ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟದ ನೆಲದಲ್ಲಿ ತೀರದ ಬಂಡಾಯ

‘ಕೂಲಿ’ ಕೇಳುತ್ತಿದೆ ಕಾಂಗ್ರೆಸ್‌; ಆಶ್ವಾಸನೆ ಪಟ್ಟಿ ಮುಂದಿಡುತ್ತಿವೆ ಬಿಜೆಪಿ, ಜೆಡಿಎಸ್‌
Last Updated 7 ಮೇ 2018, 19:30 IST
ಅಕ್ಷರ ಗಾತ್ರ

ಜಿಲ್ಲೆಯಾದ ಎರಡು ದಶಕಗಳ ಬಳಿಕವೂ ಸಮಗ್ರ ಅಭಿವೃದ್ಧಿ ಮತ್ತು ರಾಜಕಾರಣದಲ್ಲಿ ಸ್ವತಂತ್ರ ಛಾಪು ಮೂಡಿಲ್ಲ. ಬಿಜೆಪಿಯು ಶಿವಮೊಗ್ಗ (ಬಿ.ಎಸ್.ಯಡಿಯೂರಪ್ಪ) ಕೇಂದ್ರೀಕೃತವಾಗಿದ್ದರೆ, ಕಾಂಗ್ರೆಸ್ಸಿಗರು ಗದುಗಿಗೆ (ಎಚ್.ಕೆ. ಪಾಟೀಲ್) ಹಾಗೂ ಜೆಡಿಎಸ್ ಮುಖಂಡರು ಹುಬ್ಬಳ್ಳಿಗೆ (ಬಸವರಾಜ ಹೊರಟ್ಟಿ) ದೌಡಾಯಿಸುತ್ತಾರೆ.

ಅಹಿಂದ ಚಳವಳಿ, ಕೆಜೆಪಿಯ ಹುಟ್ಟು, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಾಜ್ಯ ಸಮಾವೇಶಗಳಿಗೆ ಸಾಕ್ಷಿಯಾದ ಈ ನೆಲದಲ್ಲಿ ಬಂಡಾಯವು ರಕ್ತಗತವಾದಂತಿದೆ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ, ಎಲ್ಲರನ್ನೂ ಜೊತೆಗೆ ಕರೆದೊಯ್ಯುವ ಸ್ಥಳೀಯ ನಾಯಕರ ಕೊರತೆ ಎಲ್ಲ ಪಕ್ಷದಲ್ಲೂ ಎದ್ದು ಕಾಣುತ್ತಿದ್ದು, ಈ ಸಲದ ಚುನಾವಣೆಯಲ್ಲಿ ತುಸು ಹೆಚ್ಚು ಎನ್ನುವಷ್ಟೇ ಬಂಡಾಯದ ನೆರಳಿದೆ.

ಶಿಗ್ಗಾವಿಯಲ್ಲಿ ಬಿಜೆಪಿಯ ಸೋಮಣ್ಣ ಬೇವಿನಮರದ ಮತ್ತು ರಾಣೆಬೆನ್ನೂರಿನಲ್ಲಿ ಕಾಂಗ್ರೆಸ್‌ನ ರುಕ್ಮಿಣಿ ಸಾವುಕಾರ್ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದಾರೆ. ಹಾನಗಲ್‌ನಲ್ಲಿ ಟಿಕೆಟ್‌ ಕೈ ತಪ್ಪಿದ ಕಾಂಗ್ರೆಸ್ ಶಾಸಕ ಮನೋಹರ ತಹಸೀಲ್ದಾರ್‌ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿ, ವಾಪಸ್ ಪಡೆದಿದ್ದಾರೆ. ಅಲ್ಲದೆ, ಏಳು ಮಂದಿ ಟಿಕೆಟ್ ಆಕಾಂಕ್ಷಿಗಳ ಪೈಕಿ, ಚಂದ್ರಪ್ಪ ಜಾಲಗಾರ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ.

ಬ್ಯಾಡಗಿಯಲ್ಲಿ ಕಾಂಗ್ರೆಸ್ ಶಾಸಕ ಬಸವರಾಜ ಶಿವಣ್ಣನವರಿಗೆ ಟಿಕೆಟ್‌ ತಪ್ಪಿದೆ. ಹಾವೇರಿಯಲ್ಲಿ 12 ಹೊಸ ಆಕಾಂಕ್ಷಿಗಳ ಪೈಕಿ ಒಬ್ಬರಿಗೆ ಟಿಕೆಟ್ ನೀಡಿ ಎಂಬ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ ಮನವಿ ಬಳಿಕವೂ, ಮಾಜಿ ಶಾಸಕ ನೆಹರು ಓಲೇಕಾರ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ ಬಂಡಾಯ ಅಭ್ಯರ್ಥಿಗಳು ಹಿರೇಕೆರೂರ, ಬ್ಯಾಡಗಿ, ಹಾನಗಲ್‌ನಲ್ಲಿ ಕಣಕ್ಕಿಳಿದಿದ್ದಾರೆ. ಬಂಡಾಯದ ಒಳಬೇಗುದಿಯ ನಡುವೆಯೇ ಕಾಂಗ್ರೆಸ್ ತನ್ನ ಅಭಿವೃದ್ಧಿ ‘ಕೆಲಸ’ಕ್ಕೆ ಮತ ರೂಪದ ‘ಕೂಲಿ’ ಕೇಳುತ್ತಿದ್ದರೆ; ಬಿಜೆಪಿ ಮತ್ತು ಜೆಡಿಎಸ್ ರಾಜ್ಯ ಸರ್ಕಾರದ ವೈಫಲ್ಯ ಹಾಗೂ ತಮ್ಮ ಆಶ್ವಾಸನೆಗಳ ಪಟ್ಟಿಯನ್ನು ಮುಂದಿಡುತ್ತಿವೆ.

ಹಾನಗಲ್‌ನಲ್ಲಿ 1983ರಿಂದ 2013ರ ತನಕ ಸಿ.ಎಂ. ಉದಾಸಿ ಹಾಗೂ ಮನೋಹರ ತಹಸೀಲ್ದಾರ್ ಪ್ರತಿಸ್ಪರ್ಧಿಗಳು. ಆದರೆ, ಈ ಬಾರಿ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಉದಾಸಿ ವಿರುದ್ಧ ‘ಯುವ’ ಮತ್ತು ‘ಜಾತ್ಯತೀತ’ ಮತಗಳ ಟ್ರಂಪ್ ಕಾರ್ಡ್ ಬಿಡಲಾಗಿದೆ. ಜೆಡಿಎಸ್ ಅಭ್ಯರ್ಥಿ ಬೊಮ್ಮನಹಳ್ಳಿ ಬಾಬು (ಪಿ.ಎಸ್.ಅಯೂಬ್) ಆಕರ್ಷಣೆಯ ಕೇಂದ್ರವಾಗಿದ್ದಾರೆ.

‘ಮುಜರಾಯಿ ಸಚಿವರು ಗೆಲ್ಲುವುದಿಲ್ಲ’ ಎಂಬ ಮಾತನ್ನು ಪ್ರಬುದ್ಧ ಜನ ಸುಳ್ಳು ಮಾಡಲಿದ್ದಾರೆ’ ಎಂಬುದು ಹಾವೇರಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ ಅವರ ನಂಬಿಕೆ. ಬಿಜೆಪಿಯ ನೆಹರು ಓಲೇಕಾರ ಚುನಾವಣಾ ಪ್ರಚಾರಕ್ಕಿಂತ, ಟಿಕೆಟ್‌ ಪಡೆಯಲು ಹೆಚ್ಚು ತ್ರಾಸ ಪಟ್ಟಿದ್ದರು. ಮತದಾರರು, ಓಲೇಕಾರ (2008–13) ಮತ್ತು ಲಮಾಣಿ (2013–18) ಅವಧಿಯ ಅಭಿವೃದ್ಧಿಯನ್ನು ತುಲನೆ ಮಾಡಿ ನೋಡುತ್ತಿದ್ದಾರೆ. ಜೆಡಿಎಸ್‌ನ ಡಾ. ಸಂಜಯ ಡಾಂಗೆ ಅದೃಷ್ಟ ಪರೀಕ್ಷಿಸಿಕೊಳ್ಳುತ್ತಿದ್ದಾರೆ.

ರಾಣೆಬೆನ್ನೂರಿನಲ್ಲಿ ಮರಳು ಮಾಫಿಯಾದ್ದೇ ಸದ್ದು. 1972ರಲ್ಲಿ ಮೊದಲ ಬಾರಿಗೆ ಆಯ್ಕೆಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡ, 10ನೇ ಬಾರಿ ಕಣಕ್ಕೆ ಇಳಿದಿದ್ದಾರೆ. ಕಳೆದ ಬಾರಿ ಪಕ್ಷೇತರರಾಗಿ ಕಠಿಣ ಸ್ಪರ್ಧೆ ಒಡ್ಡಿದ್ದ ಆರ್. ಶಂಕರ್ ಈಗ ಕೆಪಿಜೆಪಿ ಅಭ್ಯರ್ಥಿ. ಅವರಿಗೆ ಹಿರಿಯ ಕಾಂಗ್ರೆಸ್ಸಿಗರ ಆಶೀರ್ವಾದ ಇದೆ ಎಂಬ ಚರ್ಚೆಯೂ ಜನರ ನಡುವೆ ಜೋರಾಗಿದೆ. 16 ಆಕಾಂಕ್ಷಿಗಳನ್ನು ಮೀರಿಸಿ ಟಿಕೆಟ್ ಪಡೆದ ಬಿಜೆಪಿಯ ಡಾ. ಬಸವರಾಜ ಕೇಲಗಾರ ತ್ರಿಕೋನ ಸ್ಪರ್ಧೆಯ ಮುನ್ಸೂಚನೆ ನೀಡಿದ್ದಾರೆ. ಕೋಳಿವಾಡ ಸಂಬಂಧಿಕರಾದ ಶ್ರೀಪಾದ ಸಾವುಕಾರ್ (ಜೆಡಿಎಸ್) ಮತ್ತು ರುಕ್ಮಿಣಿ ಸಾವುಕಾರ್ (ಪಕ್ಷೇತರ) ಕಣದಲ್ಲಿದ್ದು, ಆಂತರಿಕ ಬೇಗುದಿ ಹೆಚ್ಚಿದೆ.

ಶಿಗ್ಗಾವಿ– ಸವಣೂರಿನಲ್ಲಿ ಕಳೆದ ಬಾರಿ ಯಡಿಯೂರಪ್ಪ ಅವರ ಕೆಜೆಪಿ ಅಲೆ ವಿರುದ್ಧ, ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಗೆಲ್ಲುವಲ್ಲಿ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಶ್ರಮಿಸಿದ್ದರು. ಈ ಬಾರಿ ಅವರೇ ಅಡ್ಡಗಾಲು ಹಾಕಿದ್ದು, ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಇದರಿಂದ ಪಂಚಮಸಾಲಿ ಮತ್ತು ಸಾದರ ಮತ ವಿಭಜನೆ ಸಾಧ್ಯತೆ ಅಧಿಕಗೊಂಡಿದೆ. ಜೆಡಿಎಸ್‌ನಿಂದ ಅಶೋಕ ಬೇವಿನಮರ ಕಣಕ್ಕಿಳಿದಿದ್ದಾರೆ. ಹ್ಯಾಟ್ರಿಕ್ ಸೋಲು ಕಂಡ ಕಾಂಗ್ರೆಸ್ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ, ಅನುಕಂಪ ಮತ್ತು ಪಕ್ಷದ ಸಾಂಪ್ರದಾಯಿಕ ಮತಗಳನ್ನು
ಅವಲಂಬಿಸಿದ್ದಾರೆ.

ಚುನಾವಣೆಗೆ ವರ್ಷ ಮೊದಲೇ ಜಿಲ್ಲೆಯಲ್ಲಿ ಬುರ್ಖಾ ಮತ್ತು ಕೇಸರಿ ಶಾಲು ವಿವಾದ, ಗೋಡ್ಸೆ ಪ್ರತಿಮೆ ಸ್ಥಾಪನೆ ಘೋಷಣೆ, ಗಣೇಶೋತ್ಸವದಲ್ಲಿ ಡಿ.ಜೆ ಬಳಕೆ, ಪಾಕ್ ಧ್ವಜ ವಿವಾದ, ವಾಟ್ಸ್‌ ಆ್ಯಪ್‌ ಮೂಲಕ ಸುಳ್ಳು ಸುದ್ದಿಗಳನ್ನು ಬಿತ್ತರಿಸಿದ ಪ್ರಕರಣಗಳ ಮೂಲಕ ‘ಹಿಂದುತ್ವ’ದ ಪ್ರಯೋಗಗಳು ನಡೆದಿದ್ದವು. ಆದರೆ ಅದಕ್ಕಿಂತ ಹೆಚ್ಚಾಗಿ ಕೆಜೆಪಿ ಮತ್ತು ಬಿಜೆಪಿ ಬಣಗಳ ಒಳಜಗಳ ಜೋರಾಗಿತ್ತು. ಇದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಸಮಾವೇಶಕ್ಕೆ ವೇದಿಕೆಯನ್ನೂ ಒದಗಿಸಿತ್ತು. ಬ್ರಿಗೇಡ್‌ನ ಮುಂಚೂಣಿಯಲ್ಲಿದ್ದ ಸೋಮಣ್ಣ ಬೇವಿನಮರದ ಇದೀಗ ಶಿಗ್ಗಾವಿಯಲ್ಲಿ ಪಕ್ಷೇತರ ಅಭ್ಯರ್ಥಿ.

ಹೀಗಾಗಿ, ಜಿಲ್ಲೆಯಲ್ಲಿ ಬಿಜೆಪಿಯಲ್ಲಿನ ಮುನಿಸು ಶಮನವಾಗಿದೆ ಎಂದು ತೋರಿದರೂ ಕೆಜೆಪಿ, ಬಿಜೆಪಿ ಹಾಗೂ ರಾಯಣ್ಣ ಬ್ರಿಗೇಡ್‌ ಜತೆ ಗುರುತಿಸಿಕೊಂಡ ಕಾರ್ಯಕರ್ತರು ಈಗಲೂ ಮಾನಸಿಕವಾಗಿ ಅದೇ ಬಣಗಳಲ್ಲಿ ಇದ್ದಾರೆ. ಈ ವಿದ್ಯಮಾನ, ಕೊನೇ ಗಳಿಗೆಯ ‘ಪ್ರಯತ್ನ’ ಹೊರತುಪಡಿಸಿ, ಬಿಜೆಪಿಗೆ ಮುಳ್ಳಾಗುವ ಸಾಧ್ಯತೆಯೇ ಹೆಚ್ಚು.

ಬಸವಾಭಿಮಾನಿಗಳಲ್ಲಿ ಅಸಮಾಧಾನ: ಪಟ್ಟಣಶೆಟ್ಟರ್

ಪ್ರತ್ಯೇಕ ಲಿಂಗಾಯತ ಧರ್ಮ ಕುರಿತ ಹೋರಾಟದ ತೀವ್ರತೆಯು ಬಹಿರಂಗವಾಗಿ ಗೋಚರಿಸಿದ್ದು ವಿರಳ. ಆದರೆ, ಪ್ರತ್ಯೇಕ ಧರ್ಮ ಕುರಿತ ಪ್ರಸ್ತಾವದಲ್ಲಿ ‘ಬಸವ ತತ್ವ ಒಪ್ಪುವ’ ಎಂಬ ಪದಕ್ಕೆ ವಿರೋಧ ವ್ಯಕ್ತಪಡಿಸಿದ ಸ್ವಾಮೀಜಿಗಳನ್ನು ಬೆಂಬಲಿಸಿದ ಪಕ್ಷವೊಂದರ ಬಗ್ಗೆ ಬಸವಾಭಿಮಾನಿಗಳು ಅಸಮಾಧಾನ ಹೊಂದಿದ್ದಾರೆ ಎಂದು ಜಿಲ್ಲಾ ಬಸವ ಬಳಗದ ಶಿವಯೋಗಿ ಮಾಮಲೇ ಪಟ್ಟಣಶೆಟ್ಟರ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT