ಶುಕ್ರವಾರ, ಫೆಬ್ರವರಿ 26, 2021
27 °C

ಸಂಸದರು, ಶಾಸಕರ ವಿರುದ್ಧದ 4,122 ಪ್ರಕರಣಗಳ ವಿಚಾರಣೆ ಬಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮಾಜಿ, ಹಾಲಿ ಶಾಸಕರು ಹಾಗೂ ಸಂಸದರುಗಳಿಗೆ ಸಂಬಂಧಿಸಿದ ಒಟ್ಟು 4,122 ಪ್ರಕರಣಗಳ ವಿಚಾರಣೆ ದೇಶದಾದ್ಯಂತ ಬಾಕಿ ಉಳಿದಿವೆ ಎಂಬ ವಿವರಗಳನ್ನೊಳಗೊಂಡ ವರದಿಯು ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿದೆ. ಒಂದು ವರ್ಷದೊಳಗಾಗಿ ಈ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸುವಂತೆ ಸುಪ್ರಿಂ ನೀಡಿದ್ದ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

‘ಒಟ್ಟು ಪ್ರಕರಣಗಳಲ್ಲಿ 2,324 ಪ್ರಕರಣಗಳು ಹಾಲಿ ಶಾಸಕರು ಹಾಗು ಸಂಸದರ ವಿರುದ್ಧದವುಗಳಾಗಿವೆ. ಆಚ್ಚರಿಯ ಸಂಗತಿಯೆಂದರೆ ಕೆಲ ಪ್ರಕರಣಗಳು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಇತ್ಯರ್ಥವಾಗದೇ ಉಳಿದಿವೆ’ ಎಂದು ಹಿರಿಯ ವಕೀಲ ವಿಜಯ್‌ ಹನ್ಸಾರಿಯಾ ಅವರು ಸಲ್ಲಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಉನ್ನತ ನ್ಯಾಯಾಲಯಗಳಲ್ಲಿ ತಡೆ ನೀಡಲಾಗಿರುವುದು ವಿಚಾರಣೆ ವಿಳಂಬವಾಗಲು ಕಾರಣ ಎನ್ನಲಾಗಿದೆ.

ಉತ್ತರ ಪ್ರದೇಶದ ಹಾಲಿ ಹಾಗೂ ಮಾಜಿ ಶಾಸಕರ ವಿರುದ್ಧ ಒಟ್ಟು 992 ಪ್ರಕರಣಗಳು ಬಾಕಿಯಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಒರಿಶಾ, ತಮಿಳುನಾಡು, ಕೇರಳ, ಬಿಹಾರ, ಮಹಾರಾಷ್ಟ್ರ ರಾಜ್ಯಗಳು ನಂತರದ ಸ್ಥಾನಗಳಲ್ಲಿದ್ದು, ಕ್ರಮವಾಗಿ 331, 321, 312, 304, 303 ಪ್ರಕರಣಗಳು ಬಾಕಿ ಇವೆ. ಇದೇ ಮಾದರಿಯ 161 ಪ್ರಕರಣಗಳು ಕರ್ನಾಟಕದಲ್ಲಿ ದಾಖಲಾಗಿವೆ. ಅದರಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ ಸಂಸದರ ವಿರುದ್ಧ 2 ಮತ್ತು ಶಾಸಕರ ವಿರುದ್ಧ 95 ಪ್ರಕರಣಗಳು ಸೇರಿವೆ.

ಜೀವಾವಧಿ ಶಿಕ್ಷೆಗೆ ಒಳಪಡುವಂತಹ ಗಂಭೀರ ಪ್ರಮಾಣದ ಅಪರಾಧಗಳಲ್ಲಿ ಭಾಗಿಯಾಗಿರುವ ಶಾಸಕರು, ಸಂಸದರಿಗೆ ಶಿಕ್ಷೆ ಜಾರಿ ಮಾಡಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ಅಮಿಕಸ್‌ ಕ್ಯೂರಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ) ಸಲಹೆ ನೀಡಿದ್ದರು.

ವಕೀಲ ಹಾಗೂ ಬಿಜೆಪಿ ನಾಯಕ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ, ಹನ್ಸಾರಿಯಾ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಿಸಿತ್ತು. ಅವರು ಶಾಸಕರು, ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಂತೆ ತಿಳಿಸಿದ್ದರು.

ದೇಶದ ಎಲ್ಲ ರಾಜ್ಯಗಳ ಹೈಕೋರ್ಟ್‌ಗಳಿಂದ ಮಾಹಿತಿ ಪಡೆದು ವರದಿ ತಯಾರಿಸಿರುವ ಅಮಿಕಸ್‌ ಕ್ಯೂರಿ ದೇಶದ ಒಟ್ಟು 724 ಜಿಲ್ಲೆಗಳ ಪೈಕಿ 440 ಜಿಲ್ಲೆಗಳಲ್ಲಿ ಪ್ರಕರಣಗಳು ಬಾಕಿ ಉಳಿದಿರುವುದನ್ನು ಉಲ್ಲೇಖಸಿದ್ದಾರೆ.

‘ಹಾಲಿ ಹಾಗೂ ಮಾಜಿ ಶಾಸಕರು, ಸಂಸದರ ವಿರುದ್ಧದ ಪ್ರಕರಣಗಳ ಸಂಖ್ಯೆ ಹಾಗೂ ಅಪರಾಧಗಳ ಪ್ರಮಾಣ ಒಂದೇ ಆಗಿಲ್ಲ. ಕೆಲವರ ವಿರುದ್ಧ ಒಂದೇ ರೀತಿಯ ಹಲವು ಪ್ರಕರಣಗಳು ದಾಖಲಾಗಿವೆ. ಶಾಸಕರು, ಸಂಸದರ ವಿರುದ್ಧದ ಪ್ರಕರಣಗಳು ದಾಖಲಾದ ನಂತರ ಒಂದು ವರ್ಷದ ಒಳಗಾಗಿ ವಿಚಾರಣೆಯನ್ನು ಪೂರ್ಣಗೊಳಿಸುವಂತೆ ಮಾರ್ಚ್‌ 10, 2014ರಂದು ಸುಪ್ರೀಂ ತೀರ್ಪು ನೀಡಿತ್ತು. ಆ ಸಂಬಂಧ ಹೈಕೋರ್ಟ್‌ಗಳಿಂದ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ’ ಎಂದು ದೂರಿದ್ದಾರೆ.

12 ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆಯಾದರೂ ಬಾಕಿ ಉಳಿದುಕೊಂಡಿರುವ ಪ್ರಕರಣಗಳ ಆಧಾರದಲ್ಲಿ ಅವುಗಳನ್ನು ಏಕರೂಪವಾಗಿ ಸ್ಥಾಪಿಸಲ್ಪಟ್ಟಿಲ್ಲ. ಮಧ್ಯಂತರ ತಡೆ ನೀಡಲಾಗಿರುವ ಪ್ರಕರಣಗಳ ವಿಚಾರಣೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವಂತೆ ಹೈಕೋರ್ಟ್‌ಗಳಿಗೆ ನಿರ್ದೇಶಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು