ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳಬಂಧಕ ಚಿಕಿತ್ಸೆ ಅರಿಯಬೇಕಾದ ಅಂಶಗಳು...

Last Updated 20 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಪುರುಷರ ಸಂತಾನಹರಣ ಚಿಕಿತ್ಸೆಯಾದ ‘ವಾಸೆಕ್ಟಮಿ’ ಪರಿಚಿತಗೊಂಡು ಹಲವು ವರ್ಷಗಳೇ ಕಳೆದಿವೆ. ಆದರೆ ಅದರ ಬಗೆಗೆ ಸ್ಪಷ್ಟ ಅರಿವು ಮೂಡುವ ಅವಶ್ಯಕತೆ ಇಂದಿಗೂ ಇದೆ. ಮೊದಲನೆಯದಾಗಿ, ವೀರ್ಯವು ಸ್ಖಲನಗೊಳ್ಳದಂತೆ ತಡೆಯುವ ಈ ಶಸ್ತ್ರಚಿಕಿತ್ಸೆಯ ನಂತರವೂ ಪುರುಷರ ಲೈಂಗಿಕ ಜೀವನದಲ್ಲಿ ಯಾವುದೇ ತೊಂದರೆಗಳು ಎದುರಾಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕಿದೆ.

ಗರ್ಭಧಾರಣೆ ತಡೆಯುವಲ್ಲಿ ಇದು ಶೇ 100ರಷ್ಟು ಪರಿಣಾಮಕಾರಿ. ಆದರೆ ಕೆಲವು ಅಪರೂಪದ ಪ್ರಕರಣಗಳಲ್ಲಿ, ಬಂಧಿಸಲಾದ, ಪುರುಷರ ಸಂತಾನೋತ್ಪತ್ತಿಗೆ ಅನುವಾಗುವ ನಾಳ – ವಾಸ್ ಡೆಫೆರೆನ್ಸ್ ಮತ್ತೆ ಸೇರಿಕೊಳ್ಳಬಹುದು. ಆಗ ಗರ್ಭಧಾರಣೆಯ ಸಾಧ್ಯತೆಯೂ ಇರುತ್ತದೆ. ಜೊತೆಗೆ, ವ್ಯಾಸೆಕ್ಟಮಿ ನಂತರವೂ, ಸ್ವಲ್ಪ ಮಟ್ಟದಲ್ಲಿ ವೀರ್ಯಸ್ಖಲನ ಆಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆವರೆಗೂ ಗರ್ಭನಿರೋಧಕ ಬಳಸಲು ವೈದ್ಯರು ಸೂಚಿಸುತ್ತಾರೆ.

ಪ್ರಕ್ರಿಯೆ ಹೀಗಿದೆ: ವಾಸೆಕ್ಟಮಿ ಚಿಕಿತ್ಸೆಯಲ್ಲಿ, ವೃಷಣಕೋಶದ ಮೇಲ್ಭಾಗವನ್ನು ಸ್ವಲ್ಪ ಕತ್ತರಿಸಿ ವಾಸ್ ಡೆಫೆರೆನ್ಸ್ ನಾಳವನ್ನು ಬಂದ್ ಮಾಡುತ್ತಾರೆ. ಕೆಲವು ಪುರುಷರು ‘ನೊ ಸ್ಕಾಲ್ಪೆಲ್’ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ. ಇದರಲ್ಲಿ, ಸಣ್ಣ ರಂಧ್ರಗಳ ಮೂಲಕ ಶಸ್ತ್ರಚಿಕಿತ್ಸೆ ಸಾಧ್ಯವಾಗುತ್ತದೆ. ಹೊಲಿಗೆಯ ಅವಶ್ಯಕತೆಯೂ ಇರುವುದಿಲ್ಲ.

ಶಸ್ತ್ರಚಿಕಿತ್ಸೆ ನಡೆದ ಕೆಲವು ದಿನಗಳ ನಂತರ ನೋವು ಇರುತ್ತದೆ. ಒಂದು ದಿನದ ಸಂಪೂರ್ಣ ವಿಶ್ರಾಂತಿ ಅಗತ್ಯವಿರುತ್ತದೆ. ಎಷ್ಟೋ ಪುರುಷರು ಶುಕ್ರವಾರ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸೋಮವಾರ ಕೆಲಸಕ್ಕೆ ಹೋಗುತ್ತಾರೆ. ಅದು ಅಷ್ಟು ಸರಳವಾಗಿರುತ್ತದೆ.

ವ್ಯಾಸಕ್ಟಮಿ ನಂತರ ಯಾವಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಹುದು?: ಕೆಲವು ವಾರಗಳ ಬಿಡುವು ಅತ್ಯಗತ್ಯ. ಅಲ್ಲಿಯವರೆಗೂ ಗರ್ಭನಿರೋಧಕಗಳನ್ನು ಬಳಸುವುದು ಸೂಕ್ತ. ವೀರ್ಯಸ್ಖಲನ ನಿಲ್ಲುವುದು ಪರೀಕ್ಷೆಯಿಂದ ಸಾಬೀತಾಗುವವರೆಗೂ ಗರ್ಭನಿರೋಧಕವನ್ನು ಬಳಸಬೇಕು.

‌ರೇತಸ್ಸಿನಲ್ಲಿ ವೀರ್ಯವು ಇನ್ನೂ ಇದೆ ಎಂದು ಫಲಿತಾಂಶ ತೋರಿದರೆ, ಇನ್ನೂ ಕೆಲವು ದಿನಗಳ ಪರೀಕ್ಷೆ ಅಗತ್ಯ ಇದೆ ಎನ್ನುತ್ತಾರೆ ವೈದ್ಯರು. ಶಸ್ತ್ರಚಿಕಿತ್ಸೆ ನಂತರ ಹತ್ತರಿಂದ ಹನ್ನೆರಡು ಬಾರಿ ಸ್ಖಲನಗೊಳ್ಳುವುದು ಸಹಜ. ಪರೀಕ್ಷೆಯಿಂದಷ್ಟೇ ನಿಖರತೆ ಸಾಧ್ಯ.

ಶಸ್ತ್ರಚಿಕಿತ್ಸೆಯನ್ನೇನೋ ಮಾಡಿಸಿಕೊಂಡಾಯಿತು. ಆದರೆ ಮನಸ್ಸು ಬದಲಾಯಿಸಿ, ಮತ್ತೆ ಮಗು ಬೇಕು ಎಂದನ್ನಿಸಿದರೆ ಏನು ಮಾಡಬಹುದು? ಮತ್ತೆ ಸ್ಖಲನ ಸಾಧ್ಯವಾಗುವಂತೆ ಮಾಡಬಹುದೇ? ಈ ಪ್ರಶ್ನೆಗಳು ಎಷ್ಟೋ ಪುರುಷರಲ್ಲಿ ಹುಟ್ಟಿಕೊಳ್ಳುತ್ತವೆ. ಕೆಲವು ಪ್ರಕರಣಗಳಲ್ಲಿ ಅದು ಸಾಧ್ಯವಾಗಿದೆ ಕೂಡ. ಆದರೆ ಅದು ಸುಲಭವಿಲ್ಲ ಹಾಗೂ ಎಲ್ಲ ಸಮಯದಲ್ಲೂ ಸಾಧ್ಯವಿಲ್ಲ. ಆದ್ದರಿಂದ ಈ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಂಡ ಮೇಲಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ಒಳಿತು.

ಅಡ್ಡ ಪರಿಣಾಮಗಳು ಇವೆಯೇ?: ಈ ಪ್ರಕ್ರಿಯೆ ಸುರಕ್ಷಿತವಾಗಿರುತ್ತದೆ. ಹಾಗಿದ್ದರೂ ಕೆಲವೊಮ್ಮೆ ಊತ, ಉರಿ, ತುರಿಕೆಗಳು ಉಂಟಾಗುತ್ತವೆ. ಅವೇನೂ ಗಂಭೀರ ಮಟ್ಟಕ್ಕೆ ಹೋಗುವುದಿಲ್ಲ. ಆದರೆ ಅಂಥ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಟೆಸ್ಟೊಸ್ಟೆರೋನ್ ಮಟ್ಟ, ನಿಮಿರುವಿಕೆ, ಲೈಂಗಿಕ ಸುಖದ ಪರಾಕಾಷ್ಠೆಗೆ ಯಾವುದೇ ಅಡ್ಡಿ ಮಾಡುವುದಿಲ್ಲ. ಲೈಂಗಿಕ ಜೀವನದ ಮೇಲೂ ಯಾವುದೇ ಪರಿಣಾಮ ಬೀರುವುದಿಲ್ಲ.

ನಾಳದ ಬಂಧಕಗಳು
ಪುರುಷರಿಗೆ ವ್ಯಾಸೆಕ್ಟಮಿ ಇದ್ದ ಹಾಗೆ ಮಹಿಳೆಯರಿಗೆ ಗರ್ಭಧರಿಸದೇ ಇರುವಂತೆ ತಡೆಯಲು ಟ್ಯೂಬಲ್ ಲಿಗೇಷನ್ (ನಾಳದ ಬಂಧಕ) ಶಸ್ತ್ರಚಿಕಿತ್ಸೆ ಇದೆ. ಅಂದರೆ, ಗರ್ಭಧಾರಣೆಗೆ ಅನುವು ಮಾಡಿಕೊಡುವ ‌ಡಿಂಬನಾಳಗಳ‌ನ್ನು ಬಂಧಿಸುವುದು. ಅಂಡಾಶಯದಿಂದ ಗರ್ಭಾಶಯಕ್ಕೆ ಅಂಡಾಣುಗಳು ಚಲಿಸುವುದನ್ನು ತಡೆಯುವುದು ಈ ಶಸ್ತ್ರಚಿಕಿತ್ಸೆಯ ಮುಖ್ಯ ಉದ್ದೇಶ.

ಅರವಳಿಕೆ ಮದ್ದು ಕೊಟ್ಟು ಈ ಶಸ್ತ್ರಚಿಕಿತ್ಸೆಯನ್ನು ನಡೆಸುವುದರಿಂದ ನೋವು ಅನುಭವಕ್ಕೆ ಬರದು. ಹೊಕ್ಕಳದ ಬಳಿ ಒಂದು ಅಥವಾ ಎರಡು ಕಡೆ ಚಿಕ್ಕದಾಗಿ ಕತ್ತರಿಸಲಾಗುತ್ತದೆ. ಉದ್ದದ ಹಾಗೂ ತೆಳುವಾದ ಲ್ಯಾಪೆರೋಸ್ಕೋಪ್‌ ಬಳಸಿ ಡಿಂಬನಾಳಗಳನ್ನು ಹಿಡಿದು, ಕಟ್ಟಲಾಗುತ್ತದೆ. ಇದೇನು ದಿನವಿಡೀ ಹಿಡಿಯುವ ಚಿಕಿತ್ಸೆಯಲ್ಲ; ಕೆಲವೇ ಗಂಟೆಗಳ ನಂತರ ಮನೆಗೆ ಹೊರಡಬಹುದು. ಇನ್ನಿತರ ಪ್ರಕ್ರಿಯೆಯಂತೆ, ಇದರಲ್ಲೂ ಸೋಂಕಿನ, ರಕ್ತಸ್ರಾವದ ಹಾಗೂ ನೋವಿನ ಸಾಧ್ಯತೆ ಇರುತ್ತದೆ.

ಎಷ್ಟು ಪರಿಣಾಮಕಾರಿ?
ಟ್ಯೂಬಲ್ ಲಿಗೇಶನ್ ಹಾಗೂ ಟ್ಯೂಬಲ್ ಇಂಪ್ಲಾಂಟ್‌ಗಳು ಶೇ 100ರಷ್ಟು ಪರಿಣಾಮಕಾರಿ. ಆದರೆ ಶಸ್ತ್ರಚಿಕಿತ್ಸೆ ನಂತರವೂ ಗರ್ಭ ಧರಿಸುವ ಸಾಧ್ಯತೆ ಸ್ವಲ್ಪ ಮಟ್ಟದಲ್ಲಿ ಇರುತ್ತದೆ. ಈ ನಾಳಗಳು ಮತ್ತೆ ಬೆಳೆದಿದ್ದರೆ ಹೀಗಾಗುತ್ತದೆ. ಅಂಥ ಪ್ರಕರಣಗಳು ಅಪರೂಪವಷ್ಟೆ.

ಮತ್ತೆ ನಾಳ ಜೋಡಣೆ ಸಾಧ್ಯವೇ?: ಕೆಲವು ಪ್ರಕರಣಗಳಲ್ಲಿ ಇದು ಸಾಧ್ಯವಿದೆ. ಆದರೆ ಮತ್ತೆ ಜೋಡಿಸುವುದು ಅತಿ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ. ಆದರೆ ಯಾವ ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಿರಿ, ಎಷ್ಟು ದಿನಗಳ ಹಿಂದೆ ಚಿಕಿತ್ಸೆ ನಡೆದಿತ್ತು, ಈಗ ನಾಳಗಳ ಪರಿಸ್ಥಿತಿ ಹೇಗಿದೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ.‌

ಆದರೆ ಪುನರ್ ಜೋಡಣೆಯ ಚಿಕಿತ್ಸೆಯಿಂದ ಎಕ್ಟೋಪಿಕ್ ಪ್ರೆಗ್ನನ್ಸಿ (ಅಪಸ್ಥಾನೀಯ ಗರ್ಭಧಾರಣೆ – ಗರ್ಭಕೋಶದ ಹೊರಗೆ ಅಂಡಾಣು ಫಲಿತಗೊಳ್ಳುವುದು) ಸಾಧ್ಯತೆಯೂ ಹೆಚ್ಚಿರುತ್ತದೆ. ಫಲಿತ ಅಂಡಾಣುವು ಗರ್ಭಾಶಯದಲ್ಲಿ ಇರುವ ಬದಲು ಡಿಂಬನಾಳದಲ್ಲಿ ಇದ್ದರೆ ಹೀಗಾಗುತ್ತದೆ ಹಾಗೂ ಇದು ಮಾರಣಾಂತಿಕ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಈ ಚಿಕಿತ್ಸೆ ಗರ್ಭಧಾರಣೆ ತಡೆಯುತ್ತದೆ ಎಂದಾದರೆ, ಲೈಂಗಿಕವಾಗಿ ಹರಡಬಲ್ಲ ಸೋಂಕನ್ನು ತಡೆಯಬಹುದಲ್ಲವೇ ಎಂಬ ಪ್ರಶ್ನೆಯೂ ಕೇಳಿಬಂದಿತ್ತು. ಇದಕ್ಕೆ ‘ಇಲ್ಲ’ ಎಂಬುದೇ ಉತ್ತರ. ಈ ಪ್ರಕ್ರಿಯೆ ಗರ್ಭಧಾರಣೆ ತಡೆಯಲಷ್ಟೆ. ಲೈಂಗಿಕವಾಗಿ ಹರಡಬಲ್ಲ ಯಾವುದೇ ರೋಗದ ತಡೆಗೆ ಇದು ಸಹಾಯ ಮಾಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT