸಂದೇಹಾಸ್ಪದ ವಿಧಾನಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್.ನರಸಿಂಹ ರಾವ್ ಆರೋಪಿಸಿದ್ದಾರೆ. "ಖಾಸಗಿ ಲಾಭಗಳಿಗಾಗಿ" ತಮ್ಮ ರಾಜಕೀಯ ಶಕ್ತಿಯನ್ನು ಈ ಪ್ರಭಾವಿ ದಂಪತಿ ಬಳಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ತನ್ನದಲ್ಲದ ಚಿತ್ರ ಕಲಾಕೃತಿಗಾಗಿ ಪ್ರಿಯಾಂಕಾ ಅವರು 2 ಕೋಟಿ ಸ್ವೀಕರಿಸಿದ ವರದಿಯೇ ಸಾಕ್ಷಿ ಎಂದು ಅವರು ಹೇಳಿದ್ದಾರೆ.

ಹಣಕಾಸು ಅಕ್ರಮಗಳು, ವಂಚನೆಗಳಲ್ಲಿ ಭಾಗಿಯಾಗಿರುವವರಿಗೆ ಆಶ್ರಯವನ್ನೂ, ರಕ್ಷಣೆಯನ್ನೂ ನೀಡುವುದಕ್ಕಾಗಿ ಅವರು ಡೀಲ್ ಮಾಡುತ್ತಿದ್ದಾರೆ. ವಾದ್ರಾ ದಂಪತಿಯನ್ನು ಅವರ ವಂಚಕ ಕೃತ್ಯಗಳು ಮತ್ತು ಪ್ರಶ್ನಾರ್ಹ ವಿಧಾನಗಳಿಗಾಗಿ ರಾಜಕಾರಣದ 'ಬಂಟಿ ಮತ್ತು ಬಬ್ಲಿ' ಎಂದು ಕರೆಯಬಹುದಾಗಿದೆ ಎಂದು ಬಿಜೆಪಿ ವಕ್ತಾರ ಆರೋಪಿಸಿದ್ದಾರೆ.

ಬಂಟಿ ಮತ್ತು ಬಬ್ಲಿ ಎಂಬುದು ಜನರಿಗೆ ವಂಚಿಸುತ್ತಾ ಲಾಭ ಮಾಡುವ, ಹಿಂದಿ ಚಲನಚಿತ್ರವೊಂದರ ಜೋಡಿ ಪಾತ್ರಗಳಾಗಿವೆ.

ಕಾಂಗ್ರೆಸ್ ನೇತೃತ್ವದಲ್ಲಿರುವ ರಾಜ್ಯ ಹಾಗೂ ಹಿಂದಿನ ಕೇಂದ್ರ ಸರ್ಕಾರಗಳಲ್ಲಿನ ಲಂಗುಲಗಾಮಿಲ್ಲದ ಭ್ರಷ್ಟ ಮಾರ್ಗಗಳಿಂದಷ್ಟೇ ಅಲ್ಲದೆ, ಪ್ರತಿಯೊಂದು ಖಾಸಗಿ ಆಸ್ತಿಗಳಲ್ಲಿ ಭ್ರಷ್ಟ ಮತ್ತು ಸಂದೇಹಾಸ್ಪದ ಮಾರ್ಗಗಳ ಮೂಲಕ ಲಾಭ ಸಂಪಾದಿಸುವ ಕಾರ್ಯದಲ್ಲಿ ಕಾಂಗ್ರೆಸ್‌ನ ಈ ಮೊದಲ ಕುಟುಂಬವು ನಿರತವಾಗಿದೆ. ಚಿತ್ರ ಕಲಾಕೃತಿ ಮಾರಾಟದ ಹೆಸರಿನ 'ಪೇಂಟಿಂಗ್ ಲಾಂಡರಿಂಗ್' ವಿಧಾನವಿದು ಎಂದು ರಾಜ್ಯಸಭಾ ಸದಸ್ಯರೂ ಆಗಿರುವ ನರಸಿಂಹ ರಾವ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷವು ದೇಶದ ಪ್ರತಿಯೊಬ್ಬ ಹಣಕಾಸು ವಂಚಕರೊಂದಿಗೆ ಸಕ್ರಿಯವಾಗಿ ಸೇರಿಕೊಂಡಿದೆ ಮತ್ತು ಪ್ರಿಯಾಂಕಾ ಅವರು ಅನಗತ್ಯವಾಗಿ ಹಣಕಾಸು ಲಾಭ ಪಡೆದುಕೊಂಡಿರುವುದರಿಂದ, ಯೆಸ್ ಬ್ಯಾಂಕ್ ವಂಚನೆಯಲ್ಲಿಯೂ ಪಕ್ಷಕ್ಕೆ ಸಂಬಂಧವಿದೆ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ ಅವರು.

ಆದರೆ ಕಾಂಗ್ರೆಸ್ ಪಕ್ಷವು ಈ ಆರೋಪವನ್ನು ನಿರಾಕರಿಸಿದೆ.

ಹತ್ತು ವರ್ಷಗಳ ಹಿಂದೆ ಎಂ.ಎಫ್.ಹುಸೇನ್ ಅವರು ರಚಿಸಿದ ರಾಜೀವ್ ಗಾಂಧಿಯವರ ಚಿತ್ರ ಕಲಾಕೃತಿಯೊಂದನ್ನು ಯೆಸ್ ಬ್ಯಾಂಕ್ ಮಾಲೀಕ ರಾಣಾ ಕಪೂರ್‌ಗೆ ಮಾರಾಟ ಮಾಡಿರುವುದು ಮತ್ತು ಅದನ್ನು ತೆರಿಗೆ ರಿಟರ್ನ್ಸ್ ವೇಳೆಯೂ ದಾಖಲು ಮಾಡಿರುವುದಕ್ಕೂ ಮೋದಿ ಸರ್ಕಾರವು ಐದು ವರ್ಷಗಳಲ್ಲಿ 2,00,000 ಕೋಟಿ ರೂ. ಸಾಲಗಳನ್ನು ವಿತರಿಸಿರುವುದಕ್ಕೂ ಏನು ಸಂಬಂಧ ಎಂದು ಕಾಂಗ್ರಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT