ಮೂರನೇ ದಿನವೂ ನಡೆಯದ ಕಲಾಪ

7
ಸಂಸತ್‌ನ ಚಳಿಗಾಲದ ಅಧಿವೇಶನ

ಮೂರನೇ ದಿನವೂ ನಡೆಯದ ಕಲಾಪ

Published:
Updated:

ನವದೆಹಲಿ: ವಿರೋಧ ಪಕ್ಷಗಳ ಪ್ರತಿಭಟನೆಯ ಕಾರಣ ಸಂಸತ್‌ನ ಚಳಿಗಾಲದ ಅಧಿವೇಶನದ ಮೂರನೇ ದಿನವಾದ ಗುರುವಾರವೂ ಲೋಕಸಭೆಯ ಕಲಾಪ ನಡೆಯಲಿಲ್ಲ.

ರಫೇಲ್‌ ಯುದ್ಧ ವಿಮಾನಗಳ ಖರೀದಿ ಒಪ್ಪಂದದ ಕುರಿತ ಸಮಗ್ರ ಚರ್ಚೆಗೆ ಆಗ್ರಹಿಸಿ ಕಾಂಗ್ರೆಸ್‌, ಕಾವೇರಿ ಜಲವಿವಾದ ಕುರಿತು ಚರ್ಚಿಸುವಂತೆ ಎಐಎಡಿಎಂಕೆ ಹಾಗೂ ರಾಜ್ಯ ಪುನರ್‌ ವಿಂಗಡಣೆ ಕಾಯ್ದೆ ಅಡಿ ಅನುದಾನ ಕೋರಿ ತೆಲುಗು ದೇಶಂ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು.

ರಾಮಮಂದಿರ ನಿರ್ಮಾಣ ಕುರಿತು ಕಾಯ್ದೆ ರೂಪಿಸುವಂತೆ ಕೋರಿ ಎನ್‌ಡಿಎ ಮಿತ್ರ ಪಕ್ಷವಾದ ಶಿವಸೇನೆಯ ಸದಸ್ಯರು ಘೋಷಣೆ ಕೂಗಿದ್ದರಿಂದ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

ಪ್ರಶ್ನೋತ್ತರ ಕಲಾಪದ ಆರಂಭಕ್ಕೇ ವಿಪಕ್ಷಗಳ ಸದಸ್ಯರು ಸ್ಪೀಕರ್‌ ಎದುರಿನ ಜಾಗಕ್ಕೆ ಬಂದು ಪ್ರತಿಭಟನೆ ನಡೆಸಿದರು. ‘ಪ್ರಸಕ್ತ ಲೋಕಸಭೆಯ ಅವಧಿ ಮುಕ್ತಾಯ ಹಂತದಲ್ಲಿದ್ದು, ಸಾರ್ವಜನಿಕರ ಸಮಸ್ಯೆಗಳ ಚರ್ಚೆಗೆ ಸಹಕಾರಿಸಬೇಕು ಎಂದು ಮನವಿ ಮಾಡಿದ ಸ್ಪೀಕರ್‌ ಸುಮಿತ್ರಾ ಮಹಾಜನ್‌, ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರು.

ಅಂಬರೀಷ್‌ಗೆ ಶ್ರದ್ಧಾಂಜಲಿ: ಕಳೆದ ನವೆಬರ್‌ 24ರಂದು ನಿಧನರಾದ ಚಿತ್ರನಟ, ಕೇಂದ್ರದ ಮಾಜಿ ಸಚಿವ ಎಂ.ಎಚ್‌. ಅಂಬರೀಷ್‌ ಅವರ ರಾಜಕೀಯ ಮತ್ತು ಕಲಾ ಸೇವೆಯನ್ನು ಸ್ಪೀಕರ್‌ ಸ್ಮರಿಸಿದರು. ಎಲ್ಲ ಸದಸ್ಯರು ಅಂಬರೀಷ್‌ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಿದರು.

ರಾಘವೇಂದ್ರ ಪ್ರಮಾಣ: ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾಗಿರುವ ಬಿ.ವೈ. ರಾಘವೇಂದ್ರ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.

ರಾಘವೇಂದ್ರ ಅವರು 2009ರಿಂದ 2014ರವರೆಗೆ ಇದೇ ಕ್ಷೇತ್ರದಿಂದ ಆಯ್ಕೆಯಾಗಿ ಸಂಸದರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !