‘ಗಾಜಾ’ ಚಂಡಮಾರುತಕ್ಕೆ 30ಕ್ಕೂ ಹೆಚ್ಚು ಮಂದಿ ಬಲಿ, ನೆರವಿನ ಭರವಸೆ ನೀಡಿದ ಪ್ರಧಾನಿ

7
80 ಸಾವಿರಕ್ಕೂ ಹೆಚ್ಚು ಮಂದಿ ಸ್ಥಳಾಂತರ

‘ಗಾಜಾ’ ಚಂಡಮಾರುತಕ್ಕೆ 30ಕ್ಕೂ ಹೆಚ್ಚು ಮಂದಿ ಬಲಿ, ನೆರವಿನ ಭರವಸೆ ನೀಡಿದ ಪ್ರಧಾನಿ

Published:
Updated:

ನಾಗಪಟ್ಟಣಂ (ತಮಿಳುನಾಡು): ‘ಗಾಜ’ ಚಂಡಮಾರುತವು ತಮಿಳುನಾಡನ್ನು ಶುಕ್ರವಾರ ಬೆಳಿಗ್ಗೆ ಪ್ರವೇಶಿಸಿದೆ. ಚಂಡಮಾರುತದ ತೀವ್ರತೆಗೆ ಕುಸಿದ ಮನೆಗಳು ಮತ್ತು ಉರುಳಿದ ಮರಗಳಡಿ ಸಿಲುಕಿ ಆರು ಜಿಲ್ಲೆಗಳಲ್ಲಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಭೂಭಾಗವನ್ನು ಪ್ರವೇಶಿಸುವಾಗ ಚಂಡಮಾರುತದ ತೀವ್ರತೆ ಹೆಚ್ಚಾಗಿತ್ತು. ಆದರೆ ನಂತರ ಅದರ ತೀವ್ರತೆ ಕಡಿಮೆಯಾಗಿದೆ. ಆದರೂ ಶನಿವಾರ ಮತ್ತು ಭಾನುವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ನಾಗಪಟ್ಟಣಂ ಮತ್ತು ತಾಂಜಾವೂರು ಜಿಲ್ಲೆಗಳಲ್ಲಿ ಬಾರಿ ಹಾನಿಯಾಗಿದೆ. ಇವೂ ಸೇರಿ ಒಟ್ಟು ಆರು ಜಿಲ್ಲೆಗಳಲ್ಲಿ ಚಂಡಮಾರುತದ ಪ್ರಭಾವ ಇರಲಿದೆ. ಹೀಗಾಗಿ ಆ ಪ್ರದೇಶಗಳಲ್ಲಿ ಇದ್ದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಯಾವುದೇ ರೀತಿಯ ತುರ್ತುಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿದ್ದೇವೆ ಎಂದು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ತಿಳಿಸಿದ್ದಾರೆ.

ನೆರವಿನ ಭವರಸೆ ನೀಡಿದ ಪ್ರಧಾನಿ

ಚಂಡಮಾರುತದಿಂದ ಉಂಟಾಗಿರುವ ಹಾನಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಪಳನಿಸ್ವಾಮಿ ಅವರ ಜತೆ ಮಾತನಾಡಿ ಮಾಹಿತಿ ಪಡೆದಿದ್ದು, ಎಲ್ಲಾ ಬಗೆಯ ನೆರವನ್ನು ಒದಗಿಸುವುದಾಗಿ ಅವರು ಭರವಸೆ ನೀಡಿದ್ದಾರೆ. 

ಮೃತಪಟ್ಟವರಿಗೆ ಸಂತಾಪ ಸೂಚಿಸಿರುವ ಪ್ರಧಾನಿ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಟ್ವೀಟ್‌ ಮಾಡಿದ್ದಾರೆ.

 

ತೀವ್ರವಾಗಿ ಗಾಯಗೊಂಡಿರುವವರಿಗೆ ₹ 1 ಲಕ್ಷ ಮತ್ತು ಸಣ್ಣಪುಟ್ಟ ಗಾಯಗಳಾಗಿರುವವರಿಗೆ ₹ 25,000 ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ.

* 110–120 ಕಿ.ಮೀ. ಗಾಳಿಯ ವೇಗ

* 6 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ

* 470 ನಿರಾಶ್ರಿತರ ಶಿಬಿರಗಳನ್ನು ಆರಂಭಿಸಲಾಗಿದೆ

* 405 ಆಂಬುಲೆನ್ಸ್‌ಗಳನ್ನು ಸನ್ನಧವಾಗಿ ಇರಿಸಲಾಗಿದೆ

* 81,000 ಜನರನ್ನು ನಿರಾಶ್ರಿತರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ

* ಮೃತರ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಪರಿಹಾರ ಘೋಷಣೆ

* ಪರಿಹಾರ ಒದಗಿಸುವ ಕಾರ್ಯಗಳು ಭರದಿಂದ ಸಾಗುತ್ತಿವೆ. ಜತೆಗೆ, ಮೃತಪಟ್ಟವರ ಕುಟುಂಬದವರಿಗೆ ₹10 ಲಕ್ಷ ಪರಿಹಾರ ನೀಡುವುದಾಗಿ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ತಿಳಿಸಿದ್ದಾರೆ. 


ಚಂಡಮಾರುತಕ್ಕೆ ಸಿಲುಕಿ ಮನೆಯ ಚಾವಣಿ ಹಾರಿಬಿದ್ದಿದೆ –ರಾಯಿಟರ್ಸ್ ಚಿತ್ರ

ನಾಗಪಟ್ಟಣ, ತಿರುವರೂರ್‌, ಕಡಲೂರು ಸೇರಿದಂತೆ ಏಳು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಲವು ಸ್ಥಳಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಮತ್ತು ರಾಜ್ಯ ಪಡೆಯನ್ನು ನಿಯೋಜಿಸಲಾಗಿದೆ. ಭಾರತೀಯ ಕರಾವಳಿ ಕಾವಲು ಪಡೆ ಮತ್ತು ನೌಕಾಪಡೆ ಸಹ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಳನಿಸ್ವಾಮಿಗೆ ರಾಜನಾಥ್‌ ಕರೆ:  ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರು ಗಾಜಾ ಚಂಡಮಾರುತದಿಂದ ಆಗಿರುವ ಹಾನಿ ಕುರಿತು ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ.

ಬಳಿಕ ಟ್ವೀಟ್‌ ಮಾಡಿರುವ ರಾಜನಾಥ್‌, ‘ತಮಿಳುನಾಡಿನ ಪರಿಸ್ಥಿತಿ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದ್ದಾರೆ. 

*

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !