ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಇಲಾಖೆ: ನೆನೆಗುದಿಗೆ ಬಿದ್ದಿದ್ದ 200 ಯೋಜನೆ ಲಾಕ್‌ಡೌನ್ ವೇಳೆ ಪೂರ್ಣ

Last Updated 28 ಜೂನ್ 2020, 12:33 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ಸೋಂಕು ನಿವಾರಣೆಗಾಗಿ ಲಾಕ್‌ಡೌನ್ ಜಾರಿಯಾದ ನಂತರ ದೇಶದಲ್ಲಿ ಹಲವು ಸಮಸ್ಯೆಗಳು ತಲೆದೋರಿದ್ದರೂ ರೈಲ್ವೆ ಇಲಾಖೆ ಮಾತ್ರ ಇದೇ ಸಮಯವನ್ನು ಸದುಪಯೋಗಪಡಿಸಿಕೊಂಡು ಹಲವು ಯೋಜನೆಗಳನ್ನು ಪೂರ್ಣಗೊಳಿಸಿದೆ. ರೈಲ್ವೆ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 200 ಕ್ಲಿಷ್ಟಕರ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದೆ. ಇದು ಇಲಾಖೆಯಲ್ಲಿ ರೈಲುಗಳ ರಕ್ಷಣೆ ಹಾಗೂ ವೇಗ ಹೆಚ್ಚಿಸುವಲ್ಲಿ ನೆರವಾಗಲಿದೆ ಎಂದು ರೈಲ್ವೆ ಸಚಿವ ಪಿಯುಷ್ ಗೋಯಲ್ ತಿಳಿಸಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ಪ್ರಯಾಣಿಕರ ರೈಲುಗಳನ್ನು ರದ್ದುಗೊಳಿಸಿದ್ದರೂ, ಅಗತ್ಯವಸ್ತುಗಳ ಪೂರೈಕೆ, ಪಾರ್ಸೆಲ್ ಸಾಗಾಣಿಕೆಗಾಗಿ ರೈಲುಗಳ ಸಂಚಾರ ಆರಂಭಿಸಲಾಗಿತ್ತು. ಈ ರೈಲುಗಳಿಂದಾಗಿ ಲಾಕ್‌ಡೌನ್ ಸಮಯದಲ್ಲಿ ಹಲವು ರೀತಿಯಲ್ಲಿ ಸಹಾಯವಾಗಿದೆ. ಲಾಕ್‌ಡೌನ್ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಇಲಾಖೆಯ ಅಧಿಕಾರಿಗಳು ನಿರ್ಧರಿಸಿದರು. ಈ ವೇಳೆ ಪ್ರಯಾಣಿಕರ ರೈಲು ಸಂಚರಿಸುವಾಗ ಯಾವುದೇ ಕಾರಣಕ್ಕೂ ಈ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿರಲಿಲ್ಲ. ಪ್ರಯಾಣಿಕರ ರೈಲುಗಳ ಸಂಚಾರ ರದ್ದು ಮಾಡಿದ್ದರಿಂದ ಈ ಕೆಲಸ ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ಪಿಯುಷ್ ಗೋಯಲ್ ತಿಳಿಸಿದ್ದಾರೆ.

ಪೂರ್ಣಗೊಂಡ ಕಾಮಗಾರಿಗಳಲ್ಲಿ 82 ರೈಲ್ವೆ ಸೇತುವೆಗಳ ಪುನರ್ ನಿರ್ಮಾಣ, 48 ಸಬ್‌ವೇ, ಮೇಲ್ಸೇತುವೆ, 16 ಕಾಲುದಾರಿ ಸೇತುವೆ, 14 ಕಾಲುದಾರಿ ಸೇತುವೆ ನೆಲಸಮ, 7 ಮೇಲ್ಸೇತುವೆ ನಿರ್ಮಾಣ ಪೂರ್ಣ, 5 ಪ್ಲಾಟ್ ಫಾರಂಗಳ ಮರುನಿರ್ಮಾಣ, ಒಂದು ಮಾರ್ಗ ವಿದ್ಯುತ್‌ಗೆ ಪರಿವರ್ತನೆ 26 ಇತರೆ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ.

ದಕ್ಷಿಣ ರೈಲ್ವೆ ವಿಭಾಗದಲ್ಲಿ ಚೆನ್ನೈ ವಿಭಾಗದ ಜೋಲಾರ್ ಪೇಟ್ ನಿಲ್ದಾಣದಲ್ಲಿ ಪ್ಲಾಟ್ ಫಾರಂ ಮೇಲ್ದರ್ಜೆಗೇರಿಸಲಾಗಿದೆ. ಮೇ 21ರಂದು ಈ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ಲೂದಿಯಾನ ಸಮೀಪ ಮೇಲ್ಸೇತುವೆ, ಮೈಸೂರು ವಿಭಾಗದಲ್ಲಿ ತುಂಗಾ ಸೇತುವೆ ಕಾಮಗಾರಿ, ವಾರಣಾಸಿ ವಿಭಾಗದಲ್ಲಿ ವಿದ್ಯುಚ್ಚಕ್ತಿ ಮಾರ್ಗಕ್ಕೆ ಪರಿವರ್ತನೆ, ಪ್ರಯಾಗ್ ರಾಜ್ ವಿಭಾಗದಲ್ಲಿ 16 ಕಿಲೋಮೀಟರ್ ಮಾರ್ಗ ನಿರ್ಮಾಣ ಮಾಡಿರುವುದರಿಂದ ಕಷ್ಟಕರವಾಗಿದ್ದ ಮಾರ್ಗಗಳು ಈಗ ಅಗಲವಾದ ಮಾರ್ಗಗಳಾಗಿ ನಿರ್ಮಾಣವಾಗಿವೆ. ವಾರಣಾಸಿ ವಿಭಾಗದಲ್ಲಿ ಆಜಂಘರ್ ನಿಲ್ದಾಣದಲ್ಲಿ ಸಿಗ್ನಲ್ ಉನ್ನತೀಕರಣಗೊಳಿಸಲಾಗಿದೆ. ವಿಜಯವಾಡ ವಿಭಾಗದಲ್ಲಿ ವಿಜಯವಾಡ ಮತ್ತು ಕಾಜಿಪೇಟ್ ಪ್ಲಾಟ್ ಫಾರಂನಲ್ಲಿ ಪಿಎಸ್‌ಸಿ ನಿರ್ಮಾಣ. ತಿಲಕ್‌ನಗರ ನಿಲ್ದಾಣದಲ್ಲಿ ಮರದ ಬ್ಲಾಕ್‌ಗಳನ್ನು ತೆಗೆದು ಸಿಮೆಂಟ್ ನಿರ್ಮಾಣದ ಆರ್‌ಸಿಸಿ ಬ್ಲಾಕ್‌ಗಳ ಜೋಡಣೆ. ಇದು ಮಳೆಗಾಲದಲ್ಲಿ ಅತ್ಯಂತ ಸಮಸ್ಯೆಯಿಂದ ಕೂಡಿದ್ದ ಮಾರ್ಗವಾಗಿತ್ತು. ಈಗ ಈ ಸಮಸ್ಯೆ ನಿವಾರಿಸಲಾಗಿದೆ.

ಇದಲ್ಲದೆ, ಬಿಎಚ್‌ಇಎಲ್ ಹಾಗೂ ಭಾರತೀಯ ರೈಲ್ವೆ ಇಲಾಖೆ ಜಂಟಿಯಾಗಿ ವಿದ್ಯುಚ್ಛಕ್ತಿಯಿಂದ ಸೌರಶಕ್ತಿಗೆ ಪರಿವರ್ತಿಸಲಾಗಿದೆ. ಇದಕ್ಕಾಗಿ 1.7 ಮೆಗಾವ್ಯಾಟ್ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ. ಇದು 25 ಕೆವಿ ಸಾಮರ್ಥ್ಯವಿರುವ ರೈಲ್ವೆ ಓವರ್ ಹೆಡ್ ಲೈನ್‌ಗೆ ಸೌರಶಕ್ತಿ ಸರಬರಾಜು ಮಾಡಲಿದೆ ಎಂದು ಅವರು ಪಿಯುಷ್ ಗೋಯಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT