ಸೋಮವಾರ, ಡಿಸೆಂಬರ್ 9, 2019
17 °C
ಸೇನಾವಲಯ ಟಾರ್ಗೆಟ್‌

ಗಡಿಯ ಬಳಿ 24 ಪಾಕಿಸ್ತಾನದ ಜೆಟ್‌ಗಳು; ಹಿಮ್ಮೆಟ್ಟಿಸಿದವು ಭಾರತದ 8 ಫೈಟರ್‌ಗಳು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಬುಧವಾರ ಬೆಳಿಗ್ಗೆ ಭಾರತದ ವಾಯು ವಲಯ ದಾಟಿ ಸೇನಾ ವಲಯಗಳ ಮೇಲೆ ದಾಳಿ ನಡೆಸಲು ಮುನ್ನುಗ್ಗಿದ್ದು ಪಾಕಿಸ್ತಾನದ 24 ಯುದ್ಧ ವಿಮಾನಗಳು. ಕೆಲವೇ ಕ್ಷಣಗಳಲ್ಲಿ ಭಾರತ ವಾಯುಪಡೆಯ ಯುದ್ಧವಿಮಾನಗಳು ದೃಢ ಹೋರಾಟದ ಮೂಲಕ ಪಾಕಿಸ್ತಾನದ ಯುದ್ಧವಿಮಾನಗಳನ್ನು ಹಿಮ್ಮೆಟ್ಟಿಸಿ ಪಾರಮ್ಯ ಮೆರೆದವು. ಇದೇ ಕದನದಲ್ಲಿ ವಿಂಗ್‌ ಕಮಾಂಡರ್‌ ಅಭಿನಂದನ್‌ ಚಲಾಯಿಸುತ್ತಿದ್ದ ಮಿಗ್‌ 21, ಪಾಕಿಸ್ತಾನದ ಎಫ್‌–16 ಜೆಟ್‌ನ್ನು ಹೊಡೆದುರುಳಿಸಿದೆ. ಇದೇ ಕಾರ್ಯಾಚರಣೆಯಲ್ಲಿ ಪ್ಯಾರಾಚೂಟ್‌ ಬಳಸಿ ಜಿಗಿದ ಪೈಲಟ್‌ ಅಭಿನಂದನ್‌ ಅವರನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆದಿದೆ. 

ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ತಾನದ 24 ಜೆಟ್‌ಗಳಿಗೆ ಭಾರತದ 8 ಯುದ್ಧ ವಿಮಾನಗಳು ಸವಾಲೊಡ್ಡಿದ ಅಪ್ರತಿಮ ವೈಮಾನಿಕ ಕದನ ಬುಧವಾರ ನಡೆದಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.


ಮಿಗ್‌ 21 ಯುದ್ಧ ವಿಮಾನ

ಪಾಕಿಸ್ತಾನದ ಎಂಟು ಎಫ್‌–16 ಯುದ್ಧ ವಿಮಾನ, ನಾಲ್ಕು ಮಿರಾಜ್‌–3 ವಿಮಾನ ಹಾಗೂ ಚೀನಾ ನಿರ್ಮಿತ ಜೆಎಫ್‌–17 ’ಥಂಡರ್‌’ ನಾಲ್ಕು ಫೈಟರ್‌ಗಳು ದಾಳಿ ನಡೆಸಲು ಪ್ರಯತ್ನಿಸಿದವು. ಇನ್ನೂ ಎಂಟು ವಿಮಾನಗಳು ಭಾರತ ವಾಯುಪಡೆಯ ದಾಳಿಯಿಂದ ಜೆಟ್‌ಗಳನ್ನು ರಕ್ಷಿಸಲು ಯೋಜಿತ ರೀತಿಯ ಫಾರ್ಮೇಷನ್‌ ಮೂಲಕ ಗಡಿ ನಿಯಂತ್ರಣ ರೇಖೆ ಸಮೀಪಿಸಿದ್ದವು. ಪಾಕಿಸ್ತಾನದ ಹತ್ತಾರು ಯುದ್ಧ ವಿಮಾನಗಳು ಮುನ್ನುಗ್ಗುತ್ತಿರುವುದು ಗಡಿ ನಿಯಂತ್ರಣ ರೇಖೆಗೆ 10 ಕಿ.ಮೀ ದೂರದಲ್ಲಿರುವಂತೆ ಬೆಳಿಗ್ಗೆ 9:45ಕ್ಕೆ ಭಾರತದ ‍‍ಪಡೆಗಳು ಪತ್ತೆ ಮಾಡಿವೆ. 

ಪಾಕಿಸ್ತಾನದ 24 ವಿಮಾನಗಳ ಪೈಕಿ ಕೆಲವು ಯುದ್ಧ ವಿಮಾನಗಳು ಭಾರತದ ಗಡಿ ಪ್ರವೇಶಿಸಲು ಮುಂದಾಗುತ್ತಿದ್ದಂತೆ ಭಾರತ ವಾಯು ಪಡೆಯ ಎಂಟು ಯುದ್ಧ ವಿಮಾನಗಳು ಎದುರುಗೊಂಡಿವೆ. ನಾಲ್ಕು ಸುಖೋಯ್‌ 30ಎಸ್‌, ಎರಡು ಮಿರಾಜ್‌ 2000ಎಸ್‌ ಹಾಗೂ ಎರಡು ಮಿಗ್‌ 21 ಯುದ್ಧ ವಿಮಾನಗಳು ಪಾಕಿಸ್ತಾನದ ವಿಮಾನಗಳನ್ನು ಹಿಮ್ಮೆಟ್ಟಿಸಿದವು. ಗಡಿ ಭಾಗದಲ್ಲಿನ ಸೇನಾ ವಲಯಗಳನ್ನು ಗುರಿಯಾಗಿಸಿಕೊಂಡಿದ್ದ ಪಾಕಿಸ್ತಾನ ಯುದ್ಧ ವಿಮಾನಗಳು ಲೇಸರ್‌ ಸೂಚಿತ ಬಾಂಬ್‌ಗಳನ್ನು ಎಸೆದು ಪರಾರಿಯಾಗಲು ಪ್ರಯತ್ನಿಸಿದವು. ಭಾರತದ ವಿಮಾನಗಳು ಎರಗಲು ಬಂದಿದ್ದರಿಂದ ಅವುಗಳ ಗುರಿ ತಪ್ಪಿದವು. 


ಪೈಲಟ್‌ ಅಭಿನಂದನ್‌

ಭಾರತ ವಾಯುಪಡೆ ವಿಮಾನಗಳಿಗಿಂತಲೂ ಮೂರು ಪಟ್ಟು ಹೆಚ್ಚು ವಿಮಾನಗಳನ್ನು ಒಳಗೊಂಡ ಪಾಕಿಸ್ತಾನದ ರಚನೆಗೆ ಜಗ್ಗದೆ, ವಿಂಗ್‌ ಕಮಾಂಡರ್‌ ಅಭಿನಂದನ್‌ ಅರ್ಥಮಾನ್‌ ಆರ್‌–73 ಕ್ಷಿಪಣಿಯನ್ನು ಪ್ರಯೋಗಿಸಿದರು. ಪಾಕಿಸ್ತಾನದ ಎಫ್‌–16 ಯುದ್ಧ ವಿಮಾನವೊಂದು ಎರಡು ಕ್ಷಿಪಣಿಗಳನ್ನು ಅಭಿನಂದನ್‌ ಇದ್ದ ಮಿಗ್‌–21 ವಿಮಾನಕ್ಕೆ ತೂರಿಬಿಟ್ಟಿದು, ಒಂದು ಕ್ಷಿಪಣಿ ಎಎಂಆರ್‌ಎಎಎಂ(ಅಡ್ವಾನ್ಸ್ಡ್‌ ಮೀಡಿಯಂ ರೇಂಜ್‌ ಏರ್‌–ಟು–ಏರ್‌ ಮಿಸೈಲ್‌) ಬಡಿಯಿತು. ಇದರಿಂದಾಗಿ ವಿಂಗ್‌ ಕಮಾಂಡರ್‌ ಅನಿವಾರ್ಯವಾಗಿ ವಿಮಾನದಿಂದ ಜಿಗಿಯಬೇಕಾಯಿತು. ಪ್ಯಾರಾಚೂಟ್‌ನಲ್ಲಿ ಹಾರುತ್ತ ಅಭಿನಂದನ್‌ ಗಡಿ ನಿಯಂತ್ರಣ ರೇಖೆಯ ಪಾಕಿಸ್ತಾನದ ಭಾಗದಲ್ಲಿ ಬಿದ್ದರು. 

ಬುಧವಾರ ಪಾಕಿಸ್ತಾನ ಸೇನೆ ಅವರ ಕಣ್ಣು ಹಾಗೂ ಕೈಗಳನ್ನು ಕಟ್ಟಿ ವಿಚಾರಣೆಗೆ ಒಳಪಡಿಸಿರುವುದು ವಿಡಿಯೊದಲ್ಲಿ ಕಂಡು ಬಂದಿತ್ತು. ಕೈದಿಗಳ ಬಗೆಗಿನ ಜಿನೆವಾ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಭಾರತ ಸರ್ಕಾರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ, ಅವರಿಗೆ ಚಿಕಿತ್ಸೆ ನೀಡಿ, ಕಣ್ಣು ಹಾಗೂ ಕೈಗಳಿಗೆ ಬಟ್ಟೆ ತೆಗೆದು ಚಹಾ ನೀಡಿ ಮತ್ತೊಂದು ವಿಡಿಯೊ ಅನ್ನು ಪಾಕಿಸ್ತಾನ ಹರಿಯಬಿಟ್ಟಿತ್ತು. 

ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು ಶುಕ್ರವಾರ ಭಾರತಕ್ಕೆ ಮರಳಿ ಕಳಿಹಿಸುವುದಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಗುರುವಾರ ಘೋಷಿಸಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು