ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಎಂ ಹುದ್ದೆ: ಲಿಂಗಾಯತ ಶಾಸಕರ ಎಚ್ಚರಿಕೆ

Last Updated 22 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಪಕ್ಷದ ಒಬ್ಬರು ಉಪ ಮುಖ್ಯಮಂತ್ರಿ (ಡಿಸಿಎಂ) ಆಗಿ ಪ್ರಮಾಣ ವಚನ ಸ್ವೀಕರಿಸಬೇಕು’ ಎಂದು ಕಾಂಗ್ರೆಸ್‌ ವರಿಷ್ಠರು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ.

‘ಸದ್ಯ ಒಂದು ಡಿಸಿಎಂ ಹುದ್ದೆಗೆ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಇನ್ನೊಂದು ಸ್ಥಾನ ನೀಡುವ ಬಗ್ಗೆ ನಂತರ ನಿರ್ಧರಿಸಲಿದ್ದಾರೆ. ಕುಮಾರಸ್ವಾಮಿ ಒಬ್ಬರನ್ನೇ ಪ್ರಮಾಣ ವಚನ ತೆಗೆದುಕೊಳ್ಳಲು ಬಿಡಬಾರದು. ಪಕ್ಷದ ಕಡೆಯಿಂದಲೂ ಯಾರಾದರೂ ಒಬ್ಬರು ಪ್ರಮಾಣ ವಚನ ಪಡೆಯಬೇಕು’ ಎಂದು ವರಿಷ್ಠರು ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

‘ಉತ್ತರ ಕರ್ನಾಟಕ ಭಾಗಕ್ಕೆ ಡಿಸಿಎಂ ಹುದ್ದೆ ಕೊಡದಿದ್ದರೆ ಅನ್ಯಾಯ ಮಾಡಿದಂತಾಗುತ್ತದೆ. ಈ ಪ್ರದೇಶ ಈಗಾಗಲೇ ಅನೇಕ ವಿಷಯಗಳಲ್ಲಿ ತಾರತಮ್ಯ ಎದುರಿಸುತ್ತಿದೆ. ಅಷ್ಟೇ ಅಲ್ಲದೆ, ದಕ್ಷಿಣ ಕರ್ನಾಟಕದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದೆ. ಇದನ್ನು ಸರಿದೂಗಿಸಿ ಕಾಂಗ್ರೆಸ್‌ ಪಕ್ಷವನ್ನು ಬೆಳೆಸದಿದ್ದರೆ ಉತ್ತರ ಪ್ರದೇಶ ಮತ್ತು ಬಿಹಾರ ಮಾದರಿಯಲ್ಲಿ ರಾಜಕೀಯ ಆದೀತು’ ಎಂದು ಲಿಂಗಾಯತ ಶಾಸಕರು ಕಾಂಗ್ರೆಸ್‌ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದಾರೆ.‌

‘ಈ ಸರ್ಕಾರ ಎಷ್ಟು ದಿನ ಇರುತ್ತದೆ ಎಂಬುದು ಯಾರಿಗೂ ತಿಳಿಯದು. ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆ ವೇಳೆಗೆ ಈ ವಿಷಯದಲ್ಲಿ ಪಕ್ಷಕ್ಕೆ ನ್ಯಾಯ ಒದಗಿಸಬೇಕೆಂದರೆ, ಉತ್ತರ ಕರ್ನಾಟಕಕ್ಕೆ ಡಿಸಿಎಂ ಹುದ್ದೆ ಕೊಡಲೇಬೇಕು. ಈ ಹುದ್ದೆಯನ್ನು ಶಾಮನೂರು ಶಿವಶಂಕರಪ್ಪನವರಿಗೇ ಕೊಡಲಿ ಅಥವಾ ಎಂ.ಬಿ. ಪಾಟೀಲರಿಗೇ ಕೊಡಲಿ ನಮ್ಮದೇನೂ ತಕರಾರಿಲ್ಲ. ಆದರೆ, ಕೊಡದೇ ಹೋದರೆ ಕಾಂಗ್ರೆಸ್‌ ಪಕ್ಷವನ್ನು ಜೆಡಿಎಸ್‌– ಬಿಜೆಪಿ ಮುಳುಗಿಸಿಬಿಡುವ ಸಾಧ್ಯತೆ ಇದೆ’ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

‘ಇದು ಅಧಿಕಾರದ ಹಪಾಹಪಿಯಲ್ಲ. ಪಕ್ಷದ ಅಳಿವು ಉಳಿವಿನ ಪ್ರಶ್ನೆ. ಮತ್ತೆ ನಾವು ಬಲವರ್ಧನೆ ಮಾಡಿಕೊಳ್ಳದಿದ್ದರೆ ಭಾರಿ ಸಂಕಷ್ಟಕ್ಕೆ ಈಡಾಗುತ್ತೇವೆ. ದಕ್ಷಿಣಕ್ಕೆ ಜೆಡಿಎಸ್‌, ಉತ್ತರಕ್ಕೆ ಬಿಜೆಪಿ ಎಂದಾದರೆ, ಕಾಂಗ್ರೆಸ್‌ಗೆ ಯಾರೂ ನಾಯಕರು ಇಲ್ಲದಂತಾಗುತ್ತದೆ’ ಎಂದೂ ಹೇಳಿದ್ದಾರೆ.

‘ಮತ್ತೊಬ್ಬ ಸಂಪುಟ ಸಚಿವರಷ್ಟೆ’

ಬೆಂಗಳೂರು: ‘ಉಪ ಮುಖ್ಯಮಂತ್ರಿ ಹುದ್ದೆಗೆ ಸಾಂವಿಧಾನಿಕ ಮಾನ್ಯತೆ ಇಲ್ಲವಾದರೂ ಇದೊಂದು ಪದ್ಧತಿಯಾಗಿ ಮುಂದುವರಿಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ದೊಡ್ಡದಾದಂತೆಲ್ಲಾ ಈ ರೀತಿಯ ಬೆಳವಣಿಗೆ ಸಹಜ’ ಎಂಬುದು ಕಾನೂನು ತಜ್ಞರ ಅಭಿಪ್ರಾಯ.

‘ಡಿಸಿಎಂ ಹುದ್ದೆ ಸಂವಿಧಾನದಲ್ಲಿ ಎಲ್ಲೂ ಇಲ್ಲ. ಆದರೂ ಇದನ್ನು ಈಗಾಗಲೇ ಬೇರೆಯವರೂ ಮಾಡಿರುವುದರಿಂದ ಈಗಲೂ ಮುಂದುವರಿದಿದೆ. ಆದರೆ, ಇದಕ್ಕೆ ಕಾನೂನಿನಲ್ಲಿ ಎಲ್ಲೂ ನಿರ್ಬಂಧವಿಲ್ಲ’ ಎಂಬುದು ಹೈಕೋರ್ಟ್‌ನ ಹಿರಿಯ ವಕೀಲ ಉದಯ ಹೊಳ್ಳ ಅವರ ಅಭಿಮತ.

‘ಡಿಸಿಎಂ ಹುದ್ದೆ ಎಂಬುದು ಹೆಸರಿಗೆ ಮಾತ್ರವೇ ಇರುತ್ತದೆ. ಅವರು ಕೂಡ ಇನ್ನೊಬ್ಬ ಸಂಪುಟ ದರ್ಜೆ ಸಚಿವರಷ್ಟೇ’ ಎಂಬುದು ಮತ್ತೊಬ್ಬ ಹಿರಿಯ ವಕೀಲ ಎಸ್‌.ಎಸ್‌.ನಾಗಾನಂದ ಅವರ ಅಭಿಪ್ರಾಯ.

‘ಡಿಸಿಎಂ, ಮುಖ್ಯಮಂತ್ರಿಗೆ ಸಹಾಯ ಮಾಡುವವರೇ ವಿನಾ ಮಂತ್ರಿಗಳ ನೇಮಕ ಅಥವಾ ಇನ್ಯಾವುದೇ ಸಾಂವಿಧಾನಿಕ ಅಧಿಕಾರ ಹೊಂದಿರುವುದಿಲ್ಲ. ಹೆಚ್ಚುವರಿ ಅಡ್ವೊಕೇಟ್‌ ಜನರಲ್‌, ಹೆಚ್ಚುವರಿ ಸಾಲಿಸಿಟರ್ ಜನರಲ್‌ ಹಾಗೂ ಸಹಾಯಕ ಸಾಲಿಸಿಟರ್ ಜನರಲ್‌ ಹುದ್ದೆಯಂತೆಯೇ ಇದೂ ಕೂಡ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT