ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಧಕ್ಕರ್ದ ಹಾಲಿ ಸದಸ್ಯರಿಗೆ ಕೊಕ್‌

ಎರಡನೇ ಹಂತದ ಮತದಾನ: 97 ಕ್ಷೇತ್ರಗಳಲ್ಲಿ ಚುನಾವಣೆ: 44 ಸಂಸದರಿಗಷ್ಟೇ ಟಿಕೆಟ್‌
Last Updated 12 ಏಪ್ರಿಲ್ 2019, 19:36 IST
ಅಕ್ಷರ ಗಾತ್ರ

ನವದೆಹಲಿ: ಇದೇ 18ರಂದು ಲೋಕಸಭೆಯ 97 ಸ್ಥಾನಗಳಿಗೆ ನಡೆಯಲಿರುವ ಎರಡನೇ ಹಂತದ ಚುನಾವಣೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಹಾಲಿ ಸಂಸತ್‌ ಸದಸ್ಯರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಇವರಲ್ಲಿ ಎಐಎಡಿಎಂಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹಾಲಿ ಸದಸ್ಯರನ್ನು ಕೈಬಿಟ್ಟಿದೆ.

ಹಾಲಿ 97 ಸಂಸತ್‌ ಸದಸ್ಯರಲ್ಲಿ 44 ಮಂದಿ ಮಾತ್ರ ಮತ್ತೆ ಕಣಕ್ಕಿಳಿಯುವ ಅವಕಾಶ ಪಡೆದಿದ್ದಾರೆ. ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ.ದೇವೇಗೌಡ (ತುಮ
ಕೂರು), ಹಿರಿಯ ಕಾಂಗ್ರೆಸ್‌ ನಾಯಕ ಎಂ.ವೀರಪ್ಪ ಮೊಯಿಲಿ (ಚಿಕ್ಕಬಳ್ಳಾಪುರ), ನ್ಯಾಷನಲ್‌ ಕಾನ್ಫರೆನ್ಸ್‌ ಸ್ಥಾಪಕ ಫಾರೂಕ್‌ ಅಬ್ದುಲ್ಲಾ (ಶ್ರೀನಗರ), ಲೋಕಸಭೆ ಉಪಸಭಾಧ್ಯಕ್ಷ ತಂಬಿದೊರೈ (ತಮಿಳುನಾಡಿನ ಕರೂರು) ಇವರಲ್ಲಿ ಪ್ರಮುಖರು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್‌ ಚವಾಣ್‌, ಮಾಜಿ ಬಾಲಿ
ವುಡ್‌ ನಟಿ, ಬಿಜೆಪಿಯ ಹೇಮಾಮಾಲಿನಿ, ಶೋಭಾ ಕರಂದ್ಲಾಜೆ, ಕಾಂಗ್ರೆಸ್‌ನ ತಾರೀಖ್‌ ಅನ್ವರ್‌, ಪಿ.ಎಂ.ಕೆ.ಯ ಅನ್ಬುಮಣಿ ರಾಮದಾಸ್‌ ಕಣದಲ್ಲಿರುವ ಇತರ ಪ್ರಮುಖ ಸಂಸದರು.

ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ 97 ಕ್ಷೇತ್ರಗಳಲ್ಲಿ 37ರಲ್ಲಿ ಎಐಎಡಿಎಂಕೆ ಸದಸ್ಯರಿದ್ದರು. ಆದರೆ ಆ ಪಕ್ಷವು 33 ಹಾಲಿ ಸಂಸದರನ್ನು ಕೈಬಿಟ್ಟು ಹೊಸಮುಖಗಳಿಗೆ ಅವಕಾಶ ನೀಡಿದೆ. 28 ಹಾಲಿ ಸದಸ್ಯರ ಪೈಕಿ 15 ಮಂದಿಯನ್ನು ಮಾತ್ರಬಿಜೆಪಿ ಕಣಕ್ಕಿಳಿಸಿದೆ. ಏ. 11ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ 91 ಹಾಲಿ ಸದಸ್ಯರ ಪೈಕಿ 53 ಮಂದಿ ಮಾತ್ರ ಅವಕಾಶ ಪಡೆದಿದ್ದರು.

12 ರಾಜ್ಯಗಳ ಲೋಕಸಭಾ ಕ್ಷೇತ್ರಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶವು ಎರಡನೇ ಹಂತದಲ್ಲಿ ಚುನಾವಣೆ ಎದುರಿಸಲಿವೆ. ಉತ್ತರ ಪ್ರದೇಶದಪಶ್ಚಿಮ ಭಾಗದ ಎಂಟು ಸ್ಥಾನಗಳ ಮೇಲೆ ಎಲ್ಲರ ಗಮನವಿದೆ. ಇಲ್ಲಿ ಎಸ್‌ಪಿ–ಬಿಎಸ್‌ಪಿ– ಆರ್‌ಎಲ್‌ಡಿ ಮೈತ್ರಿಕೂಟದ ಅಭ್ಯರ್ಥಿಗಳಿಂದಬಿಜೆಪಿಗೆ ಕಠಿಣ ಸ್ಪರ್ಧೆ ಎದು ರಾಗಿದೆ. ಕಳೆದ ಚುನಾವಣೆಯಲ್ಲಿ ಎಂಟೂ ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಕಳೆದ ತಿಂಗಳು ಬಿಎಸ್‌ಪಿಗೆ ಸೇರಿದ್ದ ಜೆಡಿಎಸ್‌ನ ಮಾಜಿ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಶ್‌ ಅಲಿ, ಅಮ್ರೋಹಾದಿಂದ ಕಣಕ್ಕಿಳಿದರೆ, ಹೇಮಾಮಾಲಿನಿ ಮಥುರಾದಿಂದ ಪುನರಾಯ್ಕೆ ಬಯಸಿದ್ದಾರೆ.

ತಮಿಳುನಾಡಿನ ಎಲ್ಲ ಕ್ಷೇತ್ರಗಳಿಗೆ ಏಪ್ರಿಲ್‌ 18ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಎಐಎಡಿಎಂಕೆ–ಬಿಜೆಪಿ– ಪಿಎಂಕೆ ಮೈತ್ರಿಕೂಟಕ್ಕೆ, ಡಿಎಂಕೆ–ಕಾಂಗ್ರೆಸ್‌–ಎಡಪಕ್ಷಗಳ ಮೈತ್ರಿಕೂಟದಿಂದ ಸವಾಲು ಎದುರಾಗಿದೆ. ಟಿಟಿವಿ ದಿನಕರನ್‌ ಎಐಎಡಿಎಂಕೆಯಿಂದ ಹೊರಬಂದು ಪ್ರತ್ಯೇಕ ಬಣ ರಚಿಸಿಕೊಂಡಿದ್ದಾರೆ. ಹಾಗಾಗಿ, ಎಐಎಡಿಎಂಕೆ ಮೊದಲಿಗಿಂತ ದುರ್ಬಲವಾಗಿದ್ದು, ಡಿಎಂಕೆ ಮೈತ್ರಿಕೂಟಕ್ಕೆ ಲಾಭವಾಗುವ ನಿರೀಕ್ಷೆಯಿದೆ ಎಂಬ ಅಂದಾಜಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT