ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಕೀದಾರನಾಗಿದ್ದರೆ ಅಸೀಮಾನಂದ ಖುಲಾಸೆ ತೀರ್ಪು ಪ್ರಶ್ನಿಸಲು ಮೋದಿಗೆ ಒವೈಸಿ ಸವಾಲು

ಹಿಂದೂ ಉಗ್ರ‘ವಾದ’ಕ್ಕೆ ಕೊನೆ ಮೊಳೆ: ಜೇಟ್ಲಿ
Last Updated 21 ಮಾರ್ಚ್ 2019, 19:36 IST
ಅಕ್ಷರ ಗಾತ್ರ

ನವದೆಹಲಿ:‘ಸಂಜೋತಾ ಸ್ಫೋಟ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವ ತೀರ್ಪು, ಹಿಂದೂ ಉಗ್ರವಾದ ಎಂಬ ಕುತ್ಸಿತ ಸಿದ್ಧಾಂತಗಳೆಂಬ ಶವಪೆಟ್ಟಿಗೆಗೆ ಹೊಡೆಯಲಾಗಿರುವ ಕೊನೆಯ ಮೊಳೆ’ ಎಂದು ಬಿಜೆಪಿ ಹಿರಿಯ ನಾಯಕ ಅರುಣ್‌ ಜೇಟ್ಲಿ ಗುರುವಾರ ಅಭಿಪ್ರಾಯಪಟ್ಟಿದ್ದಾರೆ.

‘ಹಿಂದೂ ಉಗ್ರವಾದ ಎಂಬ ಸುಳ್ಳು ಸಿದ್ಧಾಂತವನ್ನು ಕಳೆದ ಯುಪಿಎ ಸರ್ಕಾರದ ಅವಧಿಯಲ್ಲಿ ಸೃಷ್ಟಿಸಲಾಗಿತ್ತು. ಇಂತಹ ಅಪಪ್ರಚಾರಗಳಿಗೆ ಈಗ ಮುಕ್ತಿ ಸಿಕ್ಕಿದೆ’ ಎಂದು ಅವರು ಹೇಳಿದ್ದಾರೆ.

ಹರಿಯಾಣದ ಪಂಚಕುಲದಲ್ಲಿನ ವಿಶೇಷ ನ್ಯಾಯಾಲಯ, ಸಂಜೋತಾ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ ಸ್ವಾಮಿ ಅಸೀಮಾನಂದ ಹಾಗೂ ಇತರ ಮೂವರನ್ನು ಬುಧವಾರ ಖುಲಾಸೆಗೊಳಿಸಿತ್ತು. 2007ರ ಫೆಬ್ರುವರಿ 18ರಂದು ಪಾಣಿಪತ್‌ ಬಳಿ ಸಂಭವಿಸಿದ ಈ ಸ್ಫೋಟದಲ್ಲಿ 68 ಜನ ಸಾವಿಗೀಡಾಗಿದ್ದರು.

‘ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಉದ್ಯಮಿ ನೀರವ್‌ ಮೋದಿಯನ್ನು ಬುಧವಾರ ಬಂಧಿಸಲಾಗಿದೆ. ಅಲ್ಲದೆ, 2002ರ ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ ರೈಲು ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿಯನ್ನು ಅಪರಾಧಿ ಎಂದು ತೀರ್ಪು ನೀಡಲಾಗಿದೆ. ಹೀಗೆ, ಮೂರು ನಕಲಿ ಅಭಿಯಾನಗಳಿಗೆ ಒಂದೇ ದಿನ ಮುಕ್ತಿ ಸಿಕ್ಕಂತಾಗಿದೆ’ ಎಂದು ಅವರು ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

‘ಬಲವಂತದ ಮೂರು ಅಪಪ್ರಚಾರಗಳನ್ನು ಒಂದೇ ದಿನದಲ್ಲಿ ಕೊನೆಗಾಣಿಸಿದ್ದೇವೆ’ ಎಂದು ಅವರು ಹೇಳಿಕೊಂಡಿದ್ದಾರೆ.

‘ಹಿಂದೂ ಉಗ್ರವಾದ ಎನ್ನುವುದು ಭಾರತದ ಬಹುಸಂಖ್ಯಾತ ಸಮುದಾಯಕ್ಕೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಮಾಡಿದ್ದ ಪಿತೂರಿ. ಭಯೋತ್ಪಾದನೆ ವಿಷಯದಲ್ಲಿಯೂ ಹಿಂದೂಗಳಿಗೆ ಸಮಾನತೆ ನೀಡುವ ಕುತಂತ್ರ ನಡೆಯಿತು. ಆದರೆ, ಹಿಂದೂ ಸಂಸ್ಕೃತಿಗೆ ಭಯೋತ್ಪಾದನೆ ಎನ್ನುವುದು ಬಹುದೂರದ ವಿಷಯ’ ಎಂದು ಅವರು ಹೇಳಿದ್ದಾರೆ.

‘ಭಾರತ ಸರ್ಕಾರವು ನೀರವ್‌ ಮೋದಿ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದು ಅಪಪ್ರಚಾರ ಮಾಡಲಾಯಿತು. ಆದರೆ, ಭಾರತ ಹಾಗೂ ಭಾರತದ ಸಂಸ್ಥೆಗಳಿಗೆ ವಂಚಿಸುವ ಯಾರನ್ನೇ ಆದರೂ ನಾವು ಬಿಡುವುದಿಲ್ಲ ಎಂಬುದಾಗಿ ದೇಶಕ್ಕೆ ಮತ್ತೊಮ್ಮೆ ಹೇಳಲು ಬಯಸುತ್ತೇನೆ’ ಎಂದರು.

‘ಇಂತಹ ಅಪಪ್ರಚಾರಗಳ ವಿರುದ್ಧ ಮುಂದಿನ ಚುನಾವಣೆಯಲ್ಲಿ ಜನರೇ ತೀರ್ಪು ನೀಡುತ್ತಾರೆ’ ಎಂದು ಬಿಜೆಪಿಯ ಪ್ರಚಾರ ಸಮಿತಿಯ ಅಧ್ಯಕ್ಷರೂ ಆಗಿರುವ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಚೌಕೀದಾರನಾಗಿದ್ದರೆ ಖುಲಾಸೆ ತೀರ್ಪು ಪ್ರಶ್ನಿಸಿ’

ಹೈದರಾಬಾದ್‌: ‘ನೀವು ನಿಜಕ್ಕೂ ಚೌಕೀದಾರನಾಗಿದ್ದರೆ, ಸಂಜೋತಾ ಸ್ಫೋಟ ಪ್ರಕರಣದಲ್ಲಿ ಸ್ವಾಮಿ ಅಸೀಮಾನಂದರನ್ನು ಖುಲಾಸೆಗೊಳಿಸಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ’ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್‌ ಒವೈಸಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲು ಹಾಕಿದ್ದಾರೆ.

‘ಮೈ ಭೀ ಚೌಕೀದಾರ್‌’ ಅಭಿಯಾನದ ವಿರುದ್ಧ ಇಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿರುವ ಒವೈಸಿ, ‘ನೀವೆಂಥಾ ಚೌಕೀದಾರ? ಸಂಜೋತಾ ಸ್ಫೋಟ ಪ್ರಕರಣದಲ್ಲಿ ಸಾವಿಗೀಡಾದವರ ಪೈಕಿ 25 ಭಾರತೀಯರೂ ಇದ್ದಾರೆ. ಬಾಂಬ್‌ ಸ್ಫೋಟ ಉಗ್ರರ ಕೃತ್ಯ. ನೀವು ನಿಜಕ್ಕೂ ಚೌಕೀದಾರನಾಗಿದ್ದಾರೆ, ನ್ಯಾಯಾಲಯದ ತೀರ್ಪಿನ ವಿರುದ್ಧ ಸರ್ಕಾರವು ತಕ್ಷಣ ಮೇಲ್ಮನವಿ ಸಲ್ಲಿಸುತ್ತದೆ ಎಂಬುದಾಗಿ ಘೋಷಿಸಿ’ ಎಂದು ಹೇಳಿದರು.

‘ಈ ದೇಶಕ್ಕೆ ಚೌಕೀದಾರನ ಅಗತ್ಯವಿಲ್ಲ. ಪ್ರಾಮಾಣಿಕ ಪ್ರಧಾನಿಯ ಅವಶ್ಯಕತೆಯಿದೆ’ ಎಂದು ಒವೈಸಿ ಹೇಳಿದರು.

‘68 ಮಂದಿಯನ್ನು ಕೊಂದವರು ಯಾರು?’

‘ಸಂಜೋತಾ ಎಕ್ಸ್‌ಪ್ರೆಸ್‌ ರೈಲು ಸ್ಫೋಟದಲ್ಲಿ 68 ಜನರನ್ನು ಕೊಂದವರು ಯಾರು?’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಕಪಿಲ್‌ ಸಿಬಲ್‌ ಪ್ರಶ್ನಿಸಿದ್ದಾರೆ.

ಪ್ರಕರಣದ ಆರೋಪಿಗಳಾದ ಸ್ವಾಮಿ ಅಸೀಮಾನಂದ ಹಾಗೂ ಇತರ ಮೂವರನ್ನು ಖುಲಾಸೆಗೊಳಿಸಿರುವುದಕ್ಕೆ ಅವರು ಈ ರೀತಿ ವ್ಯಂಗ್ಯವಾಡಿದ್ದಾರೆ.

‘ಸ್ಫೋಟದಲ್ಲಿ ಅಷ್ಟು ಜನ ಅಸುನೀಗಿದರೂ ಇದಕ್ಕೆ ಕಾರಣ ಯಾರು ಎಂಬುದು ತಿಳಿಯಲಿಲ್ಲ. ನಮ್ಮ ನ್ಯಾಯವ್ಯವಸ್ಥೆಯಲ್ಲಿ ಇದೊಂದು ಹೆಮ್ಮೆಯ ದಿನ’ ಎಂದು ಟ್ವೀಟ್‌ನಲ್ಲಿ ಅಪಹಾಸ್ಯ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT